ಕರ್ತವ್ಯಲೋಪ ಆರೋಪ; ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ. ಸತೀಶ್ ಕುಮಾರ್ ಎಸ್.ಹೊಸಮನಿ ಅಮಾನತು

ಡಾ. ಸತೀಶ್ ಕುಮಾರ್ ಎಸ್.ಹೊಸಮನಿ
ಬೆಂಗಳೂರು: ಹಣ ದುರುಪಯೋಗ ಮತ್ತು ಕರ್ತವ್ಯಲೋಪ ಎಸಗಿರುವ ಆರೋಪ ಮೇಲ್ನೋಟಕ್ಕೆ ಸಾಬೀತಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ. ಸತೀಶ್ ಕುಮಾರ್ ಎಸ್.ಹೊಸಮನಿ ಅವರನ್ನು ತಕ್ಷಣದಿಂದ ಜಾರಿಗೆ ಅಮಾನತುಗೊಳಿಸಿ ಸರಕಾರ ಆದೇಶ ಹೊರಡಿಸಿದೆ.
ಡಿಜಿಟಲ್ ಲೈಬ್ರರಿ ಕಾರ್ಯಕ್ರಮದ ಅನುಷ್ಠಾನದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಅಧಿಕಾರಿಯ ವಿರುದ್ಧ ಆರೋಪಗಳು ಕೇಳಿ ಬಂದಿದ್ದವು. ಸುಮಾರು 20 ಕೋಟಿ ರೂ. ವೆಚ್ಚದಲ್ಲಿ ಪುಸ್ತಕಗಳನ್ನು ಖರೀದಿ ಮಾಡಿ ಜಿಲ್ಲಾ ಲೈಬ್ರರಿಗಳಿಗೆ ಸರಬರಾಜು ಮಾಡದೇ ಇರುವುದು ಸೇರಿದಂತೆ ಗ್ರಂಥಾಲಯ ಇಲಾಖೆಗೆ ಸಂಬಂಧಿಸಿದ ಕೆಲವು ಯೋಜನೆಗಳಲ್ಲಿ ಅವರು ಅಕ್ರಮವೆಸಗಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ.
ಪ್ರಸ್ತುತ ಹುದ್ದೆಯಲ್ಲೇ ನಿರ್ದೇಶಕರನ್ನು ಮುಂದುವರೆಸಿದರೆ ದಾಖಲೆಗಳನ್ನು ತಿರುಚುವ ಮತ್ತು ಸಾಕ್ಷ್ಯಗಳನ್ನು ನಾಶ ಮಾಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸರಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಡಾ. ಸತೀಶ್ ಕುಮಾರ್ ಎಸ್.ಹೊಸಮನಿ ಅವರ ವಿಚಾರಣೆಯನ್ನು ಬಾಕಿ ಇರಿಸಿ ಅಮಾನತಿನಲ್ಲಿರಿಸಲು ತೀರ್ಮಾನಿಸಿದೆ.
ಅಧಿಕಾರಿಯು ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಇಲ್ಲದೇ ಕೇಂದ್ರಸ್ಥಾನವನ್ನು ಬಿಡತಕ್ಕದ್ದಲ್ಲ. ಹಾಗೆಯೇ ಕರ್ನಾಟಕ ನಾಗರಿಕ ಸೇವಾ ನಿಯಮಗಳು, 1958ರ ನಿಯಮ- 98ರನ್ವಯ ಜೀವನಾಧಾರಭತ್ಯೆಯನ್ನು ಪಡೆಯಲು ಅರ್ಹರಿರುತ್ತಾರೆ ಎಂದು ತಿಳಿಸಿದೆ.







