ಕರಾವಳಿ ಭಾಗದಲ್ಲಿ ಉದ್ಯೋಗ ಸೃಷ್ಟಿ, ಪ್ರವಾಸೋದ್ಯಮ ಬೆಳವಣಿಗೆಗೆ ಪ್ರತ್ಯೇಕ ನೀತಿ: ಡಿ.ಕೆ. ಶಿವಕುಮಾರ್

ಬೆಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಸೇರಿದಂತೆ ಕರಾವಳಿ ಭಾಗದಲ್ಲಿ ಉದ್ಯೋಗ ಸೃಷ್ಟಿಗೆ ಹಾಗೂ ಪ್ರವಾಸೋದ್ಯಮ ಬೆಳವಣಿಗೆಗೆ ಪ್ರತ್ಯೇಕ ನೀತಿ ಮಾಡಬೇಕೆಂದು ಆಲೋಚನೆ ಮಾಡಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸ್ಪೀಕರ್ ಯು.ಟಿ.ಖಾದರ್, ಸಚಿವರಾದ ದಿನೇಶ್ ಗುಂಡೂರಾವ್, ಎಚ್.ಕೆ.ಪಾಟೀಲ್, ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಎರಡನೇ ಸಭೆಯನ್ನು ಮಂಗಳೂರಿನಲ್ಲಿ ನಡೆಸಲಾಗುವುದು. ಮುಂದಿನ ಸಭೆಗೆ ಯಾರನ್ನು ಆಹ್ವಾನ ಮಾಡಬೇಕೆಂದು ಸಲಹೆ ನೀಡಿದ್ದಾರೆ. ಈ ಸಭೆಯಲ್ಲಿ ಬಂಡವಾಳ ಹೂಡಿಕೆದಾರರು, ಕೇಂದ್ರ ಇಲಾಖೆ ಹಾಗೂ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳನ್ನು ಕರೆಯಲಾಗುತ್ತದೆ. ಕರಾವಳಿ ಭಾಗಕ್ಕೆ ಹೊಸರೂಪ ನೀಡಲಾಗುತ್ತದೆ ಎಂದು ತಿಳಿಸಿದರು.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಸಹಿತ ಕರಾವಳಿ ಭಾಗದ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಸಚಿವರುಗಳ ಜೊತೆ ಮೊಟ್ಟ ಮೊದಲ ಸಭೆ ನಡೆಸಲಾಯಿತು. ಅಧಿಕಾರಿಗಳೂ ಸಭೆಯಲ್ಲಿ ಹಾಜರಿದ್ದರು. ಪರಿಹಾರೋಪಾಯಗಳ ಬಗ್ಗೆ ಎಲ್ಲರೂ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ ಎಂದು ಶಿವಕುಮಾರ್ ನುಡಿದರು.





