ದಮನಿತ ಮಹಿಳೆಯರಿಗೆ ಶಿಕ್ಷಣ ಕೊಟ್ಟದ್ದು ಸಾವಿತ್ರಿಬಾಯಿ ಫುಲೆ-ಫಾತಿಮಾ ಶೇಖ್: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಶಿಕ್ಷಣದಿಂದ ವಂಚಿತರಾದ ಕೆಳಸ್ತರದ ಮಹಿಳೆರಿಗೆ ಶಿಕ್ಷಣ ಕೊಟ್ಟಿದ್ದು, ಸಾವಿತ್ರಿಬಾಯಿ ಫುಲೆ ಹಾಗೂ ಫಾತಿಮಾ ಶೇಖ್ ಎಂಬುವುದನ್ನು ಸಮಾಜ ನೆನದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಶುಕ್ರವಾರ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಉನ್ನತ ಶಿಕ್ಷಣ ಇಲಾಖೆವತಿಯಿಂದ ಭಾರತ ರತ್ನ ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸಾವಿತ್ರಿಬಾಯಿ ಫುಲೆ ಮತ್ತು ಫಾತಿಮಾ ಶೇಖ್ ಇಬ್ಬರೂ ದಮನಿತ ಮಹಿಳೆಯರಿಗೆ ಶಿಕ್ಷಣ ಕೊಟ್ಟ ಮೊದಲ ಶಿಕ್ಷಕಿಯರು. ಆಗಿನ ಕಾಲದಲ್ಲಿ ಇವರಿಗೆ ಸೆಗಣಿಯನ್ನೆಲ್ಲಾ ಎಸೆದು ಅವಮಾನಿಸಲಾಗಿತ್ತು. ಈ ಎಲ್ಲ ಅವಮಾನ ಸಹಿಸಿಕೊಂಡು ಶಿಕ್ಷಣ ನೀಡುವಲ್ಲಿ ಯಶಸ್ವಿಯಾದರು ಎಂದು ಅವರು ಸ್ಮರಿಸಿದರು.
ಮೊಬೈಲ್ ಗೀಳು ಈಗ ಮಕ್ಕಳಲ್ಲಿ ಹೆಚ್ಚಾಗಿದೆ. ಈ ಗೀಳಿನಿಂದ ಮಕ್ಕಳನ್ನು ಹೊರಗೆ ತರುವ ಕೆಲಸವನ್ನು ಶಿಕ್ಷಕರು ಪರಿಣಾಮಕಾರಿಯಾಗಿ ಆಗಬೇಕಿದೆ. ಆದ್ದರಿಂದ, "ಮೊಬೈಲ್ ಬಿಡಿ-ಪುಸ್ತಕ ಹಿಡಿ" ಎನ್ನುವ ಮೌಲ್ಯವನ್ನು ಪ್ರತೀ ಶಾಲೆ ಮತ್ತು ಮನೆಗಳಲ್ಲೂ ಜಾರಿ ಆಗಲಿ ಎಂದು ಶಿಕ್ಷಕರಿಗೆ-ಮಕ್ಕಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ನಾನು ರಾಜಪ್ಪ ಗುರುಗಳಿಮದ ಶಾಲಾ ಶಿಕ್ಷಣವನ್ನು ಹಾಗೂ ಪ್ರೊ. ನಂಜುಂಡಸ್ವಾಮಿ ಅವರಿಂದ ರಾಜಕೀಯ ಪಾಠ ಕಲಿತೆ ಎಂದ ಅವರು, ವಿದ್ಯಾರ್ಥಿ ದೆಸೆಯಲ್ಲಿ ನನಗೆ ಮನೆಯಲ್ಲಿ ಪ್ರತಿದಿನ ಅನ್ನ ತಿನ್ನುವ ಅವಕಾಶ, ಶಕ್ತಿ ಇರಲಿಲ್ಲ. ಯಾರಿಗೂ ಈ ಸ್ಥಿತಿ ಬರಬಾರದು ಎನ್ನುವ ಕಾರಣದಿಂದ ನಾನು ‘ಅನ್ನಭಾಗ್ಯ’ ಯೋಜನೆಯನ್ನು ಜಾರಿಗೊಳಿಸಿದೆ ಎಂದು ಅವರು ನುಡಿದರು.







