ಐಟಿ ದಾಳಿ: ಕರ್ನಾಟಕ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ 94 ಕೋಟಿ ರೂ.ನಗದು, 8 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಚಿನ್ನ ಜಪ್ತಿ

Photo: twitter.com/BasanagoudaBJP
ಬೆಂಗಳೂರು: ಕರ್ನಾಟಕ, ಹೊಸದಿಲ್ಲಿ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ಇತ್ತೀಚಿಗೆ ನಡೆದ ದಾಳಿ ಸಂದರ್ಭದಲ್ಲಿ 94 ಕೋಟಿ ರೂಪಾಯಿ ನಗದು, 8 ಕೋಟಿ ರೂ. ಮೌಲ್ಯದ ಚಿನ್ನಾಭರಣ ಹಾಗೂ ವಜ್ರ ಆಭರಣ ಸೇರಿದಂತೆ ಇನ್ನಿತರೆ ಕೋಟ್ಯಾಂತರ ರೂಪಾಯಿ ಮಾಲು ಜಪ್ತಿ ಮಾಡಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕೃತವಾಗಿ ಪ್ರಕಟಿಸಿದೆ.
ಸೋಮವಾರ ಈ ಕುರಿತು ಪ್ರಕಟನೆ ಬಿಡುಗಡೆ ಮಾಡಿರುವ ಐಟಿ ಅಧಿಕಾರಿಗಳು, ‘ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಸರಕಾರಿ ಗುತ್ತಿಗೆದಾರರು ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಗಳ ನಿವಾಸ, ಕಚೇರಿಗಳ ಮೇಲೆ ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ನೂರಾರು ಕೋಟಿ ರೂಪಾಯಿ ತೆರಿಗೆ ವಂಚನೆ ಪತ್ತೆಯಾಗಿದೆ’ ಎಂದು ತಿಳಿಸಿದ್ದಾರೆ.
ಸರಿ ಸುಮಾರು 55 ಕಡೆಗಳಲ್ಲಿ ಐಟಿ ಶೋಧ ನಡೆಸಿದಾಗ 94 ಕೋಟಿ ರೂ.ನಗದು, 8 ಕೋಟಿ ರೂ. ಮೌಲ್ಯದ ಚಿನ್ನಾಭರಣ ಹಾಗೂ ವಜ್ರ ಆಭರಣ, ದುಬಾರಿ ಬೆಲೆಯ 30 ವಾಚ್ಗಳು ದೊರೆತಿವೆ. ಸೂಕ್ತ ದಾಖಲಾತಿ ಇಲ್ಲದ ನೀಡದ ಕಾರಣ ನಗದು, ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಈ ಸಂಬಂಧ ತನಿಖೆ ಮುಂದುವರೆಸಲಾಗಿದೆ ಎಂದು ಹೇಳಿದೆ.
ಅಕ್ಟೋಬರ್ 12ರಂದು ಬೆಂಗಳೂರಿನಲ್ಲಿ ಗುತ್ತಿಗೆದಾರ ಅಂಬಿಕಾಪತಿ ಪುತ್ರ ಹಾಗೂ ಇತರರ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದಾಗ ಸುಮಾರು 42 ಕೋಟಿ ರೂಪಾಯಿ ಹಣ ದೊರೆತಿತ್ತು. ಅದೇ ರೀತಿ, ರವಿವಾರ ರಾಜಾಜಿನಗರದ ಕೇತಮಾರನಹಳ್ಳಿಯಲ್ಲಿರುವ ಬಿಲ್ಡರ್ವೊಬ್ಬರ ಅಪಾರ್ಟ್ಮೆಂಟ್ ಮೇಲೆ ನಡೆಸಿದ ದಾಳಿ ವೇಳೆ 40 ಕೋಟಿ ರೂ.ಗಿಂತ ಅಧಿಕ ನಗದು ಸಿಕ್ಕಿದೆ ಎಂದು ಐಟಿ ಇಲಾಖೆ ಮೂಲಗಳು ತಿಳಿಸಿವೆ.







