ಮಕ್ಕಳಿಲ್ಲದ ಕೊರಗನ್ನು ಮರೆತು ಮರವೇ ಮಕ್ಕಳೆಂದ ತಾಯಿ ಸಾಲುಮರದ ತಿಮ್ಮಕ್ಕ

ಸಾಲುಮರದ ತಿಮ್ಮಕ್ಕ | PC : X
ಬೆಂಗಳೂರು: “ಸಾಲುಮರದ ತಿಮ್ಮಕ್ಕ” ಎಂದೇ ಮನೆಮಾತಾದ ಶತಾಯುಷಿ ನಿಧನರಾಗಿದ್ದಾರೆ. ಜೀವನಪೂರ್ತಿ ಮರಗಳ ನೆರಳಲ್ಲಿ ಹಸಿರಿನ್ನೇ ಉಸಿರಾಗಿಸುವ ಸಂದೇಶ ನೀಡಿದ ತಿಮ್ಮಕ್ಕ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ 1911ರಲ್ಲಿ ಜನಿಸಿದರು. ಪರಿಸರ ರಕ್ಷಣೆಯ ಪ್ರತಿಕೃತಿ ಎಂಬಂತೆ ಬದುಕಿದ ಅವರು ನೂರಾರು ಮರಗಳಿಗೆ ತಾಯಿಯಾದವರು.
ರಾಮನಗರ ಜಿಲ್ಲೆಯ ಹುಲಿಕಲ್–ಕುದೂರು ನಡುವಿನ 4.5 ಕಿಲೋಮೀಟರ್ ರಸ್ತೆಯ ಬದಿಯಲ್ಲಿ ಅವರು ಪತಿ ಚಿಕ್ಕಯ್ಯ ಅವರೊಂದಿಗೆ ನೆಟ್ಟ 385 ಆಲದ ಮರಗಳು, ಇಂದು ಕರ್ನಾಟಕದ ಪರಿಸರ ಪರಂಪರೆಯ ಜೀವಂತ ಚಿಹ್ನೆಯಾಗಿವೆ. ಮಳೆಗಾಲ ಬಂದಾಗಲೆಲ್ಲಾ ಸಸಿಗಳನ್ನು ನೆಡುವುದು, ದಿನವೂ ನಾಲ್ಕು ಕಿ.ಮೀ ನಡೆದು ಬಕೆಟ್ಗಳಲ್ಲಿ ನೀರು ತರಿಸಿ ಅವುಗಳಿಗೆ ನೀರುಣಿಸುವುದು ಇದೆಲ್ಲವೂ ಅವರ ದಿನಚರಿಯಾಗಿತ್ತು. ಔಪಚಾರಿಕ ಶಿಕ್ಷಣವಿಲ್ಲದೆ ಹತ್ತಿರದ ಕ್ವಾರಿಯಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ತಿಮ್ಮಕ್ಕ ಒಟ್ಟಾರೆ 8,000ಕ್ಕೂ ಹೆಚ್ಚು ಮರಗಳನ್ನು ನೆಟ್ಟು ಪೋಷಿಸಿದರು. ಮುಳ್ಳಿನ ಪೊದೆಗಳಿಂದ ಬೇಲಿ ಹಾಕಿ ಅವುಗಳನ್ನು ರಕ್ಷಿಸುತ್ತಿದ್ದರು. ಆ ಮೂಲಕ ಮಕ್ಕಳಿಲ್ಲದ ನೋವನ್ನು ಮರೆತರು. ಈಗ ಈ ಮರಗಳ ಸಂರಕ್ಷಣೆಯನ್ನು ಕರ್ನಾಟಕ ಸರ್ಕಾರವೇ ನೋಡಿಕೊಳ್ಳುತ್ತಿದೆ.
ಅವರ ಸೇವೆಗೆ 2019ರ ಪದ್ಮಶ್ರೀ, ರಾಷ್ಟ್ರೀಯ ನಾಗರಿಕ ಪ್ರಶಸ್ತಿ, ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ, ಬಿಬಿಸಿ 100 ಪ್ರಭಾವಶಾಲಿ ಮಹಿಳೆಯರಲ್ಲಿ ಸ್ಥಾನ (2016) ಸೇರಿದಂತೆ ನೂರಕ್ಕೂ ಹೆಚ್ಚು ಗೌರವಗಳು ಸಿಕ್ಕಿದೆ. ಅವರ ಹೆಸರಿನಲ್ಲಿ ಅಮೆರಿಕಾದ ಪರಿಸರ ಸಂಸ್ಥೆಗಳು ಸಂಪನ್ಮೂಲ ಕೇಂದ್ರಗಳನ್ನು ಸ್ಥಾಪಿಸಿವೆ. 2020ರಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿದೆ. ಇದು ಅವರ ಸೇವೆಯ ಜಾಗತಿಕ ಮಹತ್ವವನ್ನು ತೋರಿಸುತ್ತದೆ.
2019ರಲ್ಲಿ ಬಾಗೇಪಲ್ಲಿ–ಹಲಗೂರು ರಸ್ತೆ ಅಗಲೀಕರಣದ ಸಂದರ್ಭ ಅವರೇ ಬೆಳೆಸಿದ 70 ವರ್ಷ ಹಳೆಯ ಆಲಮರಗಳು ಕಡಿಯುವ ಅಪಾಯ ಎದುರಿಸಿದಾಗ ತಿಮ್ಮಕ್ಕ ಅವರು ನೇರವಾಗಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳನ್ನು ಮನವಿ ಮಾಡಿ ಮರಗಳನ್ನು ಉಳಿಸಿದರು. ಸರಕಾರ ಪರ್ಯಾಯ ಮಾರ್ಗವನ್ನೇ ಹುಡುಕಬೇಕಾಯಿತು.







