ಗೋಮಾಂಸ ರಫ್ತಿನಲ್ಲಿ ಭಾರತ, ಅದರಲ್ಲೂ ಯುಪಿ ಮುಂದಿದೆ : ಸಂತೋಷ್ ಲಾಡ್

ಬೆಂಗಳೂರು : ಗೋಮಾಂಸ ರಫ್ತು ಮಾಡುವುದರಲ್ಲಿ ನಮ್ಮ ದೇಶ ಪ್ರಪಂಚದಲ್ಲೇ ಎರಡನೇ ಸ್ಥಾನದಲ್ಲಿರುವುದಲ್ಲದೆ, ಉತ್ತರ ಪ್ರದೇಶದಿಂದ ಅತೀ ಹೆಚ್ಚು ಗೋಮಾಂಸ ಪೂರೈಕೆಯಾಗುತ್ತಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ರವಿವಾರ ದಾವಣಗೆರೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತದಿಂದ ಗೋಮಾಂಸ ಹೆಚ್ಚಾಗಿ ರಫ್ತಾಗುತ್ತದೆ. ಅದರಲ್ಲೂ ಉತ್ತರ ಪ್ರದೇಶದಿಂದ ಅತೀ ಹೆಚ್ಚು ಗೋಮಾಂಸ ಪೂರೈಕೆಯಾಗುತ್ತಿದೆ. ಗೋ ಮಾತೆಯನ್ನು ಜಪ ಮಾಡುವ ಅಲ್ಲಿನ ಸಿಎಂ ಇದರ ಬಗ್ಗೆ ಉತ್ತರಿಸಬೇಕು ಎಂದು ಹೇಳಿದರು.
ತೆರಿಗೆ, ಡಿಜಿಟಲ್ ಪೇಮೆಂಟ್ ಹೆಸರಿನಲ್ಲಿ ವಂಚನೆ ಆಗುತ್ತಿದೆ. ನಾನು ಬೆಣ್ಣೆ ದೋಸೆ ತಿನ್ನಲು ಹೋದ ಹೋಟೆಲ್ ಮಾಲಕನಿಗೂ ಕೇಂದ್ರದಿಂದ ನೋಟಿಸ್ ಬಂದಿದೆ. ಇವರು ಸಾವಿರಾರು ಕೋಟಿ ರೂಪಾಯಿ ಉದ್ಯಮಿಗಳ ಸಾಲ ಮನ್ನಾ ಮಾಡಿದ್ದಾರೆ. ಆದರೆ ಬಡವರ ಸಾಲ ಮನ್ನಾ ಮಾಡಿಲ್ಲ ಎಂದು ಅವರು ಟೀಕಿಸಿದರು.
ಇನ್ನೊಂದೆಡೆ, ಖೇಲೋ ಇಂಡಿಯಾ, ಭಾಗೋ ಇಂಡಿಯಾ ಎಂಬ ಹತ್ತಾರು ಹೆಸರುಗಳಲ್ಲಿ ಸುಮ್ಮನೆ ಕಾರ್ಯಕ್ರಮ ಮಾಡುತ್ತಿದ್ದಾರೆ. ಖೇಲೋ ಇಂಡಿಯಾಕ್ಕಾಗಿ ಗುಜರಾತ್ ಒಂದಕ್ಕೆ 600 ಕೋಟಿ ಹಣ ಹೋಗಿದೆ. ಆದರೆ ಗುಜರಾತ್‍ನವರು ಒಂದೇ ಒಂದು ಪದಕ ಗೆಲ್ಲಲಿಲ್ಲ. ಹೆಚ್ಚು ಪದಕ ಬರುವ ರಾಜ್ಯಗಳಾದ ಹರಿಯಾಣ ಮತ್ತು ಪಂಜಾಬ್‍ಗೆ ಯಾಕೆ ಹಣ ಕೊಟ್ಟಿಲ್ಲ ಎಂದು ಅವರು ಪ್ರಶ್ನಿಸಿದರು.







