ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಬೀದಿ ರಂಪಾಟಗಳು ಗೂಂಡಾ ಪ್ರವೃತ್ತಿ ಹೆಚ್ಚಾಗಿದೆ : ಸದಾನಂದ ಗೌಡ
ಬೆಂಗಳೂರು : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಅತ್ಯಂತ ಹದಗೆಟ್ಟಿದ್ದು, ಬೀದಿ ರಂಪಾಟಗಳು ಗೂಂಡಾ ಪ್ರವೃತ್ತಿ ಹೆಚ್ಚಾಗಿದೆ ಎಂದು ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ ಟೀಕಿಸಿದರು.
ಬಿಜೆಪಿ ಬೆಂಗಳೂರು ಮಹಾನಗರದ ವತಿಯಿಂದ ನಗರದ ಫ್ರೀಡಂ ಪಾರ್ಕ್ ಬಳಿ ಇಂದು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, "ಮನೆಯಿಂದ ಹೊರಟ ಮಹಿಳೆಯರು, ಯುವಜನರು ಮನೆ ಸೇರುವ ಧೈರ್ಯ ಇಲ್ಲವಾಗಿದೆ. ಹೊಂಡಗುಂಡಿಯಿಂದ ಹಿರಿಯರು ನೆಮ್ಮದಿಯಿಂದ ಓಡಾಡಲು ಕೂಡ ಸಾಧ್ಯವಿಲ್ಲವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
"ನಿನ್ನೆ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಇದು ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿಯಂತಿದೆ. ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಹಾಗೂ ಸಚಿವರಿಂದ ರಾಜ್ಯದ ಎಲ್ಲ ಅಧಿಕಾರಿಗಳು ಒತ್ತಡಕ್ಕೆ ಒಳಗಾಗಿರುವುದು ಗೊತ್ತಿದೆ. ಅಧಿಕಾರಿಗಳ ಪರವಾಗಿ ಬಿಜೆಪಿ ಇದೆ. ಯಾರೂ ಆತ್ಮಹತ್ಯೆ ಮಾಡಿಕೊಳ್ಳದಿರಿ"ಎಂದು ಮನವಿ ಮಾಡಿದರು.
ʼತಕ್ಷಣ ಗುಂಡಿ ಮುಚ್ಚುವ ಕಾರ್ಯ ಕೈಗೆತ್ತಿಕೊಳ್ಳದಿದ್ದರೆ, ಭ್ರಷ್ಟಾಚಾರ ಹೀಗೇ ಮುಂದುವರೆದರೆ ಉಗ್ರ ಹೋರಾಟ ಅನಿವಾರ್ಯವಾಗುತ್ತದೆ. ಕಾಂಗ್ರೆಸ್ ಸರಕಾರ ಸರಿ ದಾರಿಗೆ ಬರದೆ ಇದ್ದರೆ ಅದನ್ನು ಸರಿ ದಾರಿಗೆ ತರುವ ಕೆಲಸವನ್ನು ಬಿಜೆಪಿ ಕಾರ್ಯಕರ್ತರು ಮಾಡಲಿದ್ದಾರೆʼ ಎಂದು ತಿಳಿಸಿದರು.
ಬೆಂಗಳೂರಿನ ಕಡೆಗಣನೆ : ಆರ್.ಅಶೋಕ್
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮಾತನಾಡಿ, "ಬ್ರ್ಯಾಂಡ್ ಬೆಂಗಳೂರು ಮೂಲಕ ಸಿಂಗಾಪುರ, ಅಮೆರಿಕ, ನ್ಯೂಯಾರ್ಕ್ ತರಹ ಮಾಡುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದರು. ಒಂದು ವರ್ಷವಾದರೂ ಒಂದೇ ಒಂದು ರೂಪಾಯಿ ಹಣವನ್ನು ಬೆಂಗಳೂರಿಗೆ ಬಿಡುಗಡೆ ಮಾಡಿಲ್ಲ" ಎಂದು ಟೀಕಿಸಿದರು.
ʼರಾಜ್ಯದ ಶೇ.60ರಿಂದ 65 ತೆರಿಗೆ ಬೆಂಗಳೂರಿಂದ ಸಂಗ್ರಹವಾಗುತ್ತಿದೆ. ಸಿದ್ದರಾಮಯ್ಯನವರು ನಮ್ಮ ತೆರಿಗೆ ನಮ್ಮ ಹಕ್ಕು ಎಂದು ದಿಲ್ಲಿಯಲ್ಲಿ ಪ್ರತಿಭಟನೆ ಮಾಡಿದ್ದರು. ಈಗ ಬೆಂಗಳೂರಿನ ಜನತೆ ಬೆಂಗಳೂರಿನ ತೆರಿಗೆ ಬೆಂಗಳೂರಿಗರ ಹಕ್ಕು ಎಂದು ಹೋರಾಟ ಮಾಡಲು ಸಿದ್ಧರಾಗುವಂತಾಗಿದೆʼ ಎಂದು ತಿಳಿಸಿದರು.
ಮಾಜಿ ಸಚಿವರಾದ ಬೈರತಿ ಬಸವರಾಜ್, ಗೋಪಾಲಯ್ಯ, ಮುನಿರತ್ನ, ನಾರಾಯಣ ಗೌಡ, ಶಾಸಕರಾದ ವಿಶ್ವನಾಥ್, ಮುನಿರಾಜು, ರವಿಸುಬ್ರಹ್ಮಣ್ಯ, ಕೃಷ್ಣಪ್ಪ, ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಬೆಂಗಳೂರಿನ ಮಾಜಿ ಸಚಿವರು, ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಬಿಬಿಎಂಪಿ ಮಾಜಿ ಸದಸ್ಯರು, ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಸಿ.ಕೆ. ರಾಮಮೂರ್ತಿ ಮತ್ತು ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.









