ಹಿರಿಯ ಪತ್ರಕರ್ತ ಟಿ.ಜೆ.ಎಸ್. ಜಾರ್ಜ್ ನಿಧನ

ಟಿ.ಜೆ.ಎಸ್. ಜಾರ್ಜ್ (Photo: X/@siddaramaiah)
ಬೆಂಗಳೂರು: ಹಿರಿಯ ಪತ್ರಕರ್ತ, ಲೇಖಕ ಹಾಗೂ ಸಂಪಾದಕ ಟಿ.ಜೆ.ಎಸ್. ಜಾರ್ಜ್ ಅವರು ಶುಕ್ರವಾರ ಬೆಂಗಳೂರಿನಲ್ಲಿ 97ನೇ ವಯಸ್ಸಿನಲ್ಲಿ ನಿಧನರಾದರು.
ಆರು ದಶಕಗಳಿಗೂ ಹೆಚ್ಚು ಕಾಲ ತೀಕ್ಷ್ಣ ಲೇಖನಿಗಳ ಮೂಲಕ ಭಾರತೀಯ ಹಾಗೂ ಅಂತರರಾಷ್ಟ್ರೀಯ ಪತ್ರಿಕೋದ್ಯಮವನ್ನು ಶ್ರೀಮಂತಗೊಳಿಸಿದ ಅವರು, ತನ್ನ ಧೈರ್ಯಶಾಲಿ ಧ್ವನಿ ಮತ್ತು ಅಸಾಧಾರಣ ಸಂಪಾದಕೀಯ ದೃಷ್ಟಿಕೋನಕ್ಕಾಗಿ ಹೆಸರುವಾಸಿಯಾಗಿದ್ದರು.
1975ರಲ್ಲಿ ಹಾಂಗ್ಕಾಂಗ್ನಲ್ಲಿ ಏಷ್ಯಾವೀಕ್ ಇಂಗ್ಲಿಷ್ ವಾರಪತ್ರಿಕೆಯನ್ನು ಸ್ಥಾಪಿಸಿ ಅದರ ಸ್ಥಾಪಕ ಸಂಪಾದಕರಾಗಿದ್ದ ಜಾರ್ಜ್, ಏಷ್ಯಾದ ಆಗುಹೋಗುಗಳನ್ನು ಜಾಗತಿಕ ಮಟ್ಟದಲ್ಲಿ ತಲುಪಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಭಾರತಕ್ಕೆ ಮರಳಿದ ನಂತರ, ʼದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ʼ ನಲ್ಲಿ “ಪಾಯಿಂಟ್ ಆಫ್ ವ್ಯೂ” ಎಂಬ ತಮ್ಮ ಜನಪ್ರಿಯ ಅಂಕಣದ ಮೂಲಕ ಭ್ರಷ್ಟಾಚಾರ, ಸಾಮಾಜಿಕ ಅನ್ಯಾಯ ಮತ್ತು ಧಾರ್ಮಿಕ ಅಸಹಿಷ್ಣುತೆಯ ವಿರುದ್ಧ ನಿರಂತರವಾಗಿ ಧ್ವನಿ ಎತ್ತಿದರು. 25 ವರ್ಷಗಳ ಕಾಲ (ಜೂನ್ 2022ರವರೆಗೆ) ಅವರು ಅಂಕಣಕಾರರಾಗಿ ಸೇವೆ ಸಲ್ಲಿಸಿದರು.
ಪ್ರತಿಷ್ಠಿತ ಲೇಖಕರಾಗಿದ್ದ ಜಾರ್ಜ್, ಲೀ ಕುವಾನ್ ಯೂಸ್ ಸಿಂಗಾಪುರ್, ದಿ ಲೈಫ್ ಅಂಡ್ ಟೈಮ್ಸ್ ಆಫ್ ನರ್ಗಿಸ್, ಕೃಷ್ಣ ಮೆನನ್: ಎ ಬಯಾಗ್ರಫಿ ಸೇರಿದಂತೆ ಹಲವು ಪ್ರಮುಖ ಕೃತಿಗಳನ್ನು ರಚಿಸಿದರು. ಇತ್ತೀಚಿನ ದಿ ಡಿಸ್ಮ್ಯಾಂಟ್ಲಿಂಗ್ ಆಫ್ ಇಂಡಿಯಾ: ಇನ್ 35 ಪೋರ್ಟ್ರೇಟ್ಸ್ ಕೃತಿ ರಾಜಕಾರಣಿಗಳು, ಕಲಾವಿದರು, ಕೈಗಾರಿಕೋದ್ಯಮಿಗಳು ಮತ್ತು ಸಾಮಾಜಿಕ ಹೋರಾಟಗಾರರ ಕುರಿತ ವಿಶ್ಲೇಷಣಾತ್ಮಕ ಪ್ರಬಂಧಗಳ ಸಂಕಲನವಾಗಿತ್ತು.
ಅವರ ಸೇವೆಗಾಗಿ 2011ರಲ್ಲಿ ಪದ್ಮಭೂಷಣ, 2008ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹಾಗೂ 2022ರಲ್ಲಿ ರೆಡ್ಇಂಕ್ ಲೈಫ್ಟೈಮ್ ಅಚೀವ್ಮೆಂಟ್ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಲಭಿಸಿವೆ. ಬಿಹಾರ ಸರ್ಕಾರದ ಭ್ರಷ್ಟಾಚಾರವನ್ನು ಬಹಿರಂಗಪಡಿಸಿದ ಹಿನ್ನೆಲೆಯಲ್ಲಿ ಸ್ವತಂತ್ರ ಭಾರತದ ಇತಿಹಾಸದಲ್ಲಿ ದೇಶದ್ರೋಹದ ಆರೋಪಕ್ಕೆ ಒಳಗಾದ ಮೊದಲ ಸಂಪಾದಕ ಅವರಾಗಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾರ್ಜ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. “ಹಿರಿಯ ಪತ್ರಕರ್ತ, ಸಂಪಾದಕ ಮತ್ತು ಲೇಖಕ ಟಿ.ಜೆ.ಎಸ್. ಜಾರ್ಜ್ ಅವರ ಅಗಲಿಕೆ ದುಃಖಕರ. ತಮ್ಮ ತೀಕ್ಷ್ಣ ಲೇಖನಿ ಮತ್ತು ರಾಜಿಯಾಗದ ಧ್ವನಿಯಿಂದ ಅವರು ಭಾರತೀಯ ಪತ್ರಿಕೋದ್ಯಮವನ್ನು ಶ್ರೀಮಂತಗೊಳಿಸಿದ್ದಾರೆ. ಅವರು ನಿಜವಾದ ಸಾರ್ವಜನಿಕ ಬುದ್ಧಿಜೀವಿಯಾಗಿದ್ದರು. ಅವರ ಕುಟುಂಬ, ಸಹೋದ್ಯೋಗಿಗಳು ಮತ್ತು ಅಭಿಮಾನಿಗಳಿಗೆ ಹೃತ್ಪೂರ್ವಕ ಸಂತಾಪಗಳು,” ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.
Saddened by the passing of veteran journalist, editor & author T J S George.
— Siddaramaiah (@siddaramaiah) October 3, 2025
With his sharp pen and uncompromising voice, he enriched Indian journalism for over six decades.
He was a true public intellectual who made readers think, question and engage.
My heartfelt condolences… pic.twitter.com/OA8IWilqaJ







