200 ಎಕರೆಯಲ್ಲಿ ಸೆಮಿಕಂಡಕ್ಟರ್ ಪಾರ್ಕ್ : ಸಚಿವ ಎಂ.ಬಿ.ಪಾಟೀಲ್

ಎಂ.ಬಿ.ಪಾಟೀಲ್ | screengrab : youtube/Bengaluru Tech Summit
ಬೆಂಗಳೂರು : ಆಧುನಿಕ ಬಗೆಯ ಕೈಗಾರಿಕೋದ್ಯಮಗಳ ಮಹತ್ವವನ್ನು ಅರಿತಿರುವ ರಾಜ್ಯ ಸರಕಾರವು 200 ಎಕರೆ ಜಾಗದಲ್ಲಿ ಸೆಮಿಕಂಡಕ್ಟರ್ ಪಾರ್ಕ್ ಅಭಿವೃದ್ಧಿಪಡಿಸಲಿದೆ. ಇಲ್ಲಿ ಈ ತರಹದ ಕಂಪನಿಗಳಿಗೆ ಬೇಕಾಗುವ ಸಕಲ ಸೌಕರ್ಯಗಳನ್ನೂ ಕಲ್ಪಿಸಲಾಗುವುದು. ಇದು ದೇಶ ಮತ್ತು ರಾಜ್ಯ ಮಟ್ಟದಲ್ಲಿ ಸೆಮಿಕಂಡಕ್ಟರ್ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲ ರೀತಿಯ ನಾವೀನ್ಯತಾ ಕೇಂದ್ರವಾಗಿ ಕೆಲಸ ಮಾಡಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಮಂಗಳವಾರ ಇಲ್ಲಿನ ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಆರಂಭವಾದ ಮೂರು ದಿನಗಳ ಬೆಂಗಳೂರು ತಂತ್ರಜ್ಞಾನ ಸಮಾವೇಶದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಇಲಾಖೆಯು ಮುಂಚೂಣಿ ತಂತ್ರಜ್ಞಾನ ಕಂಪನಿಗಳಿಂದ ಮತ್ತು ಪ್ರಮುಖ ಆ್ಯಂಕರ್ ಹೂಡಿಕೆದಾರರಿಂದ ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ಆದ್ಯತೆ ನೀಡಿದೆ. ಇಂತಹ ಹೂಡಿಕೆಯು ಕೈಗಾರಿಕೋದ್ಯಮದ ವಿವಿಧ ವಲಯಗಳಿಗೆ ಹರಿದು ಬರಬೇಕು ಎನ್ನುವುದು ಸರಕಾರದ ಗುರಿಯಾಗಿದೆ. ಇಂತಹ ವಲಯಗಳಲ್ಲಿ ಡ್ರೋನ್, ಸೆಮಿಕಂಡಕ್ಟರ್ ಸಾಧನಗಳು ಮತ್ತು ಸೌರ ವಿದ್ಯುತ್ ಎಲ್ಲವನ್ನೂ ಪರಿಗಣಿಸಲಾಗಿದೆ. ಇದರ ಜೊತೆಯಲ್ಲಿ ಇಂಡಸ್ಟ್ರಿ 5.0 ಮತ್ತು ಇನ್ನಿತರ ಅತ್ಯಾಧುನಿಕ ಕೈಗಾರಿಕಾ ವಿಧಾನಗಳನ್ನೂ ಗಂಭೀರವಾಗಿ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕೈಗಾರಿಕೆಗಳು ಬೆಳೆಯಬೇಕು ಮತ್ತು ಹೂಡಿಕೆದಾರರು ನಮ್ಮಲ್ಲಿಗೆ ಬರಬೇಕೆಂದರೆ, ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಪರಿಸರ ಚೆನ್ನಾಗಿರಬೇಕು. ನಮ್ಮಲ್ಲಿ 800ಕ್ಕೂ ಹೆಚ್ಚು ಆರ್ & ಡಿ ಕೇಂದ್ರಗಳು, 100ಕ್ಕೂ ಅಧಿಕ ಚಿಪ್ ವಿನ್ಯಾಸ ಕಂಪನಿಗಳು ಮತ್ತು 18,300 ನವೋದ್ಯಮಗಳು ಇವೆ. ನಮ್ಮಲ್ಲಿರುವ ಆರ್ ಮತ್ತು ಡಿ ಕೇಂದ್ರಗಳು ಕೃತಕ ಬುದ್ಧಿಮತ್ತೆ, ಡೀಪ್ ಟೆಕ್, ಕ್ವಾಂಟಂ ಕಂಪ್ಯೂಟಿಂಗ್, ಸ್ಪೇಸ್-ಟೆಕ್ ಮುಂತಾದ ಅತ್ಯಾಧುನಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿವೆ. ಉದ್ದೇಶಿತ ಕ್ವಿನ್ ಸಿಟಿಗೆ ಕೊಟ್ಟಿರುವ 5,000 ಎಕರೆ ಜಾಗದಲ್ಲಿ ಆರ್ ಮತ್ತು ಡಿ ಕೇಂದ್ರಗಳಿಗಾಗಿ ಅಗತ್ಯವಿರುವಷ್ಟು ಸ್ಥಳವನ್ನು ಮೀಸಲಿಟ್ಟು, ಅದಕ್ಕೆ ತಕ್ಕ ಕಾರ್ಯಪರಿಸರ ಅಭಿವೃದ್ಧಿ ಪಡಿಸಲಿದ್ದೇವೆ ಎಂದು ಅವರು ವಿವರಿಸಿದ್ದಾರೆ.
ರಾಜ್ಯದಲ್ಲಿ ಹಲವು ತಂತ್ರಜ್ಞಾನ ಕಂಪನಿಗಳು ಎಐ, ಎಂಎಲ್ (ಮಷೀನ್ ಲರ್ನಿಂಗ್), ಕ್ವಾಂಟಂ, ರೋಬೋಟಿಕ್ಸ್, ಆಧುನಿಕ ತಯಾರಿಕೆ ಮತ್ತು ಸುಸ್ಥಿರ ನಾವೀನ್ಯತೆಯ ಕ್ಷೇತ್ರಗಳಲ್ಲಿ ಸಕ್ರಿಯವಾಗಿವೆ. ಇಂತಹ ಕಂಪನಿಗಳಿಗೆ ಬೆಂಬಲ ಕೊಡಲೆಂದೇ ಸರಕಾರವು 600 ಕೋಟಿ ರೂ.ಗಳನ್ನು ಒದಗಿಸಿದೆ. ರಾಜ್ಯವು ಡೀಪ್ ಸೈನ್ಸ್ ಮತ್ತು ಮುಂಚೂಣಿ ತಂತ್ರಜ್ಞಾನ ಎರಡರಲ್ಲೂ ಅಗ್ರಸ್ಥಾನದಲ್ಲಿ ಇರಬೇಕೆನ್ನುವುದು ಸರಕಾರದ ಸಂಕಲ್ಪವಾಗಿದೆ. ಇದಕ್ಕೆ ಪೂರಕವಾಗಿ ಇತ್ತೀಚೆಗೆ ಧಾರವಾಡದಲ್ಲಿ ಎಐ ಮತ್ತು ಕ್ವಾಂಟಂ ಕಂಪ್ಯೂಟಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ಉತ್ಕೃಷ್ಟತಾ ಕೇಂದ್ರವನ್ನು ಪ್ರಾರಂಭಿಸಲು ತೀರ್ಮಾನಿಸಲಾಗಿದೆ. ಇನ್ನೊಂದೆಡೆಯಲ್ಲಿ ಜೈವಿಕ ತಂತ್ರಜ್ಞಾನ, ಸೈಬರ್ ಸೆಕ್ಯುರಿಟಿ ತರಹದ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಕೈಗಾರಿಕೆಗಳು ಶಿಕ್ಷಣ ಸಂಸ್ಥೆಗಳೊಂದಿಗೆ ಕೈಜೋಡಿಸಿವೆ ಎಂದು ಪಾಟೀಲ್ ನುಡಿದಿದ್ದಾರೆ.
ರಾಜ್ಯವು ಇ.ಎಸ್.ಡಿ.ಎಂ., ಸಂಚಾರ ವ್ಯವಸ್ಥೆ, ಜೈವಿಕ ತಂತ್ರಜ್ಞಾನ ಮತ್ತು ನವೋದ್ಯಮ ಪರಿಪೋಷಣೆಗೆ ಸಂಬಂಧಿಸಿದಂತೆ ಪುರೋಗಾಮಿ ನೀತಿಗಳನ್ನು ಹೊಂದಿದೆ. ಇದಲ್ಲದೆ ಜಪಾನ್, ಅಮೆರಿಕ, ಜರ್ಮನಿ ಮತ್ತು ಸಿಂಗಪುರದಂತಹ ರಾಷ್ಟ್ರಗಳೊಂದಿಗೆ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
Glimpses from the inaugural ceremony of Asia’s largest tech conclave - Bengaluru Tech Summit 2025, the 28th edition of BTS.
— M B Patil (@MBPatil) November 18, 2025
With delegations from around the world, including Ambassadors, Ministers, Consuls Generals, innovators, entrepreneurs, industry leaders, diplomats, and… pic.twitter.com/zZbJvgcOm0







