ಎಸ್‌ಸಿ-ಎಸ್‌ಟಿ ಮೀಸಲಾತಿ ಹೆಚ್ಚಳ ರದ್ದುಗೊಳಿಸಿ ಹೈಕೋರ್ಟ್ ಅದೇಶ

ಬೆಂಗಳೂರು : ಪರಿಶಿಷ್ಟ ಜಾತಿ (ಎಸ್ ಸಿ) ಮತ್ತು ಪರಿಶಿಷ್ಟ ಪಂಗಡ( ಎಸ್ ಟಿ) ಮೀಸಲಾತಿಯನ್ನು ಶೇಕಡಾ 50 ಕ್ಕಿಂತ ಹೆಚ್ಚಿಸಿ ರಾಜ್ಯ ಸರಕಾರ ತಂದಿದ್ದ ಕಾಯ್ದೆಯನ್ನು ಹೈಕೋರ್ಟ್ ನ ವಿಭಾಗೀಯ ಪೀಠ ರದ್ದುಗೊಳಿಸಿದೆ.
ರಾಜ್ಯ ಸರಕಾರ ಎಸ್‌ಸಿ-ಎಸ್‌ಟಿ ಮೀಸಲಾತಿಯನ್ನು ಶೇಕಡಾ 56 ಕ್ಕೆ ಏರಿಸಿತ್ತು. ಇದನ್ನು ಈಗ ಹೈಕೋರ್ಟ್ ರದ್ದುಗೊಳಿಸಿದೆ.
ಈ ಬಗ್ಗೆ ಇಂದು ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಹೇಮಲೇಖಾ ಅವರಿದ್ದ ವೀಭಾಗೀಯ ಪೀಠ ತೀರ್ಪು ಪ್ರಕಟಿಸಿದೆ.
ಸರಕಾರಿ ನೇಮಕಾತಿ ಹಾಗೂ ಶೈಕ್ಷಣಿಕ ಸೀಟುಗಳ ಹಂಚಿಕೆಯಲ್ಲಿ ಎಸ್‌ಸಿ ಮೀಸಲಾತಿ ಶೇಕಡಾ 15 ರಿಂದ 17 ಕ್ಕೆ ಹಾಗೂ ಎಸ್ ಟಿ ಮೀಸಲಾತಿಯನ್ನು ಶೇಕಡಾ 3 ರಿಂದ 7 ಕ್ಕೆ ಏರಿಸಿ ರಾಜ್ಯ ಸರಕಾರ ಕಾಯ್ದೆ ರೂಪಿಸಿತ್ತು. ಆದರೆ ಸಂವಿಧಾನದ ಚೌಕಟ್ಟು ಹಾಗೂ ಸುಪ್ರೀಂ ಕೋರ್ಟ್ ತೀರ್ಪುಗಳಿಗೆ ವಿರುದ್ದವಾಗಿದೆ ಎಂದು ಅಕ್ಷೇಪಿಸಿ ಮಹೇಂದ್ರ ಕುಮಾರ್ ಮಿಶ್ರಾ ಎಂಬುವರು ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ವಿಭಾಗೀಯ ಪೀಠ, ಸುಪ್ರೀಂ ಕೋರ್ಟ್ ನ ಇಂದಿರಾ ಸಹಾನಿ ಪ್ರಕರರಣದ ತೀರ್ಪನ್ನು ಪ್ರಮುಖವಾಗಿ ಉಲ್ಲೇಖ ಮಾಡಿ ಯಾವುದೇ ಕಾರಣಕ್ಕೂ ಮೀಸಲಾತಿ ಶೇಕಡಾ 50 ನ್ನ ಮೀರಬಾರದು. ಒಂದು ವೇಳೆ ಮೀರುವುದಾದರೆ ಅದಕ್ಕೆ ಅಸಾಧಾರಣನೀಯ ಹಾಗೂ ಸಮರ್ಥನೀಯ ಕಾರಣಗಳು ಇರಬೇಕು ಎಂದಿದೆ. ಆದರೆ ಈ ಪ್ರಕರಣದಲ್ಲಿ ಅಂತಹ ಅಸಾಧಾರಣನೀಯ ಕಾರಣಗಳು ಕಂಡು ಬಂದಿಲ್ಲ ಎಂದು ಕೋರ್ಟ್ ತೀರ್ಪಿನ ವೇಳೆ ಹೇಳಿದೆ




