ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ | ಶಾಲೆಗಳ ವೇಳಾಪಟ್ಟಿ ಬದಲಾವಣೆಗೆ ಸರಕಾರ ಚಿಂತನೆ, ಶೀಘ್ರದಲ್ಲೇ ಸೂಕ್ತ ನಿರ್ಧಾರ : ಸಚಿವ ಮಧುಬಂಗಾರಪ್ಪ

ಮಧುಬಂಗಾರಪ್ಪ
ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ತೀವ್ರ ಸಂಚಾರ ದಟ್ಟಣೆಯು ಕೇವಲ ಉದ್ಯೋಗಿಗಳು, ಸಾರ್ವಜನಿಕರಿಗಷ್ಟೇ ಅಲ್ಲದೆ, ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ದೈನಂದಿನ ನೆಮ್ಮದಿಯನ್ನೇ ಕಸಿದುಕೊಳ್ಳುತ್ತಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ, ನಗರದ ಶಾಲೆಗಳ ವೇಳಾಪಟ್ಟಿಯನ್ನು ಬದಲಾಯಿಸುವ ಬಗ್ಗೆ ರಾಜ್ಯ ಸರಕಾರ ಹಾಗೂ ಶಿಕ್ಷಣ ಇಲಾಖೆ ಗಂಭೀರ ಚಿಂತನೆ ನಡೆಸಿದೆ.
ಈ ಸಂಬಂಧ ನಗರದಲ್ಲಿ ಮಾಹಿತಿ ನೀಡಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ, ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಶಾಲಾ ಸಮಯವನ್ನು ಪರಿಷ್ಕರಿಸುವಂತೆ ಖಾಸಗಿ ಶಾಲೆಗಳ ಒಕ್ಕೂಟ ಹಾಗೂ ಸಾರ್ವಜನಿಕರಿಂದ ಸಾಕಷ್ಟು ಮನವಿಗಳು ಬಂದಿವೆ ಎಂದು ತಿಳಿಸಿದ್ದಾರೆ.
ಅದರಂತೆ, ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಸಮಸ್ಯೆಯನ್ನು ನಿಯಂತ್ರಿಸಲು, ನಗರದ ಶಾಲಾ-ಕಾಲೇಜುಗಳ ಸಮಯದ ಪರಿಷ್ಕರಣೆಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳು ಹಾಗೂ ಶಿಕ್ಷಣ ಸಂಸ್ಥೆಗಳ ಪಾಲುದಾರರೊಂದಿಗೆ ಸಮಾಲೋಚನೆ ನಡೆಸಿ ಶೀಘ್ರದಲ್ಲೇ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಧು ಬಂಗಾರಪ್ಪ ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಶಾಲಾ ಸಮಯ ಬದಲಾವಣೆಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯು ವಿವಿಧ ಇಲಾಖೆಗಳು, ಸಂಚಾರ ಪೊಲೀಸ್ ಅಧಿಕಾರಿಗಳು, ಖಾಸಗಿ ಶಾಲಾ ಆಡಳಿತ ಮಂಡಳಿಗಳು, ಶಾಲಾ ವಾಹನ ಚಾಲಕರ ಸಂಘ ಮತ್ತು ಪೋಷಕರೊಂದಿಗೆ ಸದ್ಯದಲ್ಲೇ ಸುದೀರ್ಘ ಚರ್ಚೆ ನಡೆಸಲಿದೆ.
ಬೆಂಗಳೂರಿನಲ್ಲಿ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಪೀಕ್ ಅವರ್ ಗಳಲ್ಲಿ ಶಾಲಾ ವಾಹನಗಳು ರಸ್ತೆಗಿಳಿಯುವುದರಿಂದ ಭಾರಿ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಕಚೇರಿಗಳಿಗೆ ಹೋಗುವವರ ಸಮಯ ಮತ್ತು ಶಾಲಾ ಸಮಯ ಪರಸ್ಪರ ಮುಖಾಮುಖಿಯಾಗದಂತೆ ತಡೆಯುವುದು ಶಾಲಾ ಸಮಯ ಬದಲಾವಣೆಯ ಮುಖ್ಯ ಉದ್ದೇಶವಾಗಿದೆ. ಹಾಗಾಗಿ, ಶಾಲಾ ಸಮಯವನ್ನು 30 ನಿಮಿಷಗಳಿಂದ 1 ಗಂಟೆಯವರೆಗೆ ಬದಲಾಯಿಸುವ (ಮುಂದೂಡುವ ಅಥವಾ ಮುಂಚಿತವಾಗಿ ಆರಂಭಿಸುವ) ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.
ಈ ಹಿಂದೆ ಹೈಕೋರ್ಟ್ ಬೆಂಗಳೂರಿನ ಸಂಚಾರ ದಟ್ಟಣೆ ನಿಯಂತ್ರಿಸಲು ಶಾಲಾ-ಕಾಲೇಜುಗಳು ಮತ್ತು ಐಟಿ/ಬಿಟಿ ಕಂಪೆನಿಗಳ ಕೆಲಸದ ಸಮಯವನ್ನು ಪರಿಷ್ಕರಿಸುವಂತೆ ಸರಕಾರಕ್ಕೆ ಸಲಹೆ ನೀಡಿತ್ತು.






