ಕೆಲ ಪತ್ರಕರ್ತರು ಬಿಜೆಪಿ ಕಾರ್ಯಕರ್ತರು : ಸಚಿವ ಸಂತೋಷ್ ಲಾಡ್
"ಪ್ರಶ್ನೆ ಕೇಳಿದವರನ್ನೆ ಪ್ರಶ್ನಿಸುವ, ಕೇಳುವವರನ್ನು ಗುರಿಯಾಗಿಸುವ ಪ್ರವೃತ್ತಿ ಹುಟ್ಟುಕೊಂಡಿದೆ"

ಸಂತೋಷ್ ಲಾಡ್
ಬೆಂಗಳೂರು : ಪ್ರಧಾನಿ ಮೋದಿ ಹಾಗೂ ಬಿಜೆಪಿ ವೈಫಲ್ಯಗಳನ್ನು ಬಯಲಿಗೆ ತಂದು ಪ್ರಶ್ನೆ ಮಾಡಿದರೆ, ಕೆಲ ಪತ್ರಕರ್ತರು ಬಿಜೆಪಿ ಕಾರ್ಯಕರ್ತರಂತೆ ನಡೆದುಕೊಂಡು ಮರು ಪ್ರಶ್ನೆ ಹಾಕುತ್ತಾರೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಗುರುವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಧ್ಯಮಗಳಲ್ಲಿ ಒಳ್ಳೆಯವರು ಮತ್ತು ಕೆಟ್ಟವರು ಇದ್ದಾರೆ. ಅದರಲ್ಲೂ, ಕೆಲವರು ಬಿಜೆಪಿ ಕಾರ್ಯಕರ್ತರಂತೆ ನಡೆದುಕೊಳ್ಳುತ್ತಾರೆ. ಪ್ರಶ್ನೆ ಕೇಳಿದವರನ್ನೇ ಪ್ರಶ್ನಿಸುವ, ಕೇಳುವವರನ್ನು ಗುರಿಯಾಗಿಸುವ ಪ್ರವೃತ್ತಿ ಹುಟ್ಟುಕೊಂಡಿದ್ದು, ಇದರಿಂದ ಮುಖ್ಯ ವಿಷಯದ ಚರ್ಚೆಗಳೇ ದಿಕ್ಕು ತಪ್ಪುತ್ತಿವೆ ಎಂದರು.
11 ವರ್ಷದಿಂದಲೂ ಪ್ರಧಾನಿ ಮೋದಿ ಅವರದ್ದೇ ಕ್ಯಾಮೆರಾ. ಅವರು ಹೇಳಿದ್ದೇ ಮಾತು ಆಗಿದೆ. ಪಂಚಾಯತಿಯಿಂದ ಸಂಸತ್ವರೆಗೆ ಅವರನ್ನೇ ತೋರಿಸಲಾಗುತ್ತಿದೆ. ಅಷ್ಟೇ ಮಾತ್ರವಲ್ಲದೆ, ಪತ್ರಿಕಾಗೋಷ್ಠಿ ನಡೆಸುವುದನ್ನು ಬಿಟ್ಟು ರೆಕಾರ್ಡ್ ಆಗಿರುವ ವಿಡಿಯೊವನ್ನು ಪ್ರಸಾರ ಮಾಡಲಾಗುತ್ತಿದೆ. ಅದನ್ನು ದೇಶದ ಜನರು ನೋಡಬೇಕಾದ ಸ್ಥಿತಿ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನೂ, ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಆಡಳಿತದಲ್ಲೂ ಅಮೆರಿಕ ಮಧ್ಯಪ್ರವೇಶಿಸಲು ಹವಣಿಸಿತು. ಆದರೆ ಇಂತಹ ಒತ್ತಡಗಳಿಗೆ ತಲೆಕೆಡಿಸಿಕೊಳ್ಳಲಿಲ್ಲ. ಪ್ರಧಾನಿ ಮೋದಿಯವರು ಆ ರೀತಿಯ ತೀರ್ಮಾನ ಕೈಗೊಳ್ಳಬೇಕಿತ್ತು. ಯುದ್ಧ ಯಾಕೆ ಬೇಡ? ಪಾಕಿಸ್ತಾನಕ್ಕೆ ಬುದ್ಧಿ ಕಲಿಸುವುದು ತಪ್ಪೇ? ಈ ಬಗ್ಗೆ ಸಂಸತ್ನಲ್ಲಿ ಸುದೀರ್ಘ ಚರ್ಚೆ ನಡೆಯಬೇಕು. ಪ್ರಧಾನಮಂತ್ರಿಗಳು ದೇಶದ ಜನರಿಗೆ ಸ್ಪಷ್ಟ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.
ಸೋಫಿಯಾ ಖುರೇಷಿ ವಿರುದ್ಧದ ಹೇಳಿಕೆ ನಾಚಿಕೆಗೇಡು: ‘ಸೋಫಿಯಾ ಖುರೇಷಿ ವಿರುದ್ಧ ಬಿಜೆಪಿ ಮಧ್ಯ ಪ್ರದೇಶದ ನಾಯಕ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಮಾತನಾಡಿ, ಇದು ನಾಚಿಕೆಗೇಡುತನ ಇದರ ಬಗ್ಗೆ ಯಾರೂ ಟ್ವೀಟ್ ಮಾಡುವುದಿಲ್ಲ. ಮಧ್ಯ ಪ್ರದೇಶ ಹೈಕೋರ್ಟ್ ಇದೀಗ ಎಫ್ಐಆರ್ ಮಾಡಲು ಸೂಚಿಸಿದೆ. ಸೋಫಿಯಾ ಖುರೇಷಿ ಬರೀ ಮುಸ್ಲಿಮ್ ಸಮುದಾಯವಲ್ಲ. ಅವರು ಈಡೀ ದೇಶವನ್ನು ಪ್ರತಿನಿಧಿಸುತ್ತಾರೆ. ಏನು ಬೇಕಾದರೂ ಮಾತನಾಡಬಹುದು ಈ ದೇಶದಲ್ಲಿ ಎಂಬಂತಾಗಿದೆ’ ಎಂದು ಸಂತೋಷ್ ಲಾಡ್ ಹೇಳಿದರು.







