ದ್ವಿತೀಯ ಪಿಯುಸಿ ಪರೀಕ್ಷೆ-2ರ ಫಲಿತಾಂಶ ಪ್ರಕಟ; ಶೇ.40.39ರಷ್ಟು ಉತ್ತೀರ್ಣತೆ ದಾಖಲು

ಸಾಂದರ್ಭಿಕ ಚಿತ್ರ (AI)
ಬೆಂಗಳೂರು: 2026ರ ದ್ವಿತೀಯ ಪಿಯುಸಿ ಪರೀಕ್ಷೆ-2ರ ಫಲಿತಾಂಶ ಪ್ರಕಟವಾಗಿದ್ದು, ಹೊಸಬರು, ಪುನರಾವರ್ತಿತ ಹಾಗೂ ಖಾಸಗಿ ಸೇರಿ 1,20,410 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಈ ಪೈಕಿ 48,635 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.40.39ರಷ್ಟು ಫಲಿತಾಂಶ ದಾಖಲಾಗಿದೆ. ಈ ಮೂಲಕ 2026ರ ದ್ವಿತೀಯ ಪಿಯುಸಿ ಪರೀಕ್ಷೆ-1 ಮತ್ತು ಪರೀಕ್ಷೆ-2ರ ಕ್ರೂಢೀಕೃತ ಫಲಿತಾಂಶವು ಶೇ.86.72ರಷ್ಟಕ್ಕೆ ಏರಿಕೆಯಾಗಿದೆ.
ಪಿಯುಸಿ ಪರೀಕ್ಷೆ-2 ಅನ್ನು ಬರೆದ 80,535 ಮಂದಿ ಹೊಸಬರ ಪೈಕಿ 36,764 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಮೂಲಕ ಹೊಸಬರ ಫಲಿತಾಂಶ ಶೇ.45.65ರಷ್ಟು ದಾಖಲಾಗಿದೆ. 34,419 ಪುನರಾವರ್ತಿತ ವಿದ್ಯಾರ್ಥಿಗಳ ಪೈಕಿ 10,279 (ಶೇ.29.86) ಮಂದಿ ಉತ್ತೀರ್ಣರಾಗಿದ್ದಾರೆ. 5,456 ಖಾಸಗಿ ವಿದ್ಯಾರ್ಥಿಗಳ ಪೈಕಿ 1,562 (ಶೇ.28.63) ಮಂದಿ ಉತ್ತೀರ್ಣರಾಗಿದ್ದಾರೆ.
ಪರೀಕ್ಷೆ-2ರಲ್ಲಿ 19,367 ಮಂದಿ ಬಾಲಕರು ಉತ್ತೀರ್ಣರಾಗಿದ್ದು, ಫಲಿತಾಂಶ ಶೇ.44ರಷ್ಟು ದಾಖಲಾಗಿದೆ. 17,397 ಬಾಲಕಿಯರು ಉತ್ತೀರ್ಣರಾಗಿದ್ದು, ಶೇ.46ರಷ್ಟು ಫಲಿತಾಂಶ ದಾಖಲಾಗಿದೆ. 26,249 ನಗರ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.45ರಷ್ಟು ಫಲಿತಾಂಶ ದಾಖಲಾಗಿದೆ. 10,489 ಗ್ರಾಮಾಂತರ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.44ರಷ್ಟು ಫಲಿತಾಂಶ ದಾಖಲಾಗಿದೆ.
62 ಮಂದಿ ಉನ್ನತ ಶ್ರೇಣಿಯಲ್ಲಿ, 8,086 ಮಂದಿ ಪ್ರಥಮ ದರ್ಜೆಯಲ್ಲಿ, 16,940 ಮಂದಿ ದ್ವಿತೀಯ ದರ್ಜೆಯಲ್ಲಿ, 11,676 ಮಂದಿ ಉತ್ತೀರ್ಣ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ಕನ್ನಡ ಮಾಧ್ಯಮದಲ್ಲಿ 17,642 ಮಂದಿ ಉತ್ತೀರ್ಣರಾಗಿದ್ದು, ಶೇ.44ರಷ್ಟು ಫಲಿತಾಂಶ ದಾಖಲಾಗಿದೆ. ಇಂಗ್ಲಿಷ್ ಮಾಧ್ಯಮದಲ್ಲಿ 19,122 ಮಂದಿ ಉತ್ತೀರ್ಣರಾಗಿದ್ದು, ಶೇ.47ರಷ್ಟು ಫಲಿತಾಂಶ ದಾಖಲಾಗಿದೆ.
ಸರಕಾರಿ ಪಿಯು ಕಾಲೇಜುಗಳ ಫಲಿತಾಂಶವು ಶೇ.42, ಅನುದಾನಿತ ಪಿಯು ಕಾಲೇಜುಗಳ ಫಲಿತಾಂಶವು ಶೇ.56, ಖಾಸಗಿ ಶಾಲೆಗಳ ಫಲಿತಾಂಶ ಶೇ.49, ಜಿಬಿಎ ಶಾಲೆಗಳ ಫಲಿತಾಂಶ ಶೇ.34 ಹಾಗೂ ವಸತಿ ಶಾಲೆಗಳ ಫಲಿತಾಂಶ ಶೇ.54ರಷ್ಟಿದೆ.
ಕೇವಲ ಹೊಸಬರ ಕ್ರೂಢೀಕೃತ ಫಲಿತಾಂಶ ಶೇ.92.25ಕ್ಕೆ ಏರಿಕೆ: 2026ರ ದ್ವಿತೀಯ ಪಿಯುಸಿ ಪರೀಕ್ಷೆ-1 ಮತ್ತು ಪರೀಕ್ಷೆ-2ರ ಕ್ರೂಢೀಕೃತ ಫಲಿತಾಂಶವು ಶೇ.86.72ರಷ್ಟಿದೆ. ಆದರೆ ಕೇವಲ ಹೊಸಬರ ಕ್ರೂಢೀಕೃತ ಫಲಿತಾಂಶವು ಶೇ.92.25ಕ್ಕೆ ಏರಿಕೆಯಾಗಿದೆ. ಎರಡು ಪರೀಕ್ಷೆಗಳನ್ನು ಒಳಗೊಂಡಂತೆ 2026ರ ದ್ವಿತೀಯ ಪಿಯುಸಿ ಪರೀಕ್ಷೆಗೆ 6,34,233 ಹೊಸಬರು ಹಾಜರಾಗಿದ್ದು, 5,85,077 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಬಾಲಕರ ಫಲಿತಾಂಶ ಶೇ.90.52, ಬಾಲಕಿಯರ ಫಲಿತಾಂಶ ಶೇ.93.62ರಷ್ಟು ದಾಖಲಾಗಿದೆ. ನಗರ ವಿದ್ಯಾರ್ಥಿಗಳ ಫಲಿತಾಂಶ ಶೇ.92.01ರಷ್ಟು, ಗ್ರಾಮಾಂತರ ವಿದ್ಯಾರ್ಥಿಗಳ ಫಲಿತಾಂಶ ಶೇ.92.77ಕ್ಕೆ ಏರಿಕೆಯಾಗಿದೆ.
ಒಟ್ಟಾರೆ 2026ರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸರಕಾರಿ ಪಿಯು ಕಾಲೇಜುಗಳು ಶೇ.87, ಅನುದಾನಿತ ಕಾಲೇಜುಗಳು ಶೇ.89, ಖಾಸಗಿ ಕಾಲೇಜುಗಳು ಶೇ.95, ಜಿಬಿಎ ಪಿಯು ಕಾಲೇಜುಗಳು ಶೇ.84 ಹಾಗೂ ವಸತಿ ಶಾಲೆಗಳು ಶೇ.92ರಷ್ಟು ಫಲಿತಾಂಶ ದಾಖಲಿಸಿವೆ. ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಫಲಿತಾಂಶ ಶೇ.85.60 ಹಾಗೂ ಇಂಗ್ಲಿಷ್ ಮಾಧ್ಯಮ ವಿದ್ಯಾರ್ಥಿಗಳ ಫಲಿತಾಂಶ ಶೇ.95.01ರಷ್ಟಕ್ಕೆ ಏರಿಕೆಯಾಗಿದೆ.
‘2026ರ ದ್ವಿತೀಯ ಪಿಯುಸಿಯಲ್ಲಿ ಹೊಸಬರ ಕ್ರೂಢೀಕೃತ ಫಲಿತಾಂಶವು ಶೇ.92.25ರಷ್ಟಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿಕೊಂಡರೆ ಈ ವರ್ಷ ಶೇ.7.06ರಷ್ಟು ಹೆಚ್ಚಳವಾಗಿದೆ. 2025ರಲ್ಲಿ ಶೇ.85.19ರಷ್ಟು ಫಲಿತಾಂಶ ದಾಖಲಾಗಿತ್ತು. ಈ ಬಾರಿ ಸರಕಾರಿ ಪಿಯು ಕಾಲೇಜುಗಳ ಫಲಿತಾಂಶ ಶೇ.87ರಷ್ಟಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿಕೊಂಡರೆ ಶೇ.13.99ರಷ್ಟು ಹೆಚ್ಚಳವಾಗಿದೆ. ಹಿಂದಿನ ವರ್ಷ ಸರಕಾರಿ ಪಿಯು ಕಾಲೇಜುಗಳ ಫಲಿತಾಂಶ ಶೇ.73.04ರಷ್ಟಿತ್ತು. ಹೀಗಾಗಿ ಪಿಯುಸಿ ಫಲಿತಾಂಶದಲ್ಲಿ ಕಂಡುಬಂದಿರುವ ಪ್ರಗತಿ ಸಂತೋಷ ತಂದಿದೆ’
-ಮಧು ಬಂಗಾರಪ್ಪ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ






