ಜನರ ಆಶೀರ್ವಾದ ಇರುವವರೆಗೂ ನನ್ನನ್ನು ಅಧಿಕಾರದಿಂದ ಇಳಿಸಲು ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ
"ರಾಯಣ್ಣನನ್ನು ಬ್ರಿಟಿಷರಿಗೆ ಹಿಡಿದುಕೊಟ್ಟ ದೇಶದ್ರೋಹಿಗಳು ಈಗಲೂ ಇದ್ದಾರೆ"

Photo:X/@siddaramaiah
ಬೆಳಗಾವಿ: ಬಿಜೆಪಿಯವರು ನನ್ನನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಷಡ್ಯಂತ್ರ ಮಾಡುತ್ತಲೇ ಇದ್ದಾರೆ. ಆದರೆ ಎಲ್ಲಿಯವರೆಗೂ ನಿಮ್ಮ(ಜನರ) ಆಶೀರ್ವಾದ ನನ್ನ ಮೇಲೆ ಇರುತ್ತದೋ ಅಲ್ಲಿಯವರೆಗೂ ನನ್ನನ್ನು ಅಧಿಕಾರದಿಂದ ಕೆಳಗಿಳಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸೋಮವಾರ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೌಜಲಗಿ ಹಾಗೂ ಕಳ್ಳಿಗುದ್ದಿ ಗ್ರಾಮ, ಮೂಡಲಗಿ ತಾಲೂಕಿನ ಯಾದವಾಡ ಹಾಗೂ ಕಲ್ಲೋಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ ಮೂರ್ತಿ ಉದ್ಘಾಟಿಸಿ ಅವರು ಮಾತನಾಡಿದರು.
ರಾಣಿ ಚನ್ನಮ್ಮನ ಬಲಗೈ ಬಂಟ ರಾಯಣ್ಣ ಅತ್ಯಂತ ಪರಾಕ್ರಮಿ. ಬ್ರಿಟೀಷರು ರಾಣಿ ಚನ್ನಮ್ಮನ ಆಸ್ಥಾನದ ಮೇಲೆ ದಾಳಿ ನಡೆಸಿದಾಗ ರಾಯಣ್ಣನ ಹೋರಾಟದಿಂದ, ಶೌರ್ಯದಿಂದ ಗೆಲುವು ಸಾಧ್ಯವಾಯಿತು. ಎರಡನೇ ಯುದ್ಧದಲ್ಲಿ ಸೋಲಾದರೂ ಬ್ರಿಟೀಷರ ಕೈಗೆ ಸಿಗದೆ ತಪ್ಪಿಸಿಕೊಂಡ ರಾಯಣ್ಣ ಗೆರಿಲ್ಲಾ ಸೈನ್ಯ ಕಟ್ಟಿ, ಗೆರಿಲ್ಲಾ ಯುದ್ಧ ಮಾಡಿ ಬ್ರಿಟೀಷರಿಗೆ ಚಳ್ಳೆಹಣ್ಣು ತಿನ್ನಿಸಿದರು. ಇದರಿಂದ ಬ್ರಿಟೀಷರು ನೆಮ್ಮದಿ ಕೆಡಿಸಿಕೊಂಡಿದ್ದರು. ಆದರೆ ನಮ್ಮವರೇ ರಾಯಣ್ಣನನ್ನು ಬ್ರಿಟೀಷರಿಗೆ ಹಿಡಿದುಕೊಟ್ಟರು ಎಂದು ಸಿದ್ದರಾಮಯ್ಯ ಹೇಳಿದರು.
ನಮ್ಮವರ ದೇಶದ್ರೋಹದಿಂದ ರಾಯಣ್ಣ ಬ್ರಿಟೀಷರ ವಶವಾದರು. ರಾಯಣ್ಣ ಈಜಾಡುವಾಗ ಅವರ ಕೈಯಲ್ಲಿ ಆಯುಧ ಇರುವುದಿಲ್ಲ. ಈ ವೇಳೆ ಅವರನ್ನು ಬಂಧಿಸುವುದು ಸುಲಭ ಎಂದು ಬ್ರಿಟೀಷರಿಗೆ ಸಲಹೆ ಕೊಟ್ಟು ಬಂಧನಕ್ಕೆ ಕಾರಣರಾದವರು ನಮ್ಮವರೇ. ಇಂಥಾ ದೇಶದ್ರೋಹಿಗಳು ನಮ್ಮಲ್ಲೇ ಇದ್ದಾರೆ ಎಂದು ಮುಖ್ಯಮಂತ್ರಿ ವಾಗ್ದಾಳಿ ನಡೆಸಿದರು.
ಗೆರಿಲ್ಲಾ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಬ್ರಿಟೀಷರಿಗೆ ಸಿಂಹಸ್ವಪ್ನ ಆಗಿದ್ದರು. ಅವರು ಇನ್ನಷ್ಟು ಕಾಲ ಬದುಕಿದ್ದರೆ ಕಿತ್ತೂರಿನ ಮೇಲೆ ಬ್ರಿಟೀಷರ ಕಣ್ಣು ಬೀಳಲು ಸಾಧ್ಯವಾಗುತ್ತಿರಲಿಲ್ಲ. ರಾಯಣ್ಣನ ದೇಶಪ್ರೇಮ, ಜನ ಪ್ರೇಮವನ್ನು ಶಾಶ್ವತಗೊಳಿಸುವ ಉದ್ದೇಶದಿಂದ ರಾಯಣ್ಣನ ಜನ್ಮಸ್ಥಳ ಸಂಗೊಳ್ಳಿಯಲ್ಲಿ ಸೈನಿಕ ಶಾಲೆ ಆರಂಭಿಸಿದ್ದೇವೆ ಎಂದು ಅವರು ಹೇಳಿದರು.
ರಾಯಣ್ಣ ಹುಟ್ಟಿದ ಸಂಗೊಳ್ಳಿಯನ್ನು ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಆಗಸ್ಟ್ 15(ಸ್ವಾತಂತ್ರ್ಯ ದಿನಾಚರಣೆ) ರಂದು ಹುಟ್ಟಿದ್ದ ರಾಯಣ್ಣ, ಜನವರಿ 26(ಗಣರಾಜ್ಯೋತ್ಸವ) ರಂದು ಹುತಾತ್ಮರಾಗಿದ್ದು ಕಾಕತಾಳೀಯ. ಬ್ರಿಟೀಷರನ್ನು ತೊಲಗಿಸಲು ಹೋರಾಟ ನಡೆಸಿದ ಅಪ್ರತಿಮ ದೇಶಪ್ರೇಮಿ ಎಂದು ಸಿದ್ದರಾಮಯ್ಯ ಬಣ್ಣಿಸಿದರು.
ನಾಡನ್ನು ಪ್ರೀತಿಸುತ್ತಿದ್ದ ಸಂಗೊಳ್ಳಿ ರಾಯಣ್ಣನವರ ದೇಶಪ್ರೇಮವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ರಾಯಣ್ಣನವರ ತತ್ವಾದರ್ಶಗಳನ್ನು ಶಾಶ್ವತಗೊಳಿಸಲು ಅವರ ಜನ್ಮಸ್ಥಳ ಸಂಗೊಳ್ಳಿಯನ್ನು ಅಭಿವೃದ್ಧಿಪಡಿಸುವ ಜೊತೆಗೆ ಸಂಗೊಳ್ಳಿ ಸೈನಿಕ ಶಾಲೆಯನ್ನು ಆರಂಭಿಸಿದ್ದೇವೆ. ಜಾತಿ ಧರ್ಮ ಬೇಧಗಳನ್ನು ಮರೆತು ದೇಶವನ್ನು ಪ್ರೀತಿಸುವ ಹಾಗೂ ಮನುಜ ಪ್ರೀತಿಯನ್ನು ಬೆಳೆಸಿಕೊಳ್ಳುವ ಮೂಲಕ ಸಂಗೊಳ್ಳಿ ರಾಯಣ್ಣನಿಗೆ ಗೌರವ ಸೂಚಿಸಿದಂತಾಗುತ್ತದೆ ಎಂದು ಅವರು ಹೇಳಿದರು.
ಹಿಂದುಳಿದ ಸಮುದಾಯದವರು ಮುಖ್ಯಮಂತ್ರಿ ಆಗಬಾರದು, ಅಧಿಕಾರದಲ್ಲಿರಬಾರದು ಎನ್ನುವುದು ಬಿಜೆಪಿಯ ಪುರಾತನ ಸಿದ್ಧಾಂತ. ಅದಕ್ಕೇ ಯಾವುದೇ ತಪ್ಪಿಲ್ಲದಿದ್ದರೂ ನನ್ನ ವಿರುದ್ಧ ಬಿಜೆಪಿಯವರು ಭಯಾನಕ ಷಡ್ಯಂತ್ರ ರಚಿಸಿದ್ದಾರೆ. ಜನರ ಆಶೀರ್ವಾದ ನನ್ನ ಮೇಲೆ ಇರುವವರೆಗೂ ಅವರ ಷಡ್ಯಂತ್ರ ಗೆಲ್ಲುವುದಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟ ಎಚ್ಚರಿಕೆ ನೀಡಿದರು.
ಸ್ವಂತ ಜನರ ಪಿತೂರಿಯಿಂದಲೇ ರಾಯಣ್ಣ ಬ್ರಿಟೀಷರಿಗೆ ಸೆರೆಸಿಕ್ಕರು. ಬ್ರಿಟೀಷರಿಗೆ ಸಹಾಯ ಮಾಡಿದಂತೆ ದೇಶದ್ರೋಹಿಗಳು ಎಲ್ಲ ಕಾಲದಲ್ಲಿಯೂ ಇದ್ದಾರೆ. ಅಂತೆಯೇ ನನ್ನ ಮೇಲೆಯೂ ಅಪಪ್ರಚಾರ ಮಾಡಿ ಸರಕಾರವನ್ನು ಅಭದ್ರಗೊಳಿಸುವ ಪ್ರಯತ್ನವನ್ನು ಇಂದು ಮಾಡಲಾಗುತ್ತಿದೆ. ಈ ಪಿತೂರಿಯನ್ನು ನಡೆಸುತ್ತಿರುವ ಬಿಜೆಪಿಯವರು ನಂಬಿಕೆಗೆ ಅನರ್ಹರು ಎಂದು ಸಿದ್ದರಾಮಯ್ಯ ಕಿಡಿಗಾರಿದರು.
ಕಾರ್ಯಕ್ರಮದಲ್ಲಿ ಸಚಿವರಾದ ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್, ವಿಧಾನಸಭೆಯ ಸರಕಾರದ ಮುಖ್ಯ ಸಚೇತಕ ಅಶೋಕ್ ಪಟ್ಟಣ್, ರಾಜ್ಯ ಕುರುಬರ ಸಂಘದ ಅಧ್ಯಕ್ಷ ಡಾ.ಸಣ್ಣಕ್ಕಿ, ಬಾಗೋಜಿಕೊಪ್ಪ ಮಠದ ಶಿವಲಿಂಗ ಮುರುಘರಾಜೇಂದ್ರ ಸ್ವಾಮಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
‘ನನ್ನ ವ್ಯಕ್ತಿತ್ವದಲ್ಲಿ 40 ವರ್ಷದಿಂದ ಇಲ್ಲದ ಕಪ್ಪುಚುಕ್ಕೆಯನ್ನು ಬಿಜೆಪಿ-ಜೆಡಿಎಸ್ ಈಗ ಹುಡುಕುತ್ತಿವೆ. ನಾನು ಮಂತ್ರಿಯಾಗಿ 40 ವರ್ಷ ಆಯ್ತು. ಇಷ್ಟು ವರ್ಷ ಮಾಡದ ತಪ್ಪನ್ನು ಈಗ ಮಾಡ್ತೀನಾ? ನಾನು ಮಾಡದಿರುವ ತಪ್ಪನ್ನು ಷಡ್ಯಂತ್ರದಿಂದ ನನ್ನ ತಲೆಗೆ ಕಟ್ಟುವ ಪ್ರಯತ್ನ ಮಾಡುತ್ತಿದ್ದಾರೆ. ನಾವು-ನೀವು ಒಟ್ಟಾಗಿ ಈ ಷಡ್ಯಂತ್ರ ಸೋಲಿಸೋಣ’
-ಸಿದ್ದರಾಮಯ್ಯ, ಮುಖ್ಯಮಂತ್ರಿ







