ಆರೆಸ್ಸೆಸ್ ಷಡ್ಯಂತ್ರದ ವಿರುದ್ಧ ಹೋರಾಟಕ್ಕೆ ಎರಡನೇ ಸ್ವಾತಂತ್ರ್ಯ ಸಂಗ್ರಾಮವೇ ನಡೆಯಬೇಕಿದೆ: ಬಿ.ಕೆ. ಹರಿಪ್ರಸಾದ್

ಬೆಂಗಳೂರು: ಆರೆಸ್ಸೆಸ್ ನವರು ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಇರಲಿಲ್ಲ, ಇವತ್ತು ಸಂವಿಧಾನವನ್ನು ಮೊಟಕುಗೊಳಿಸಲು ಎಲ್ಲ ರೀತಿಯ ಷಡ್ಯಂತ್ರಗಳನ್ನು ಮಾಡುತ್ತಿದ್ದಾರೆ. ಈ ಹೋರಾಟ ಕೇವಲ ಮುಖ್ಯಮಂತ್ರಿಗಳೊಬ್ಬರಿಂದ ಸಾಧ್ಯವಿಲ್ಲ, ಇದಕ್ಕಾಗಿ ಎರಡನೇ ಸ್ವಾತಂತ್ರ್ಯ ಸಂಗ್ರಾಮವೇ ನಡೆಯಬೇಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ಶನಿವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ಎಸ್‍ಐಆರ್ ವಿರೋಧಿ ಒಕ್ಕೂಟದ ವತಿಯಿಂದ ಹಮ್ಮಿಕೊಂಡಿದ್ದ ‘ಎಸ್‍ಐಆರ್ ವಿರೋಧಿ ಬೃಹತ್ ಪ್ರತಿರೋಧ ಸಮಾವೇಶ’ದಲ್ಲಿ ಮಾತನಾಡಿದ ಅವರು, ಚುನಾವಣಾ ಆಯೋಗದಂತಹ ಸಾಂವಿಧಾನಿಕ ಸಂಸ್ಥೆಗಳಲ್ಲಿ ಬಲಪಂಥೀಯರೇ ತುಂಬಿದ್ದಾರೆ. ಜ್ಞಾನೇಶ್ ಕುಮಾರ್ ಅಂತಹ ಅಧಿಕಾರಿಗಳು ಜನಪ್ರತಿನಿಧಿಗಳನ್ನೇ ಭೇಟಿಯಾಗುವುದಿಲ್ಲ ಎಂದರೆ, ನ್ಯಾಯಯುತ ಮತದಾನವನ್ನು ಇವರಿಂದ ನಿರೀಕ್ಷಿಸಲು ಸಾಧ್ಯವೇ? ಎಂದು ಪ್ರಶ್ನಿಸಿದರು.
ನಾನು ರಾಜಕೀಯಕ್ಕೆ ಬಂದಿರುವುದೇ ಭೇದಭಾವಗಳನ್ನು ತೊಡೆದು ಹಾಕಲು. ವಿದ್ಯಾರ್ಥಿ ದೆಸೆಯಿಂದಲೂ ಅನ್ಯಾಯಗಳನ್ನು ಕಂಡಿದ್ದೇನೆ. ಚುನಾವಣಾ ಬೂತ್‍ಗಳಲ್ಲಿ ದಲಿತರು ಮತ್ತು ತಳಸಮುದಾಯದವರ ಮತಗಳನ್ನು ಅಳಿಸಿ ಹಾಕುತ್ತಿದ್ದ ದೃಶ್ಯಗಳನ್ನು ಕಣ್ಣಾರೆ ಕಂಡಿದ್ದೇನೆ ಎಂದು ಹರಿಪ್ರಸಾದ್ ಹೇಳಿದರು.
ಸಂವಿಧಾನ ವಿರೋಧಿ ಶಕ್ತಿಗಳು ದೇಶದ ಏಕತೆಯನ್ನು ಒಡೆಯಲು ಹೊಂಚು ಹಾಕುತ್ತಿದ್ದಾರೆ. ಇವರೇ ದೇಶಪ್ರೇಮಿಗಳು ಎಂದು ಕಥೆಗಳನ್ನು ಹೆಣೆಯುತ್ತಾರೆ. ಅಂದಿನ ಕಾಲದ ರಾಜರು-ಮಂತ್ರಿಗಳು ಶ್ರಮಿಕರನ್ನು ನಿರ್ಲಕ್ಷಿಸಿದ್ದರಿಂದಲೇ ದೇಶ ಲೂಟಿಯಾಯಿತು. ಇಂದು ಅದೇ ತಪ್ಪು ಮರುಕಳಿಸುತ್ತಿದೆ. ಬಿಜೆಪಿಗೆ ನಾನು ಸ್ಪಷ್ಟವಾಗಿ ಹೇಳುತ್ತೇನೆ, ಇಂತಹ ಜನವಿರೋಧಿ ನೀತಿಗಳಿಂದಾಗಿ ನಾಳೆ ದೇಶವನ್ನು ರಕ್ಷಿಸಲು ಜನರೇ ಸಿಗುವುದಿಲ್ಲ ಎಂದು ಹೇಳಿದರು.
ನರೇಂದ್ರ ಮೋದಿಯವರು ನಾಗರಿಕರನ್ನು ತಮ್ಮ ಗುರುತು ಹಾಗೂ ಅರ್ಹತೆಯನ್ನು ಸಾಬೀತುಪಡಿಸಲು ದಾಖಲೆಗಳನ್ನು ಸಲ್ಲಿಸುವಂತೆ ಕೇಳುತ್ತಾರೆ. ಆದರೆ ಅವರು ಮಾತ್ರ ತಮ್ಮ ಪದವಿ ಪ್ರಮಾಣಪತ್ರವನ್ನೇ ತೋರಿಸಿಲ್ಲ ಎಂದು ಬಿ.ಕೆ.ಹರಿಪ್ರಸಾದ್ ನುಡಿದರು.






