ಆಗಸ್ಟ್ ಅಂತ್ಯದೊಳಗೆ ಶಾಲಾ ಮಕ್ಕಳಿಗೆ ಶೂ-ಸಾಕ್ಸ್ ವಿತರಣೆ ಪೂರ್ಣ : ಸಚಿವ ಮಧು ಬಂಗಾರಪ್ಪ

ಬೆಂಗಳೂರು : ರಾಜ್ಯದ ಸರಕಾರಿ ಶಾಲೆಗಳಲ್ಲಿ 1 ರಿಂದ 10ನೇ ತರಗತಿಯಲ್ಲಿ ಓದುತ್ತಿರುವ ಅಂದಾಜು 36.56ಲಕ್ಷ ವಿದ್ಯಾರ್ಥಿಗಳಿಗೆ ಗುಣಮಟ್ಟದ ಉಚಿತ ಶೂ-ಸಾಕ್ಸ್ ಹಾಗೂ ಸ್ಯಾಂಡಲ್ ವಿತರಿಸಲು ಕ್ರಮ ಕೈಗೊಳ್ಳಲಾಗಿದ್ದು, ಆಗಸ್ಟ್ ಅಂತ್ಯದೊಳಗಾಗಿ ಎಲ್ಲ ವಿದ್ಯಾರ್ಥಿಗಳಿಗೆ ವಿತರಣೆ ಪೂರ್ಣಗೊಳಿಸಲಾಗುವುದು ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಸೋಮವಾರ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಕಾಂಗ್ರೆಸ್ ಸದಸ್ಯೆ ಬಲ್ಕೀಸ್ ಬಾನು ಪ್ರಶ್ನೆಗೆ ಉತ್ತರಿಸಿದ ಸಚಿವರು, 2026-27ನೇ ಶೈಕ್ಷಣಿಕ ಸಾಲಿನಲ್ಲಿ ಒಟ್ಟು ರೂ. 104.00 ಕೋಟಿ ಅಂದಾಜು ವೆಚ್ಚದಲ್ಲಿ ರಾಜ್ಯಮಟ್ಟದಲ್ಲಿ ಪಾರದರ್ಶಕ ಟೆಂಡರ್ ಮೂಲಕ ‘ವಿದ್ಯಾವಿಕಾಸ ಯೋಜನೆ’ಯಡಿ ವಿದ್ಯಾರ್ಥಿಗಳಿಗೆ ಶೂ-ಸಾಕ್ಸ್ ಮತ್ತು ಸ್ಯಾಂಡಲ್‍ಗಳ ಖರೀದಿಗೆ ಅನುಮೋದನೆ ನೀಡಲಾಗಿದೆ ಎಂದರು.
ಒಟ್ಟು 36,61,267 ಪ್ರಮಾಣದ ಪೂರೈಕೆಗೆ ಕಾರ್ಯಾದೇಶ ನೀಡಲಾಗಿದ್ದು, ಈ ಪೈಕಿ ಈಗಾಗಲೇ 21,92,529 ಪ್ರಮಾಣ ಶಾಲೆಗಳಿಗೆ ತಲುಪಿ ವಿತರಣೆಯಾಗಿದೆ. 12,59,298 ಪ್ರಮಾಣ ತಾಲೂಕುಗಳಿಗೆ ಸಾಗಣೆಯಲ್ಲಿದ್ದು, 2,09,440 ಪ್ರಮಾಣ ಉತ್ಪಾದನಾ ಹಂತದಲ್ಲಿದೆ. ಅಧಿಕ ಮಳೆಯಾಗುವ ಪ್ರದೇಶಗಳ ಹಾಗೂ ಎಸ್‍ಡಿಎಮ್‍ಸಿ ವಿನಂತಿಸಿದ ಶಾಲೆಗಳ ವಿದ್ಯಾರ್ಥಿಗಳಿಗೆ ಶೂಗಳ ಬದಲಿಗೆ ಗುಣಮಟ್ಟದ ವ್ಯಾಲ್ಕ್ರೋ ಸ್ಯಾಂಡಲ್‍ಗಳನ್ನು ಪೂರೈಸಲಾಗುತ್ತಿದೆ ಎಂದು ಮಧು ಬಂಗಾರಪ್ಪ ಹೇಳಿದರು.
ಅನುದಾನಿತ ಶಾಲಾ ವಿದ್ಯಾರ್ಥಿಗಳಿಗೆ ಈ ಯೋಜನೆಯಡಿ ಉಚಿತ ಶೂ-ಸಾಕ್ಸ್ ವಿತರಿಸುವ ಸೌಲಭ್ಯ ಇರುವುದಿಲ್ಲ. ಉತ್ಪನ್ನಗಳ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರಕಾರದ ಫುಟ್‍ವೇರ್ ಡಿಸೈನ್ ಮತ್ತು ಡೆವಲಪ್‍ಮೆಂಟ್ ಇನ್‍ಸ್ಟಿಟ್ಯೂಟ್, ಭಾರತೀಯ ವಿಜ್ಞಾನ ಸಂಸ್ಥೆ-ಬೆಂಗಳೂರು, ಸುರತ್ಕಲ್‍ನ ಎನ್‍ಐಟಿಕೆ ಹಾಗೂ ಲಿಡ್ಕರ್ ಸಂಸ್ಥೆಗಳ ಪ್ರತಿನಿಧಿಗಳನ್ನು ಒಳಗೊಂಡ ಉನ್ನತ ಮಟ್ಟದ ತಾಂತ್ರಿಕ ಸಮಿತಿಯನ್ನು ರಚಿಸಲಾಗಿದೆ ಎಂದು ಮಧು ಬಂಗಾರಪ್ಪ ತಿಳಿಸಿದರು.
ಸರಬರಾಜಿಗೆ ಮೊದಲು ‘ಪೂರ್ವ-ಸಾಗಣೆ ತಪಾಸಣೆ' ನಡೆಸಲಾಗುತ್ತಿದ್ದು, ಎಫ್‍ಡಿಡಿಐ ಸಂಸ್ಥೆಯಿಂದ ತೃಪ್ತಿಕರ ಪರೀಕ್ಷಾ ವರದಿ ಬಂದ ನಂತರವೇ ಪೂರೈಕೆಗೆ ಅನುಮತಿ ನೀಡಲಾಗುತ್ತಿದೆ. ಸರಬರಾಜು ಆದೇಶ ನೀಡಿದ 60 ದಿನಗಳ ಒಳಗೆ ಪೂರೈಕೆ ಪೂರ್ಣಗೊಳಿಸಬೇಕು. ಶೂ-ಸಾಕ್ಸ್ ಹಾಗೂ ಸ್ಯಾಂಡಲ್‍ಗಳ ಅಳತೆಯಲ್ಲಿ ವ್ಯತ್ಯಾಸಗಳಿದ್ದರೆ ಮುಂದಿನ 15 ದಿನಗಳ ಒಳಗೆ ಉಚಿತವಾಗಿ ಬದಲಾಯಿಸಿ ನೀಡಲು ತಿಳಿಸಲಾಗಿದೆ. ನಿಗದಿತ ಅವಧಿಯಲ್ಲಿ ಸರಬರಾಜು ಮಾಡದಿದ್ದಲ್ಲಿ ಶೇ. 0.75 ರಷ್ಟು ವಿಳಂಬ ದಂಡ ವಿಧಿಸಲಾಗುವುದು ಹಾಗೂ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಮಧು ಬಂಗಾರಪ್ಪ ಹೇಳಿದರು.
ಜಿಲ್ಲಾ, ತಾಲೂಕು ಮತ್ತು ಶಾಲಾ ಮಟ್ಟದಲ್ಲಿ ಉಸ್ತುವಾರಿ ಸಮಿತಿಗಳನ್ನು ರಚಿಸಲಾಗಿದ್ದು, ನೋಡಲ್ ಅಧಿಕಾರಿಗಳನ್ನು ನೇಮಿಸಿ ಹಂಚಿಕೆ ಪ್ರಕ್ರಿಯೆಯನ್ನು ಕ್ಷಿಪ್ರವಾಗಿ ನಿರ್ವಹಿಸಲಾಗುತ್ತಿದೆ. ಜುಲೈ 31ರವರೆಗೆ ಶಾಲೆಗಳಲ್ಲಿ ದಾಖಲಾತಿಗೆ ಅವಕಾಶವಿದ್ದುದರಿಂದ ವಿದ್ಯಾರ್ಥಿಗಳ ಸಂಖ್ಯೆ ಮತ್ತು ಕಾಲಳತೆಗೆ ತಕ್ಕಂತೆ ವಿತರಿಸುವ ಪ್ರಕ್ರಿಯೆಯಿಂದ ಸ್ವಲ್ಪ ವಿಳಂಬವಾಗಿದ್ದು, ಆಗಸ್ಟ್ ಮಾಹೆಯ ಅಂತ್ಯದ ವೇಳೆಗೆ ರಾಜ್ಯದ ಎಲ್ಲಾ ಅರ್ಹ ವಿದ್ಯಾರ್ಥಿಗಳಿಗೆ ಶೂ-ಸಾಕ್ಸ್ ಹಾಗೂ ಸ್ಯಾಂಡಲ್ ಸಿಗಲಿದೆ ಎಂದು ಮಧು ಬಂಗಾರಪ್ಪ ಭರವಸೆ ನೀಡಿದರು.






