ಉದ್ಯೋಗಿಗಳ ಕೆಲಸದ ಅವಧಿ 10 ಗಂಟೆಗೆ ಹೆಚ್ಚಳ ಸರಿಯಿಲ್ಲ : ಸಂತೋಷ್ ಲಾಡ್

ಬೆಂಗಳೂರು : ಕಾರ್ಮಿಕ ಕೆಲಸ ಅವಧಿಯನ್ನು 9 ರಿಂದ 10ಗಂಟೆಗೆ ಹೆಚ್ಚಿಸುವ ಕೇಂದ್ರ ಸರಕಾರದ ಕ್ರಮ ವೈಜ್ಞಾನಿಕವಾಗಿ ಸರಿಯಿಲ್ಲ. ಹೀಗಾಗಿ, ಕೇಂದ್ರದ ಈ ಪ್ರಸ್ತಾವನೆಗೆ ನನ್ನ ಒಪ್ಪಿಗೆ ಇಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಗುರುವಾರ ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 1961ರ ಕರ್ನಾಟಕ ಅಂಗಡಿ ಮತ್ತು ಸ್ಥಾಪನೆ ಕಾಯ್ದೆಗೆ ತಿದ್ದುಪಡಿ ತರುವ ಹಾಗೂ ಕಾರ್ಮಿಕರ ಕೆಲಸದ ಅವಧಿಯನ್ನು 9 ರಿಂದ 10 ಗಂಟೆಗೆ ಹೆಚ್ಚಿಸುವ ಪ್ರಸ್ತಾವನೆಯನ್ನು ಕೇಂದ್ರ ಕಾರ್ಮಿಕ ಇಲಾಖೆ ಎಲ್ಲ ರಾಜ್ಯಗಳಿಗೂ ಕಳುಹಿಸಿದೆ. ಆದರೆ, ಕರ್ನಾಟಕ ರಾಜ್ಯದಲ್ಲಿ ಈ ಪ್ರಸ್ತಾವನೆ ಜಾರಿ ಸಂಬಂಧ ಕಾರ್ಮಿಕರ ಅಭಿಪ್ರಾಯ ಪಡೆಯುತ್ತೇವೆ ಎಂದರು.
ರಾಜ್ಯ ಸರಕಾರವು ಸಮಾನ ನೀತಿ ಅವಕಾಶ ಹೊಂದಿದೆ. ಅಗತ್ಯಕ್ಕೆ ಅನುಗುಣವಾಗಿ ಹೆಚ್ಚುವರಿ ಅವಧಿ ಕಾರ್ಯದ ನಿಬಂಧನೆ ಕೂಡ ಇದೆ ಎಂದ ಅವರು, ಪ್ರಗತಿ ಹೊಂದಿದ ಯಾವುದೇ ರಾಷ್ಟ್ರದಲ್ಲಿಯೂ ಕಾರ್ಮಿಕರ ಮೇಲೆ ಕೆಲಸದ ಅವಧಿಯ ಒತ್ತಡವಿಲ್ಲ. ಆದರೆ, ಭಾರತದಲ್ಲಿ ಮಾತ್ರ ಇತ್ತೀಚಿಗೆ ಒತ್ತಡ ಹೆಚ್ಚಾಗಿದೆ. ಬೆಂಗಳೂರಿನಂತಹ ನಗರದಲ್ಲಿಯೇ ಮನೆಯಿಂದ ಕಚೇರಿಗೆ ತಲುಪಲು 2 ಗಂಟೆ ಬೇಕಾಗುತ್ತದೆ. ಇಂತಹ ಸಮಸ್ಯೆಗಳನ್ನು ಇಟ್ಟುಕೊಂಡು ಅವಧಿ ಹೆಚ್ಚಳ ಮಾಡುವುದು ಸರಿ ಕಾಣುವುದಿಲ್ಲ ಎಂದು ಉಲ್ಲೇಖಿಸಿದರು.
ಕಾರ್ಮಿಕರು ಒಂದು ವೇಳೆ ಒಪ್ಪಿದರೆ ಆಯಾ ಕಂಪೆನಿ ಅಥವಾ ವಲಯಗಳಲ್ಲಿ ಈ ಅವಧಿ ಹೆಚ್ಚಳ ಪ್ರಸ್ತಾವನೆಯನ್ನು ಜಾರಿ ಮಾಡಬಹುದಾಗಿದೆ. ಮಾರ್ಗಸೂಚಿ ಪ್ರಕಾರ ನಾವು ಅವಕಾಶವನ್ನು ಕಲ್ಪಿಸುತ್ತೇವೆ. ಆದರೆ, ಕಾರ್ಮಿಕರಿಗೆ ಒತ್ತಡ, ಸಮಸ್ಯೆಗಳು ಕಂಡಬಂದಲ್ಲಿ ಮುಕ್ತವಾಗಿ ಕಾರ್ಮಿಕ ಇಲಾಖೆಗೆ ದೂರು ಸಲ್ಲಿಸಬಹುದಾಗಿದೆ.ಆನಂತರ, ಕಾನೂನು ರೀತ್ಯಾ ನಾವು ಪರಿಶೀಲನೆ ನಡೆಸಿ ಕ್ರಮ ಜರುಗಿಸುತ್ತೇವೆ ಎಂದು ಸಚಿವರು ಹೇಳಿದರು.
ಭಾರತದ ಅತಿದೊಡ್ಡ ಮಾಹಿತಿ ತಂತ್ರಜ್ಞಾನ ಸಂಸ್ಥೆ ಟಿಸಿಎಸ್(ಟಾಟಾ ಕನ್ಸಲ್ಟೆನ್ಸ್ ಸರ್ವೀಸ್)2026ರ ಹಣಕಾಸು ವರ್ಷದಲ್ಲಿ ತನ್ನ ಉದ್ಯೋಗಿಗಳ ಸಂಖ್ಯೆಯನ್ನು ಶೇಕಡಾ 2ರಷ್ಟು ಕಡಿಮೆಗೊಳಿಸುವ ವಿಚಾರ ಕುರಿತು ಪ್ರತಿಕ್ರಿಯಿಸಿ, ಆ ಕಂಪೆನಿಯ ಜೊತೆ ಮಾತನಾಡುತ್ತೇವೆ. ಅದೇ ರೀತಿ, ದೂರುಗಳು ಬಂದಲ್ಲಿ ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ಸಚಿವರು ನುಡಿದರು.







