‘ಸಂಪುಟ ಪುನರ್ ರಚನೆ’ ಬಹಿರಂಗ ಹೇಳಿಕೆ ಅನಗತ್ಯ : ಸಂತೋಷ್ ಲಾಡ್

ಬೆಂಗಳೂರು, ಅ.11: ಸರಕಾರದಲ್ಲಿ ಅಧಿಕಾರ ಹಂಚಿಕೆ ಹಾಗೂ ಸಂಪುಟ ಪುನರ್ ರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೆ ಶಾಸಕರು, ಸಚಿವರು ಬಹಿರಂಗವಾಗಿ ಹೇಳಿಕೆಗಳನ್ನು ನೀಡುವುದು ಅನಗತ್ಯ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
ಶನಿವಾರ ನಗರದಲ್ಲಿರುವ ತಮ್ಮ ಸರಕಾರಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಯಕತ್ವ ಬದಲಾವಣೆ ಮಾಡುವುದಿದ್ದರೆ ಅದು ಹೈಕಮಾಂಡ್ ನಿರ್ಧರಿಸುತ್ತದೆ. ಶಾಸಕರು, ಸಚಿವರು ಈ ವಿಚಾರದಲ್ಲಿ ಮಾತನಾಡುವ ಅಗತ್ಯತೆ ಇಲ್ಲ ಎಂದು ಹೇಳಿದರು.
ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು, ಯಾರನ್ನು ಕೈ ಬಿಡಬೇಕು ಎಲ್ಲವನ್ನೂ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ನಮ್ಮ ಸಮಸ್ಯೆಗಳು ಏನೆ ಇದ್ದರೂ ಅದನ್ನು ಹೈಕಮಾಂಡ್ ಗಮನಕ್ಕೆ ತರಬೇಕು. ಮಾಧ್ಯಮಗಳಲ್ಲಿ ಹೇಳಿಕೆಗಳನ್ನು ನೀಡಿ ಗೊಂದಲ ಸೃಷ್ಟಿಸುವುದು ಸರಿಯಲ್ಲ ಎಂದು ಸಂತೋಷ್ ಲಾಡ್ ಸಲಹೆ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅ.13ರಂದು ಸಚಿವರಿಗೆ ಔತಣಕೂಟ ಏರ್ಪಡಿಸಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಪ್ರತಿ ವರ್ಷ ಊಟಕ್ಕೆ ಕರೆಯುತ್ತಾರೆ. ಅದರಲ್ಲಿ ವಿಶೇಷತೆ ಏನು ಇಲ್ಲ ಎಂದು ಅವರು ತಿಳಿಸಿದರು.
ನಿತಿನ್ ಗಡ್ಕರಿ ಪ್ರಧಾನಿ ಆಗುತ್ತಾರೆ: ಕಾಂಗ್ರೆಸ್ ಪಕ್ಷದಲ್ಲಿ ನವೆಂಬರ್‍ನಲ್ಲಿ ಕ್ರಾಂತಿ ಆಗಿ, ಮುಖ್ಯಮಂತ್ರಿ ಬದಲಾಗುತ್ತಾರೆ ಎಂದು ಬಿಜೆಪಿ ನಾಯಕರು ನೀಡುತ್ತಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಂತೋಷ್ ಲಾಡ್, ಕ್ರಾಂತಿ ಕಾಂಗ್ರೆಸ್ ಪಕ್ಷದಲ್ಲಿ ಅಲ್ಲ, ಡಿಸೆಂಬರ್‍ನಲ್ಲಿ ಕೇಂದ್ರ ಸರಕಾರದಲ್ಲಿ ಕ್ರಾಂತಿ ಆಗಿ ನಿತಿನ್ ಗಡ್ಕರಿ ಪ್ರಧಾನಿಯಾಗಲಿದ್ದಾರೆ ಎಂದು ಹೇಳಿದರು.
ನರೇಂದ್ರ ಮೋದಿ ಬಗ್ಗೆ ಮಾತನಾಡಲು ಬಿಜೆಪಿ ನಾಯಕರಿಗಾಗಲಿ, ಮಾಧ್ಯಮದವರಿಗಾಗಲಿ ಧೈರ್ಯ ಇಲ್ಲ. ಒತ್ತಾಯಪೂರ್ವಕವಾಗಿ ಮೋದಿ ಮಾಡುತ್ತಿರುವ ಎಲ್ಲ ಕೆಲಸಗಳನ್ನು ಒಪ್ಪುತ್ತಿದ್ದಾರೆ. ಬಿಹಾರದಲ್ಲಿ ಮಹಿಳೆಯರ ಖಾತೆಗಳಿಗೆ 10 ಸಾವಿರ ರೂ.ಗಳನ್ನು ಹಾಕಿದ್ದಾರೆ. ಅಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರೆ, ಯಾಕೆ ಹಣ ಕೊಡುವ ಪರಿಸ್ಥಿತಿ ಬರುತ್ತಿತ್ತು ಎಂದು ಸಂತೋಷ್ ಲಾಡ್ ಪ್ರಶ್ನಿಸಿದರು.







