ಕಾಂಗ್ರೆಸ್ನಲ್ಲಿ ಹೊಸ ನಾಯಕತ್ವ ರೂಪುಗೊಳ್ಳುವವರೆಗೂ ಸಿದ್ದರಾಮಯ್ಯ ಅನಿವಾರ್ಯ : ಸತೀಶ್ ಜಾರಕಿಹೊಳಿ

ಸತೀಶ್ ಜಾರಕಿಹೊಳಿ
ಬೆಂಗಳೂರು : ‘ಸಿದ್ದರಾಮಯ್ಯನವರು ಮುಂದಿನ ಚುನಾವಣೆಗೆ ನಿಲ್ಲದಿದ್ದರೂ, ರಾಜಕೀಯ ನಿವೃತ್ತಿಯಾದರೂ ಅವರು ಬೇಕು. ಕಾಂಗ್ರೆಸ್ನಲ್ಲಿ ಹೊಸ ನಾಯಕತ್ವ ರೂಪುಗೊಳ್ಳುವವರೆಗೂ ಸಿದ್ದರಾಮಯ್ಯ ಅನಿವಾರ್ಯ’ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಪಾದಿಸಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2028ರ ವರೆಗೂ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರಬೇಕೆಂದು ನನ್ನ ಆಸೆಯಾಗಿದೆ. ಮುಂದಿನ ಚುನಾವಣೆಗೂ ಅವರದೇ ನೇತೃತ್ವ ಬೇಕಾಗಿದೆ. ಚುನಾವಣೆಯಿಂದ ನಿವೃತ್ತಿ ಆದರೂ, ಸಕ್ರಿಯ ರಾಜಕೀಯದಲ್ಲಿ ಸಿದ್ದರಾಮಯ್ಯ ಇರಬೇಕು. ಅವರ ನೇತೃತ್ವದಲ್ಲಿ ಚುನಾವಣೆ ಗೆಲ್ಲಲು ಅನುಕೂಲ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಗೊತ್ತಿಲ್ಲ. ಈ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಅವರು ತೀರ್ಮಾನ ಮಾಡುತ್ತಾರೆ. ಬೇರೆ ರಾಜ್ಯಗಳ ಚರ್ಚೆ ನಡೆಯುತ್ತಿದೆ. ಕರ್ನಾಟಕದ ಬಗ್ಗೆ ಇನ್ನೂ ಚರ್ಚೆ ಆಗಿಲ್ಲ. ನಮ್ಮ ರಾಜ್ಯದ ಚರ್ಚೆ ಬಂದಾಗ ಅಭಿಪ್ರಾಯ ಹೇಳುತ್ತೇವೆ ಎಂದರು.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಬದಲಾವಣೆ ಬಗ್ಗೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ಉಸ್ತುವಾರಿಗಳ ಬದಲಾವಣೆ ಬಗ್ಗೆ ಗೊತ್ತಿಲ್ಲ. ನಮ್ಮ ವ್ಯಾಪ್ತಿಯಲ್ಲಿ ಅದು ಇಲ್ಲ. ರಾಹುಲ್ ಗಾಂಧಿ ನಿರ್ಧಾರ ಮಾಡುತ್ತಾರೆ. ಬೇರೆ ರಾಜ್ಯಗಳ ಉಸ್ತುವಾರಿ ಬದಲಾವಣೆ ಆಗಿದೆ. ಸುರ್ಜೇವಾಲಾ ಈಗ ಇದ್ದಾರೆ, ಅದರ ಬಗ್ಗೆ ಏನು ಹೇಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಅಧಿಕಾರ ಹಂಚಿಕೆಯ ಕುರಿತು ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ಪವರ್ ಶೇರಿಂಗ್ ವಿಚಾರ ಬಗ್ಗೆ ನನಗೆ ಮಾಹಿತಿ ಇಲ್ಲ. ಇದೆಲ್ಲಾ ನಮ್ಮ ವ್ಯಾಪ್ತಿಯಲ್ಲಿಲ್ಲ. ಪವರ್ ಶೇರಿಂಗ್ ಮಾತುಕತೆ ಆಗಿದೆಯೋ, ಇಲ್ಲವೋ, ನಮಗೆ ಆ ವಿಷಯ ಕುರಿತು ಗೊತ್ತಿಲ್ಲ. ಇದೆಲ್ಲದಕ್ಕೂ ಮಲ್ಲಿಕಾರ್ಜುನ ಖರ್ಗೆ ಹಾಗೂ ಸುರ್ಜೇವಾಲಾ ಉತ್ತರಿಸಬೇಕು ಎಂದರು.
ಗೆಲ್ಲಬೇಕೆಂದರೆ ಸಿದ್ದರಾಮಯ್ಯ ಬೇಕೆ ಬೇಕು: ನಾವು ಮುಂದಿನ ಚುನಾವಣೆಯನ್ನು ಗೆಲ್ಲಬೇಕೆಂದರೆ ಸಿದ್ದರಾಮಯ್ಯ ನಮಗೆ ಬೇಕೆ ಬೇಕು. ಇನ್ನೊಂದು ಅವಧಿಯವರೆಗೆ ಅವರು ರಾಜಕೀಯದಲ್ಲಿ ಇರಬೇಕು. ಮುಂದಿನ ನಾಯಕತ್ವ ಬೆಳೆಸುವವರೆಗೂ ಸಿದ್ದರಾಮಯ್ಯ ಸಕ್ರಿಯ ರಾಜಕಾರಣದಲ್ಲಿ ಇದ್ದರೆ ಪಕ್ಷಕ್ಕೆ ಬಲ ಸಿಗುತ್ತದೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.







