102 ತಾಲೂಕುಗಳಲ್ಲಿ ತೀವ್ರ ಸ್ವರೂಪದ ಬರ ಪರಿಸ್ಥಿತಿ; ಕೇಂದ್ರಕ್ಕೆ ಮಾಸಾಂತ್ಯದೊಳಗೆ ವರದಿ ಸಲ್ಲಿಕೆ: ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್

ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ (Photo: X)
ಬೆಂಗಳೂರು: ರಾಜ್ಯದಲ್ಲಿನ 102 ತಾಲೂಕುಗಳಲ್ಲಿ ತೀವ್ರ ಸ್ವರೂಪದ ಬರ ಪರಿಸ್ಥಿತಿ ಇದ್ದು, ಈ ತಿಂಗಳ ಅಂತ್ಯದೊಳಗೆ ಕೇಂದ್ರ ಸರಕಾರಕ್ಕೆ ವರದಿಯನ್ನು ಸಲ್ಲಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ತಿಳಿಸಿದ್ದಾರೆ.
ಮಂಗಳವಾರ ಇಲ್ಲಿನ ಸದಾಶಿವನಗರದಲ್ಲಿನ ತಮ್ಮ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಕೇಂದ್ರ ಸರಕಾರದಿಂದ ಬರ ಘೋಷಣೆಗಿರುವ ನಿಯಮಗಳ ಪ್ರಕಾರ ನಾವು ‘ಬರ ಪೀಡಿತ ಪ್ರದೇಶ’ ಎಂದು ಘೋಷಣೆ ಮಾಡಬಹುದು. ಮಾನದಂಡಗಳ ಪ್ರಕಾರ ಈಗ 102 ತಾಲೂಕುಗಳಲ್ಲಿ ಬರ ಇದೆ’ ಎಂದು ಹೇಳಿದರು.
ಬರ ಪರಿಸ್ಥಿತಿಯ ಬಗ್ಗೆ ಅಧ್ಯಯನ ನಡೆಸಿದ್ದು, ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚಿಸುತ್ತೇವೆ. ಪ್ರತಿವಾರವೂ ಈ ಬಗ್ಗೆ ವಿಮರ್ಶಿಸುತ್ತೇವೆ. ಈ ತಿಂಗಳ ಕೊನೆಯಲ್ಲಿ ಸಂಪೂರ್ಣ ವರದಿಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸುತ್ತೇವೆ. ಕೇಂದ್ರ ಸರಕಾರವು ರಾಜ್ಯಕ್ಕೆ ಅಗತ್ಯ ನೆರವು ನೀಡಬೇಕು ಎಂದು ಪರಮೇಶ್ವರ್ ಕೋರಿದರು.
ಶಾಸಕರ ಸಭೆ: ಪ್ರತಿನಿತ್ಯ ಅನೇಕ ಶಾಸಕರುಗಳು ಮುಖ್ಯಮಂತ್ರಿ ಭೇಟಿ ಮಾಡಲು ಪ್ರಯತ್ನಿಸುತ್ತಾರೆ. ಆ ಕಾರಣಕ್ಕಾಗಿ ಇಂದು ಸಿಎಂ ಶಾಸಕರುಗಳ ಜೊತೆ ಸಭೆ ನಡೆಸಲಿದ್ದಾರೆ. ಅವರ ಸಮಸ್ಯೆಗಳನ್ನು ಆಲಿಸಿ, ಬಗೆಹರಿಸುವ ನಿಟ್ಟಿನಲ್ಲಿ ಚರ್ಚೆಗಳು ನಡೆಯಲಿದೆ ಎಂದ ಅವರು, ಆಡಳಿತ ಪಕ್ಷದ ಶಾಸಕರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ ಎಂದರು.
ಪ್ರತಿ ಜಿಲ್ಲೆಗೆ ಒಬ್ಬ ಮಂತ್ರಿಯನ್ನು ನೇಮಕ ಮಾಡಿದ್ದೇವೆ. ಅವರು ಎರಡು ಕೆಲಸವನ್ನು ಮಾಡಬೇಕು. ಅವರು ಪಕ್ಷದ ಕೆಲಸದ ಜೊತೆಗೆ ಅಭಿವೃದ್ಧಿ ಕೆಲಸವನ್ನು ಮಾಡಬೇಕು. ಹೀಗಾಗಿಯೇ ಜವಾಬ್ದಾರಿಯನ್ನು ನೀಡಲಾಗಿದೆ. ಜಿಲ್ಲಾ ಮಂತ್ರಿಗಳಾಗಿದ್ದಾಗ, ಆ ಜಿಲ್ಲೆಗೆ ಸಂಬಂಧಿಸಿದ ಪಕ್ಷದ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ವಿವರಿಸಿದರು.






