ದ್ವಿತೀಯ ಪಿಯುಸಿ ಪರೀಕ್ಷೆ-3ರ ಫಲಿತಾಂಶ ಪ್ರಕಟ : 22,446 ವಿದ್ಯಾರ್ಥಿಗಳು ಉತ್ತೀರ್ಣ

ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು : ದ್ವಿತೀಯ ಪಿಯುಸಿ ಪರೀಕ್ಷೆ-3ರ ಫಲಿತಾಂಶ ಪ್ರಕಟವಾಗಿದ್ದು, ಪರೀಕ್ಷೆಯನ್ನು ಬರೆದ 1,11,002 ವಿದ್ಯಾರ್ಥಿಗಳ ಪೈಕಿ 22,446 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಶೇ.20.22ರಷ್ಟು ಉತ್ತೀರ್ಣತೆ ದಾಖಲಾಗಿದೆ.
ಪರೀಕ್ಷೆಯನ್ನು ಬರೆದ 82,683 ಪ್ರೆಶರ್ಸ್ ವಿದ್ಯಾರ್ಥಿಗಳ ಪೈಕಿ 18,834 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಹೊಸಬರ ವಿದ್ಯಾರ್ಥಿಗಳ ಉತ್ತೀರ್ಣತೆ ಶೇ.22.78ರಷ್ಟಿದೆ.
ಫಲಿತಾಂಶ ಸುಧಾರಣೆಗಾಗಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಲ್ಲಿ ಉತ್ತಮ ಸಾಧನೆ ಕಂಡುಬಂದಿದೆ. 2025ರ ಪರೀಕ್ಷೆ-3ರಲ್ಲಿ ಒಟ್ಟು 17,398 ವಿದ್ಯಾರ್ಥಿಗಳು ಅಂಕ ಸುಧಾರಣೆಗೆ ಹಾಜರಾಗಿದ್ದು, ಅವರಲ್ಲಿ 11,937 ವಿದ್ಯಾರ್ಥಿಗಳು ತಮ್ಮ ಅಂಕಗಳನ್ನು ಹೆಚ್ಚಿಸಿಕೊಂಡಿದ್ದಾರೆ. 2024ರ ಪರೀಕ್ಷೆ-3ರಲ್ಲಿ ಈ ಸಂಖ್ಯೆ 7,420 ಆಗಿತ್ತು.
ಒಟ್ಟಾರೆ ದ್ವಿತೀಯ ಪಿಯು ಪರೀಕ್ಷೆಗಳಲ್ಲಿ ಹೊಸಬರು 6,39,800 ವಿದ್ಯಾರ್ಥಿಗಳು ಹಾಜರಾಗಿದ್ದು, 5,45,032 ಮಂದಿ ಉತ್ತೀರ್ಣರಾಗಿದ್ದಾರೆ. ಉತ್ತೀರ್ಣತಾ ಪ್ರಮಾಣ ಶೇ.85.19ರಷ್ಟಿದೆ. ಒಟ್ಟಾರೆ(ಖಾಸಗಿ ಮತ್ತು ರಿಪೀಟರ್ಸ್, ಹೊಸಬರು ಸೇರಿ) ಒಟ್ಟು 7,09,968 ವಿದ್ಯಾರ್ಥಿಗಳು ಹಾಜರಾಗಿದ್ದು, 5,66,636 ಮಂದಿ ಉತ್ತೀರ್ಣರಾಗಿದ್ದಾರೆ. 2025ರ ದ್ವಿತೀಯ ಪಿಯುಸಿ ಪರೀಕ್ಷೆಯ ಕ್ರೋಢೀಕೃತ ಉತ್ತೀರ್ಣತಾ ಪ್ರಮಾಣ ಶೇ.79.81ರಷ್ಟಿದೆ.
ವಿದ್ಯಾರ್ಥಿಗಳಿಗೆ ತಮ್ಮ ಶ್ರೇಣಿಯನ್ನು ಉತ್ತಮಪಡಿಸಿಕೊಳ್ಳಲು ಸರಕಾರ ನೀಡಿದ ಅವಕಾಶದ ಸದ್ಬಳಕೆಯಾಗುತ್ತಿದೆ. ರಸಾಯನಶಾಸ್ತ್ರ, ಭೌತಶಾಸ್ತ್ರ ಮತ್ತು ಗಣಿತ ವಿಷಯಗಳಲ್ಲಿ ಅಂಕ ಸುಧಾರಣೆಗೆ ಮುಂದಾದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದು, ಇದು ಸಿಇಟಿ ರ್ಯಾಂಕಿಂಗ್ ಉತ್ತಮಪಡಿಸಿಕೊಳ್ಳುವ ವಿದ್ಯಾರ್ಥಿಗಳ ಬಯಕೆಯನ್ನು ಪ್ರತಿಬಿಂಬಿಸುತ್ತದೆ. ದ್ವಿತೀಯ ಪಿಯುಸಿ ಪರೀಕ್ಷೆ-1, ಪರೀಕ್ಷೆ-2, ಮತ್ತು ಪರೀಕ್ಷೆ-3ರ ಕ್ರೋಢೀಕೃತ ಫಲಿತಾಂಶವು ರಾಜ್ಯದ ವಿದ್ಯಾರ್ಥಿಗಳ ಒಟ್ಟಾರೆ ಶೈಕ್ಷಣಿಕ ಪ್ರಗತಿಯನ್ನು ಎತ್ತಿ ತೋರಿಸುತ್ತದೆ.
-ಮಧು ಬಂಗಾರಪ್ಪ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ







