ಹಿರಿಯ ಐಎಎಸ್ ಅಧಿಕಾರಿ ಅಂಜುಮ್ ಪರ್ವೇಝ್ ಸೇರಿ ಹಲವು IAS ಅಧಿಕಾರಿಗಳ ವರ್ಗಾವಣೆ

ಅಂಜುಮ್ ಪರ್ವೇಝ್
ಬೆಂಗಳೂರು: ಹಿರಿಯ ಐಎಎಸ್ ಅಧಿಕಾರಿಗಳಾದ ಅಂಜುಮ್ ಪರ್ವೇಝ್, ಮುನೀಶ್ ಮೌದ್ಗಿಲ್ ಸೇರಿದಂತೆ ಹಲವು ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರಕಾರ ರವಿವಾರ ಆದೇಶ ಹೊರಡಿಸಿದೆ.
ಮುನೀಶ್ ಮೌದ್ಗಿಲ್ ಅವರನ್ನು ನೂತನವಾಗಿ ಸೃಷ್ಟಿಸಲಾದ ‘ಮುಖ್ಯಮಂತ್ರಿಯವರ ಕಾರ್ಯಕ್ರಮ ಮತ್ತು ಯೋಜನೆ ಅನುಷ್ಠಾನ ವಿಭಾಗ’ದ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ. ಮುನೀಶ್ ಮೌದ್ಗಿಲ್ ಅವರು ಈವರೆಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ)ದ ಆಡಳಿತ, ಆದಾಯ ಹಾಗೂ ಐಟಿ ವಿಭಾಗದ ವಿಶೇಷ ಆಯುಕ್ತರಾಗಿದ್ದರು.
ಮುಖ್ಯಮಂತ್ರಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಆಗಿದ್ದ ಅಂಜುಮ್ ಪರ್ವೇಝ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಬೆಂಗಳೂರಿನ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ.
ನಗರಾಭಿವೃದ್ಧಿ ಇಲಾಖೆಯ (ನಗರಾಭಿವೃದ್ಧಿ ಮತ್ತು ಪುರಸಭೆಗಳು) ಕಾರ್ಯದರ್ಶಿ ದೀಪಾ ಚೋಳನ್, ಅವರನ್ನು ಸಾರಿಗೆ ಇಲಾಖೆಯ ಕಾರ್ಯದರ್ಶಿಯಾಗಿ ವರ್ಗಾಯಿಸಲಾಗಿದೆ. ಕಾವೇರಿ ಬಿ.ಬಿ.ಅವರನ್ನು ನಗರಾಭಿವೃದ್ಧಿ ಇಲಾಖೆಯ (ನಗರಾಭಿವೃದ್ಧಿ ಮತ್ತು ಪುರಸಭೆಗಳು) ನೂತನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಕಾರ್ಯದರ್ಶಿಯಾಗಿದ್ದ ಡಾ.ವೆಂಕಟೇಶ್ ಎಂ.ವಿ. ಅವರನ್ನು ಸಹಕಾರ ಸಂಘಗಳ ನಿಬಂಧಕರಾಗಿ ವರ್ಗಾಯಿಸಲಾಗಿದೆ. ಡಾ.ಸೆಲ್ವಮಣಿ ಆರ್. ಅವರನ್ನು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರಾಗಿ ನೇಮಕ ಮಾಡಲಾಗಿದೆ. ಸಾರಿಗೆ ಇಲಾಖೆ ಆಯುಕ್ತರಾಗಿದ್ದ ಎ.ಎಂ.ಯೋಗೇಶ್ ಅವರನ್ನು ವರ್ಗಾವಣೆ ಮಾಡಿದ್ದು, ಅವರಿಗೆ ಯಾವುದೇ ಹುದ್ದೆ ತೋರಿಸಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.






