ಆರೆಸ್ಸೆಸ್ ಕುರಿತ ಸಚಿವ ಪ್ರಿಯಾಂಕ್ ಖರ್ಗೆ ನಿಲುವಿಗೆ ಸಾಹಿತಿಗಳು, ಚಿಂತಕರು, ಹೋರಾಟಗಾರರ ಬೆಂಬಲ

ಪ್ರಿಯಾಂಕ್ ಖರ್ಗೆ | PC : PTI
ಬೆಂಗಳೂರು, ಅ. 14: ‘ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್)ದ ಚಟುವಟಿಕೆಗಳಿಗೆ ಅನುಮತಿ ನೀಡಬಾರದು’ ಎಂದಿರುವ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ನಿಲುವಿಗೆ ಬೆಂಬಲ ವ್ಯಕ್ತಪಡಿಸಿರುವ ನಾಡಿನ ಸಾಹಿತಿಗಳು, ಚಿಂತಕರು, ಹೋರಾಟಗಾರರು, ‘ಆರೆಸ್ಸೆಸ್ ಸಂಘಟನೆ ಅಧಿಕೃತವಾಗಿ ನೋಂದಣಿ ಮಾಡಿಕೊಳ್ಳಬೇಕು ಮತ್ತು ಅದರ ಎಲ್ಲ ಲೆಕ್ಕಪತ್ರಗಳ ವ್ಯವಹಾರಗಳನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಬೇಕು’ ಎಂದು ಆಗ್ರಹಿಸಿದ್ದಾರೆ.
ಮಂಗಳವಾರ ಸಂಬಂಧ ಹಿರಿಯ ಸಾಹಿತಿಗಳಾದ ಡಾ.ಜಿ.ರಾಮಕೃಷ್ಣ, ಪ್ರೊ.ಕೆ.ಮರಳುಸಿದ್ಧಪ್ಪ, ಪ್ರೊ.ಎಸ್. ಜಿ.ಸಿದ್ದರಾಮಯ್ಯ, ಪತ್ರಕರ್ತ ಜಾಣಗೆರೆ ವೆಂಕಟರಾಮಯ್ಯ, ಸಂಸ್ಕೃತಿ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್, ಹೋರಾಟಗಾರರಾದ ಮಾವಳ್ಳಿ ಶಂಕರ್, ಕೆ.ಎಸ್.ವಿಮಲಾ, ಡಾ.ಮೀನಾಕ್ಷಿ ಬಾಳಿ, ಟಿ.ಸುರೇಂದ್ರ, ಬಿ.ಶ್ರೀಪಾದ ಭಟ್, ರುದ್ರಪ್ಪ ಹನಗವಾಡಿ ಜಂಟಿ ಪ್ರಕಟನೆ ನೀಡಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆಯವರು ಸರಕಾರ, ಮುಜರಾಯಿ ಸ್ಥಳಗಳಲ್ಲಿ, ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಆರೆಸ್ಸೆಸ್ ಚಟುವಟಿಕೆಗೆ ಅನುಮತಿ ಕೊಡಬಾರದು ಎಂದು ಹೇಳಿರುವುದು ಸಂವಿಧಾನದ ಆಶಯಕ್ಕೆ ಪೂರಕವಾಗಿದೆ. ಆದರೆ, ಖರ್ಗೆಯವರ ಹೇಳಿಕೆಯನ್ನು ತಿರುಚಿದ ಬಿಜೆಪಿ ಮುಖಂಡರು ‘ಆರೆಸ್ಸಸ್ ನಿಷೇಧಿಸಬೇಕು ಎಂದು ಹೇಳಿದ್ದಾರೆ’ ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಆದರೆ ಇಂತಹ ಅಪಪ್ರಚಾರವನ್ನು ಖಂಡಿಸುತ್ತೇವೆ. ಮತ್ತು ಪ್ರಿಯಾಂಕ್ ಖರ್ಗೆಯವರ ನಿಲುವನ್ನು ಬೆಂಬಲಿಸುತ್ತೇವೆ’ ಎಂದು ಅವರುಗಳು ತಿಳಿಸಿದ್ದಾರೆ.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕೂಡಲೇ ಸರಕಾರಕ್ಕೆ ಸೇರಿದ ಸ್ಥಳಗಳಲ್ಲಿ ಆರೆಸ್ಸೆಸ್ ಚಟುವಟಿಕೆಗೆ ಅನುಮತಿ ಕೊಡಬಾರದು ಎನ್ನುವ ಆದೇಶ ಹೊರಡಿಸಬೇಕು. ಜೊತೆಗೆ ಯಾವುದೇ ಸಂಘಟನೆ ದೊಣ್ಣೆಯೂ ಸೇರಿದಂತೆ ಯಾವುದೇ ಆಯುಧ ಹಿಡಿದು ಅಥವಾ ಹಿಂಸೆಗೆ ಪ್ರಚೋದಿಸುವ ಘೋಷಣೆ ಕೂಗುತ್ತಾ ಸಾರ್ವಜನಿಕ ರಸ್ತೆಗಳಲ್ಲಿ ಮೆರವಣಿಗೆ ಮಾಡಲು ಅನುಮತಿ ನೀಡಬಾರದು’ ಎಂದು ಅವರುಗಳು ಒತ್ತಾಯಿಸಿದ್ದಾರೆ.







