ಕಾಂಗ್ರೆಸ್ ಹಿರಿಯ ಶಾಸಕ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ನಿಧನ

ಶಾಮನೂರು ಶಿವಶಂಕರಪ್ಪ
ಬೆಂಗಳೂರು : ಹಿರಿಯ ರಾಜಕೀಯ ಮುತ್ಸದ್ದಿ, ಮಾಜಿ ಸಚಿವ, ಕಾಂಗ್ರೆಸ್ ಪಕ್ಷದ ಹಾಲಿ ಶಾಸಕ ಹಾಗೂ ಅಖಿಲ ಭಾರತ ವೀರಶೈವ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ನಿಧನರಾಗಿದ್ದಾರೆ.
ಶಿವಶಂಕರಪ್ಪ ಅವರಿಗೆ 94 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ತುರ್ತು ನಿಗಾ ಘಟಕದಲ್ಲಿರಿಸಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ರವಿವಾರ ಸಂಜೆ 6.20ರ ಸುಮಾರಿಗೆ ನಿಧನರಾಗಿದ್ದಾರೆ.
ಶಂಕರಪ್ಪ ಅವರು ನಾಲ್ವರು ಪುತ್ರಿಯರು, ಮೂವರು ಗಂಡು ಮಕ್ಕಳು ಸೇರಿದಂತೆ ಅಪಾರ ಸಂಖ್ಯೆಯ ಬಂಧು-ಬಳಗವನ್ನು ಅಗಲಿದ್ದಾರೆ. ರಾಜ್ಯ ರಾಜಕೀಯದಲ್ಲಿ ಅಜಾತಶತ್ರು ಎಂದೇ ಗುರುತಿಸಿಕೊಂಡಿದ್ದ ಶಾಮನೂರು ಶಿವಶಂಕರಪ್ಪ 1931 ಜೂನ್ 16ರಂದು ಶಾಮನೂರು ಕಲ್ಲಪ್ಪ ಮತ್ತು ಸಾವಿತ್ರಮ್ಮ ದಂಪತಿ ಪುತ್ರನಾಗಿ ದಾವಣಗೆರೆ ಜಿಲ್ಲೆಯಲ್ಲಿ ಜನಿಸಿದರು.
ತಂದೆಯ 'ಶಾಮನೂರು ಕಲ್ಲಪ್ಪ ಅಂಡ್ ಸನ್ಸ್' ಅಂಗಡಿಯಲ್ಲಿ ವ್ಯಾಪಾರ, ಉದ್ಯಮಿಯಾಗಿ ಬೆಳೆದರು. 1954ರಲ್ಲಿ ಚನ್ನಗಿರಿ ತಾಲ್ಲೂಕಿನ ವಡ್ನಾಳ್ ಗ್ರಾಮದ ಪಾರ್ವತಮ್ಮ ಅವರೊಂದಿಗೆ ವಿವಾಹವಾಯಿತು. ದಂಪತಿಗೆ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಸೇರಿ ಎಸ್.ಎಸ್. ಬಕ್ಕೇಶ್, ಎಸ್.ಎಸ್ ಗಣೇಶ್ ಎಂಬ ಮೂವರು ಪುತ್ರರು, ಡಾ. ಮಂಜುಳಾ ಶಿವಶಂಕರ್, ಸುಧಾ ಪಾಟೀಲ್, ಡಾ. ಶೈಲಜಾ ಭಟ್ಟಾಚಾರ್ಯ, ಮೀನಾ ಡಾ. ಶರಣ್ ಪಾಟೀಲ್ ಎಂಬ ನಾಲ್ವರು ಪುತ್ರಿಯರಿದ್ದಾರೆ.
1969ರಲ್ಲಿ ನಗರಸಭಾ ಸದಸ್ಯರಾಗಿ ಮೊದಲ ಬಾರಿಗೆ ಆಯ್ಕೆಯಾದರು. 1971 ರಲ್ಲಿ ನಗರಸಭಾ ಸದಸ್ಯರಾಗಿ ಪುನರಾಯ್ಕೆಯಾದರು. 1972ರಲ್ಲಿ ಬಾಪೂಜಿ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿಯಾಗಿ ನೇಮಕಗೊಂಡರು. 1971ರಿಂದ 73ರ ವರೆಗೆ ದಾವಣಗೆರೆ ನಗರಸಭೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಅವರು ದಶಕಗಳ ಕಾಲ ಸಕ್ರಿಯ ರಾಜಕಾರಣದಲ್ಲಿದ್ದು, ಆರು ಬಾರಿ ಶಾಸಕರಾಗಿ ಹಾಗೂ ಒಂದು ಬಾರಿ ಸಂಸದರಾಗಿ ಸೇವೆ ಸಲ್ಲಿಸಿದ್ದಾರೆ. ರಾಜ್ಯದ ವಿವಿಧ ಸರಕಾರಗಳಲ್ಲಿ ಪ್ರಮುಖ ಖಾತೆಗಳನ್ನು ನಿಭಾಯಿಸುವ ಮೂಲಕ ಸಚಿವರಾಗಿ ಅಪಾರ ಕೊಡುಗೆ ನೀಡಿದ್ದಾರೆ.
1994, 2003, 2008, 2013, 2018 ಮತ್ತು 2023ರಲ್ಲಿ ವಿಧಾನಸಭಾ ಸದಸ್ಯರಾಗಿ, 1998-99 ದಾವಣಗೆರೆ ಲೋಕಸಭಾ ಸದಸ್ಯರಾಗಿ ಆಯ್ಕೆಯಾದರು. 1999 ಲೋಕಸಭಾ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದರು. ಅವರು ಕೆಪಿಸಿಸಿ ಖಾಯಂ ಖಜಾಂಚಿಯಾಗಿ ಬಹು ವರ್ಷ ಸೇವೆ ಸಲ್ಲಿಸಿದ್ದಾರೆ.
ಮೃತರ ಪಾರ್ಥಿವ ಶರೀರವನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ನಾಳೆ(ಡಿ.15) ಶಾಮನೂರು ಶಿವಶಂಕರಪ್ಪ ಅವರ ಕಾರ್ಯ ಕ್ಷೇತ್ರ ದಾವಣಗೆರೆಗೆ ಕೊಂಡೊಯ್ಯಲಾಗುತ್ತದೆ. ದಾವಣಗೆರೆಯ ಬಾಪೂಜಿ ವಿದ್ಯಾಸಂಸ್ಥೆಯ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು. ಡಿ.15 ಅಥವಾ ಡಿ.16ರಂದು ಅವರ ಪತ್ನಿ ಪಾರ್ವತಮ್ಮ ಅವರ ಸಮಾಧಿ ಪಕ್ಕದಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.







