ಅಧಿವೇಶನ | ಮೇಲ್ಮನೆಯಲ್ಲಿ ಖಾಜಿ ಅರ್ಷದ್ ಅಲಿಗೆ ಶ್ರದ್ಧಾಂಜಲಿ

ಬೆಂಗಳೂರು : ಬೀದರ್ ಜಿಲ್ಲೆಯ ಹೆಸರಾಂತ ಪತ್ರಕರ್ತ, ಸಜ್ಜನ ರಾಜಕಾರಣಿ, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಖಾಜಿ ಅರ್ಷದ್ ಅಲಿ ಅವರು ಮುತ್ಸದ್ದಿ ರಾಜಕಾರಣಿ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ತಿಳಿಸಿದ್ದಾರೆ.
ವಿಧಾನಪರಿಷತ್ತಿನಲ್ಲಿಂದು ಸಂತಾಪ ಸೂಚನೆ ನಿರ್ಣಯದ ಮೇಲೆ ಮಾತನಾಡಿದ ಅವರು, ವೃತ್ತಿಯಲ್ಲಿ ಪತ್ರಕರ್ತರಾಗಿದ್ದ ಖಾಜಿ ಅಲಿ ಅವರು ಹಿಂದಿಯಲ್ಲಿ ಬೀದರ್ ಕಿ ಅವಾಜ್ ಮತ್ತು ಉರ್ದು ಭಾಷೆಯಲ್ಲಿ ಸುರ್ಖ್ ಝಮೀನ್ ಎಂಬ ಎರಡು ಪತ್ರಿಕೆಗಳ ಸಂಪಾದಕರು ಮತ್ತು ಪ್ರಕಾಶಕರಾಗಿದ್ದರು. ನಾಡಿನ ವಿವಿಧ ಪತ್ರಿಕೆಗಳಿಗೆ ಲೇಖನಗಳನ್ನೂ ಬರೆಯುತ್ತಿದ್ದರು ಎಂದು ತಿಳಿಸಿದರು.
ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಬೀದರ್ ನಗರದ ಅಭಿವೃದ್ಧಿಗೆ ಶ್ರಮಿಸಿದ್ದ ಅಲಿ ಅವರು, ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿ,ದ್ರು. ಕಲ್ಯಾಣ ಕರ್ನಾಟಕದ ಮತ್ತು ನಾಡಿನ ಅಭಿವೃದ್ಧಿಗಾಗಿ ಚಿಂತಿಸುತ್ತಿದ್ದರು.
ಅರ್ಷದ್ ಅಲಿ ಅವರಿಗೆ ಪತ್ನಿ, ಪುತ್ರ ಹಾಗೂ ಮೂವರು ಪುತ್ರಿಯರು ಮತ್ತು ಅಪಾರ ಅಭಿಮಾನಿಗಳಿದ್ದಾರೆ. ಅವರೆಲ್ಲರಿಗೂ ಈ ಅಗಲಿಕೆಯ ನೋವು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ನೀಡಲಿ, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುವುದಾಗಿ ಈಶ್ವರ್ ಖಂಡ್ರೆ ಸಂತಾಪ ಸೂಚಿಸಿದರು.







