ಇಸ್ರೋ ಸಂಸ್ಥೆಯ ನಡೆಗೆ ಹಿರಿಯ ಸಾಹಿತಿಗಳು, ಬುದ್ಧಿಜೀವಿಗಳ ಖಂಡನೆ

ಫೋಟೋ- IANS
ಬೆಂಗಳೂರು: ಇಸ್ರೋದ ಕೆಲವು ವಿಜ್ಞಾನಿಗಳು ಚಂದ್ರಯಾನದ ಮಾದರಿಯನ್ನು ತಿರುಪತಿಗೆ ಕೊಂಡೊಯ್ದು ಪೂಜೆ ನೆರವೇರಿಸಿರುವುದಕ್ಕೆ ಹಿರಿಯ ಸಾಹಿತಿಗಳು ಹಾಗೂ ಬುದ್ಧಿಜೀವಿಗಳು ಖಂಡನೆ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಜಂಟಿ ಪತ್ರಿಕಾ ಪ್ರಕಟನೆ ಹೊರಡಿಸಿರುವ ಹಿರಿಯ ಸಾಹಿತಿಗಳು, ''ಚಂದ್ರಯಾನ-3ಕ್ಕೆ ಇಸ್ರೋ ಸಂಸ್ಥೆ ಸಜ್ಜಾಗಿರುವುದು ಅಭಿನಂದನೀಯ. ಇದೇ ಸಂದರ್ಭದಲ್ಲಿ ಮಂಗಳಯಾನದ ಯಶಸ್ವಿಗಾಗಿ ಇಸ್ರೋದ ಕೆಲವು ವಿಜ್ಞಾನಿಗಳು ಚಂದ್ರಯಾನದ ಮಾದರಿಯನ್ನು ತಿರುಪತಿಗೆ ಕೊಂಡೊಯ್ದು ಪೂಜೆ ನೆರವೇರಿಸಿರುವುದು ತಿಳಿದುಬಂದಿದೆ. ಪ್ರಪಂಚದಲ್ಲೇ ಖ್ಯಾತಿ ಹೊಂದಿರುವ ಇಸ್ರೋದಂತಹ ಸರ್ಕಾರಿ ಸ್ವಾಮ್ಯದ ಸಂಸ್ಥೆಯ ಈ ರೀತಿಯ ನಡೆ ಸಾಮಾನ್ಯ ಜನರನ್ನು ದಿಕ್ಕುತಪ್ಪಿಸುವಂತಿದೆ'' ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
''ಭಾರತದ ಸಂವಿಧಾನ 51 ಎ(ಹೆಚ್) ಪ್ರಕಾರ ವೈಜ್ಞಾನಿಕ ಮನೋವೃತ್ತಿ, ಮಾನವ ಹಿತಾಸಕ್ತಿ, ಜಿಜ್ಞಾಸೆ ಮತ್ತು ಸುಧಾರಣಾ ಮನೋಭಾವವನ್ನು ಬೆಳೆಸುವುದು ದೇಶದ ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ. ಆದರೆ ಇಸ್ರೋದ ವಿಜ್ಞಾನಿಗಳು ತಾವು ಸತತವಾಗಿ ಹಲವಾರು ವರ್ಷಗಳಿಂದ ಎಲ್ಲ ಎಡರು ತೊಡರುಗಳ ನಡುವೆ ಸಂಶೋಧಿಸಿ, ಪರೀಕ್ಷಿಸಿ, ರೂಪಿಸಿರುವ ಯಾನದ ಬಗೆಗೆ ತಮಗೇ ನಂಬಿಕೆ ಇಲ್ಲವೆಂಬುದನ್ನು ಈ ಮೂಲಕ ಸಾಬೀತುಗೊಳಿಸಿದ್ದಾರೆ. ಇದರಿಂದ ಆತ್ಮಸ್ಥೆರ್ಯ ಮತ್ತು ಸಂಶೋಧನೆಗಳ ಬಗೆಗೆ ಇರುವ ಅನುಮಾನಗಳು ವ್ಯಕ್ತವಾಗುತ್ತವೆ. ವೈಜ್ಞಾನಿಕ ನಡೆಯ ಬಗೆಗೆ ಈ ರೀತಿಯಾದ ಅನುಮಾನ ಮತ್ತು ಸಂಶಯ ದೃಷ್ಠಿಗೆ ಎಡೆಯಿಲ್ಲದಂತೆ ನಡೆದುಕೊಳ್ಳಬೇಕಾಗಿರುವುದು ವೈಜ್ಞಾನಿಕ ಸಂಸ್ಥೆಗಳ ಆಶಯವಾಗಿರುತ್ತದೆ. ಈ ನಿಟ್ಟಿನಲ್ಲಿ ಮೇಲೆ ಎಸಗಿರುವ ಕೃತ್ಯವು ಖಂಡನಾರ್ಹವಾಗಿದೆ ಮತ್ತು ಜನರನ್ನು ಮಾನಸಿಕವಾಗಿ ದುರ್ಬಲಗೊಳಿಸುತ್ತದೆ'' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
''ಈ ಹಿಂದೆಯೂ ಇದೇ ರೀತಿಯ ಅಚಾತುರ್ಯ ಆಗಿರುವುದನ್ನು ಅನೇಕ ಪ್ರಾಜ್ಞರು ಖಂಡಿಸಿದ್ದರೂ ಸಹ ಮತ್ತೊಮ್ಮೆ ಪುನರಾವರ್ತನೆಯಾಗಿರುವುದು ಒಪ್ಪತಕ್ಕ ವಿಚಾರವಲ್ಲ. ಈ ನಡೆಯು ಸಂಸ್ಥೆಯ ಸಂವಿದಾನವಿರೋಧಿ ಮನಸ್ಥಿತಿಯನ್ನು ಪ್ರದರ್ಶಿಸಿದೆ. ಇದಕ್ಕೆ ಕಾರಣೀಭೂತರಾದ ವ್ಯಕ್ತಿಗಳಿಗೆ ಸೂಕ್ತ ಸಲಹೆ ನೀಡುವುದು ಪ್ರಧಾನ ಮಂತ್ರಿಗಳ ವೈಜ್ಞಾನಿಕ ಸಲಹೆಗಾರರ ಕರ್ತವ್ಯವಾಗಿದೆ'' ಎಂದು ಹಿರಿಯ ಸಾಹಿತಿಗಳಾದ ಡಾ. ಮೂಡ್ನಾಕೂಡು ಚಿನ್ನಸ್ವಾಮಿ, ಪ್ರೊ. ಅಲ್ಲಮಪ್ರಭು ಬೆಟ್ಟದೂರು, ಡಾ. ವೆಂಕಟಯ್ಯ ಅಪ್ಪಗೆರೆ, ಸನತ್ ಕುಮಾರ್ ಬೆಳಗಲಿ, ಎಲ್. ಎನ್. ಮುಕುಂದರಾಜ್, ಡಾ. ಆರ್.ಎನ್.ರಾಜಾನಾಯಕ್, ಕೆ. ಬಿ. ಮಹದೇವಪ್ಪ, ನಾಗೇಶ್ ಅರಳಕುಪ್ಪೆ, ಡಾ. ಹುಲಿಕುಂಟೆ ಮೂರ್ತಿ, ಹೆಚ್.ಕೆ. ವಿವೇಕಾನಂದ, ಡಾ.ಹೆಚ್.ಕೆ.ಎಸ್.ಸ್ವಾಮಿ, ಡಿ. ಎಂ. ಮಂಜುನಾಥಸ್ವಾಮಿ, ಕೆ. ಮಹಂತೇಶ್, ಡಾ. ನಾಗೇಶ್ ಕೆ.ಎನ್, ಪ್ರಭಾ ಬೆಳವಂಗಲ, ಆಲ್ಬೂರು ಶಿವರಾಜ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







