ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಗಾಂಧೀಜಿ ಹೆಸರಿನಲ್ಲಿದ್ದ ಯೋಜನೆಯ ಹೆಸರನ್ನು ಬದಲಿಸಲಾಗಿದೆ: ಕೇಂದ್ರದ ವಿರುದ್ಧ ಸಚಿನ್ ಪೈಲಟ್ ಆಕ್ರೋಶ

ಬೆಂಗಳೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ(ಮನರೇಗಾ)ಯಲ್ಲಿ ಬದಲಾವಣೆ ತರುವ ಮೂಲಕ ಕೇಂದ್ರ ಬಿಜೆಪಿ ಸರಕಾರ ಗ್ರಾಮೀಣ ಭಾಗದ ಆರ್ಥಿಕ ಭದ್ರತೆಯನ್ನು ಸಂಪೂರ್ಣವಾಗಿ ನಾಶ ಮಾಡುತ್ತಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಸಚಿನ್ ಪೈಲಟ್ ಆಕ್ರೋಶ ವ್ಯಕ್ತಪಡಿಸಿದರು.
ಸೋಮವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರಕಾರವು ಐತಿಹಾಸಿಕ ಪ್ರಮಾದವನ್ನು ಮಾಡಿದೆ. ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹೆಸರಿನಲ್ಲಿದ್ದ ಯೋಜನೆಯ ಹೆಸರನ್ನು ಬದಲಿಸಲಾಗಿದೆ. ಇಷ್ಟು ದಿನ ಬೇರೆ ಹೆಸರಿನಲ್ಲಿದ್ದ ಯೋಜನೆಗಳ ಹೆಸರನ್ನು ಮಹಾತ್ಮ ಗಾಂಧೀಜಿ ಹೆಸರಿಗೆ ಬದಲಾಯಿಸಲಾಗುತ್ತಿತ್ತು ಎಂದು ಹೇಳಿದರು.
ಕೇಂದ್ರ ಸರಕಾರವು ದೇಶದ ಗ್ರಾಮೀಣ ಭಾಗದ ಆರ್ಥಿಕ ಭದ್ರತೆಯನ್ನು ಸಂಪೂರ್ಣವಾಗಿ ನಾಶ ಮಾಡುತ್ತಿದೆ. ಮನರೇಗಾ ಯೋಜನೆ ಕಾಂಗ್ರೆಸ್ ಸರಕಾರದ ದೂರದೃಷ್ಟಿ ಯೋಜನೆಯಾಗಿದ್ದು, ಇದು ಆರ್ಥಿಕವಾಗಿ ತೀರಾ ಹಿಂದುಳಿದ ಜನರಿಗೆ ಸಂವಿಧಾನಿಕವಾಗಿ ಉದ್ಯೋಗ ಖಾತರಿ ಹಕ್ಕನ್ನು ನೀಡಲಾಗಿತ್ತು. ಗ್ರಾಮೀಣ ಭಾಗದ ಬಡ ಕುಟುಂಬದ ವ್ಯಕ್ತಿಗೆ ವರ್ಷಕ್ಕೆ 100 ದಿನಗಳ ಉದ್ಯೋಗ ನೀಡುವ ಖಾತರಿ ಯೋಜನೆ ಇದಾಗಿತ್ತು ಎಂದು ಸಚಿನ್ ಪೈಲಟ್ ತಿಳಿಸಿದರು.
ಕೋವಿಡ್ ನಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಗ್ರಾಮೀಣ ಭಾಗದ ಏಕೈಕ ಆರ್ಥಿಕ ಜಾಲ ಎಂದರೆ ಮನರೇಗಾ ಯೋಜನೆಯ ಉದ್ಯೋಗ ಖಾತರಿ. ಮನರೇಗಾ ಯೋಜನೆಯನ್ನು ಸಂಸತ್ತಿನಲ್ಲಿ ಚರ್ಚೆ ಮಾಡದೇ, ರಾಜ್ಯ ಸರಕಾರಗಳ ಅಭಿಪ್ರಾಯ ಪಡೆಯದೇ, ಸ್ಥಾಯಿಸಮಿತಿಯ ಪರಾಮರ್ಶೆಗೂ ಅವಕಾಶ ನೀಡದೆ ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಬದಲಾವಣೆ ಮಾಡಲಾಗಿದೆ ಎಂದು ಅವರು ದೂರಿದರು.
ಈ ಯೋಜನೆಯಲ್ಲಿ ಬದಲಾವಣೆ ತರಲು ಯಾರೊಬ್ಬರೂ ಪ್ರಸ್ತಾವನೆ, ಮನವಿ ನೀಡಿರಲಿಲ್ಲ. ಆದರೂ ಇದನ್ನು ಮಾಡಿರುವ ಹಿಂದೆ ರಾಷ್ಟ್ರಪಿತರಿಗೆ ಅಪಮಾನ ಮಾಡುವ ಉದ್ದೇಶ ಇದೆ. ಇದು ಬಡ ಜನರ ಜೀವನದ ಮೇಲಿನ ದಾಳಿಯಾಗಿದೆ ಎಂದು ಸಚಿನ್ ಪೈಲಟ್ ಹರಿಹಾಯ್ದರು.
ಇಷ್ಟು ದಿನಗಳ ಕಾಲ ಇದು ಬೇಡಿಕೆ ಆಧಾರಿತ ಯೋಜನೆಯಾಗಿತ್ತು. ಆದರೆ ಈಗ ಇದನ್ನು ಕೇಂದ್ರೀಕೃತ ಯೋಜನೆಯಾಗಿ ಪರಿವರ್ತಿಸಿದ್ದು, ಕೇಂದ್ರ ಸರಕಾರ ಎಲ್ಲಿ ಎಷ್ಟು ಕೆಲಸ ನಡೆಯಬೇಕು ಎಂದು ನಿರ್ಧರಿಸುವಂತಾಗಿದೆ. ಗಾಂಧಿಜೀ ಸ್ವರಾಜ್ಯ ಹಾಗೂ ಗ್ರಾಮ ಪಂಚಾಯಿತಿಗಳ ಮೇಲೆ ನಂಬಿಕೆ ಇಟ್ಟಿದ್ದರು. ಆದರೆ ಈಗ ಕೇಂದ್ರ ಸರಕಾರ ದಿಲ್ಲಿಯಲ್ಲಿ ಕೂತು ಸ್ಥಳೀಯ ಸರಕಾರ, ಪಂಚಾಯ್ತಿಗಳ ಆಯ್ಕೆಯನ್ನು ಮೀರಿ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿದೆ ಎಂದು ಅವರು ಹೇಳಿದರು.
ಈ ಯೋಜನೆಯಲ್ಲಿ ಶೇ.90ರಷ್ಟು ಅನುದಾನವನ್ನು ಕೇಂದ್ರ ಸರಕಾರ, ಉಳಿದ ಶೇ.10ರಷ್ಟು ಅನುದಾನವನ್ನು ರಾಜ್ಯ ಸರಕಾರಗಳು ಒದಗಿಸಬೇಕಾಗಿತ್ತು. ಆದರೆ ಈಗ, ಅನುದಾನದ ಪಾಲನ್ನು 60:40 ಅನುಪಾತಕ್ಕೆ ಪರಿವರ್ತಿಸಲಾಗಿದೆ. ರಾಜ್ಯ ಸರಕಾರಗಳ ಮೇಲೆ ಹೆಚ್ಚು ಹೊರೆ ಹಾಕುತ್ತಿದೆ. ಬಿಹಾರ ಗ್ರಾಮೀಣ ಪ್ರದೇಶದ ರಾಜ್ಯವಾಗಿದ್ದು, ಮನರೇಗಾ ಯೋಜನೆ ಮೇಲೆ ಅಲ್ಲಿನ ಜನ ಹೆಚ್ಚು ಅವಲಂಬಿತರಾಗಿದ್ದಾರೆ. ಆದುದರಿಂದ, ಬಿಹಾರದ ಚುನಾವಣೆ ಬಳಿಕ ಈ ಬದಲಾವಣೆ ತಂದಿದ್ದಾರೆ ಎಂದು ಸಚಿನ್ ಪೈಲಟ್ ಟೀಕಿಸಿದರು.
ಅತ್ಯಂತ ಶೋಷಿತ ವರ್ಗದ ಜನರ ಹಿತಾಸಕ್ತಿಗೆ ವಿರುದ್ಧವಾಗಿ ಈ ಸರಕಾರ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂದು ಸ್ಪಷ್ಟವಾಗುತ್ತಿದೆ. ಕೇಂದ್ರ ಸರಕಾರ ಕೆಲವು ಉದ್ಯಮಿಗಳ ಹಿತಕ್ಕಾಗಿ ಕೆಲಸ ಮಾಡುತ್ತಿದೆ. ಇಡೀ ವಿಶ್ವದಲ್ಲೆ ಬೇರೆ ಯಾವುದೇ ದೇಶದಲ್ಲಿ ಉದ್ಯೋಗ ಖಾತರಿ ನೀಡುವ ಕಾಯ್ದೆಯನ್ನು ಜಾರಿಗೆ ತಂದಿರಲಿಲ್ಲ. ಕೇಂದ್ರ ಸರಕಾರ ತನ್ನ ತಪ್ಪನ್ನು ಮರೆಮಾಚಲು 100 ದಿನಗಳಿಂದ 125 ಉದ್ಯೋಗ ದಿನಗಳನ್ನು ಏರಿಕೆ ಮಾಡಲಾಗುತ್ತಿದೆ ಎಂದು ಬಿಂಬಿಸುತ್ತಿದ್ದಾರೆ ಎಂದು ಅವರು ಟೀಕಿಸಿದರು.
ನಾನು ರಾಜಸ್ಥಾನದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವನಾಗಿ ಕೆಲಸ ಮಾಡಿದ ಸಂದರ್ಭದಲ್ಲಿ ಕೋವಿಡ್ ಸಂದರ್ಭದಲ್ಲಿ ಸುಮಾರು 50 ಲಕ್ಷ ಮಾನವ ದಿನಗಳ ಉದ್ಯೋಗ ನೀಡಲಾಗಿತ್ತು. ಈಗ ಈ ಯೋಜನೆಯನ್ನು ಬದಲಿಸಲಾಗಿದೆ. ಯುಪಿಎ ಸರಕಾರದಲ್ಲಿ ಜಾರಿಗೆ ತಂದಿದ್ದ ಯೋಜನೆಗಳ ಹೆಸರನ್ನು ಬದಲಾಯಿಸುವುದು ಈ ಸರಕಾರದ ಮುಖ್ಯ ಗುರಿಯಾಗಿದೆ ಎಂದು ಸಚಿನ್ ಪೈಲಟ್ ಹೇಳಿದರು.
ಕೇಂದ್ರ ಸರಕಾರದ ಈ ನೀತಿಯನ್ನು ಹೇಗೆ ವಿರೋಧಿಸಬೇಕು ಎಂದು ಇದೇ ಡಿ.27ರಂದು ನಡೆಯಲಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚಿಸಲಾಗುವುದು. ಇದರ ವಿರುದ್ಧ ಇಂಡಿಯಾ ಮೈತ್ರಿಕೂಟ ಸೇರಿದಂತೆ ಇಡೀ ದೇಶ ಒಟ್ಟಾಗಿ ವಿರೋಧ ಮಾಡಬೇಕು. ಈ ಬದಲಾವಣೆಯನ್ನು ಕೇಂದ್ರ ಸರಕಾರ ಹಿಂಪಡೆಯುವಂತೆ ಸಾಧ್ಯವಾದಷ್ಟು ಒತ್ತಡ ಹಾಕಲಾಗುವುದು ಎಂದು ಅವರು ತಿಳಿಸಿದರು.
2014ರಿಂದ ಬಿಜೆಪಿ ಸರಕಾರ ದ್ವೇಷ ರಾಜಕಾರಣವನ್ನು ಮಾಡಿಕೊಂಡು ಬಂದಿದೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿಕೊಂಡು ಬಂದಿದೆ. ನ್ಯಾಯಾಲಯ ಈ ಪ್ರಕರಣವನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದೆ. ಇದರೊಂದಿಗೆ ಈ.ಡಿ ಇಷ್ಟು ವರ್ಷಗಳಿಂದ ಕಾಂಗ್ರೆಸ್ ಪಕ್ಷ ಹಾಗೂ ಅದರ ನಾಯಕರ ಮೇಲೆ ಕೆಸರೆರೆಚುತ್ತಿರುವ ಬಗ್ಗೆ ಉತ್ತರ ನೀಡಬೇಕಾಗಿದೆ ಎಂದು ಸಚಿನ್ ಪೈಲಟ್ ಆಗ್ರಹಿಸಿದರು.
ಜನರು ಈಗ ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳನ್ನು ತಮ್ಮ ಮುಂದಿನ ಆಯ್ಕೆಗೆ ಪರಿಗಣಿಸುತ್ತಿದ್ದಾರೆ. ರಾಹುಲ್ ಗಾಂಧಿ ಸಂಸತ್ತಿನ ಒಳಗೆ ಹಾಗೂ ಹೊರಗೆ ತಮ್ಮ ದಿಟ್ಟ ನಾಯಕತ್ವ ಪ್ರದರ್ಶಿಸುತ್ತಿದ್ದು, ಪಕ್ಷವನ್ನು ಮತ್ತೆ ಬಲಿಷ್ಠವಾಗಿ ಕಟ್ಟಲು ನಾವೆಲ್ಲರೂ ಬದ್ಧವಾಗಿದ್ದೇವೆ ಎಂದು ಸಚಿನ್ ಪೈಲಟ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್, ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಮಂಜುನಾಥ ಗೌಡ, ಕೆಪಿಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷೆ ಐಶ್ವರ್ಯಾ ಮಹದೇವ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿಜಯ್ ಮುಗುಂದ್, ಉಪಾಧ್ಯಕ್ಷ ಸುಧೀಂದ್ರ ಉಪಸ್ಥಿತರಿದ್ದರು.







