‘ಶಕ್ತಿ ಯೋಜನೆ’ ಪ್ರತಿಷ್ಠಿತ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‍ನಲ್ಲಿ ದಾಖಲೆ; ಸಂತಸ ವ್ಯಕ್ತಪಡಿಸಿದ ರಾಮಲಿಂಗಾರೆಡ್ಡಿ

ಬೆಂಗಳೂರು: ಸಾರಿಗೆ ಬಸ್‍ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿರುವ ‘ಶಕ್ತಿ ಯೋಜನೆ’ಯು ಪ್ರತಿಷ್ಠಿತ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‍ನಲ್ಲಿ ದಾಖಲಾಗಿರುವುದು ಅತೀವ ಸಂತಸ ಮತ್ತು ಹೆಮ್ಮೆಯ ಕ್ಷಣ ಎಂದು ಸಾರಿಗೆ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಬಣ್ಣಿಸಿದ್ದಾರೆ.
ಸೋಮವಾರ ಈ ಕುರಿತು ಪ್ರಕಟನೆ ನೀಡಿರುವ ಅವರು, ಕರ್ನಾಟಕ ಸರಕಾರದ ಮಹತ್ವಾಕಾಂಕ್ಷೆ ಯೋಜನೆ ಹಾಗೂ ಮಹಿಳಾ ಸಬಲೀಕರಣದ ದಿಟ್ಟ ಯೋಜನೆಯಾದ ‘ಶಕ್ತಿ ಯೋಜನೆ’ಯು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರಕಾರ್ಡ್‍ನಲ್ಲಿ ಜೂ.11, 2023ರಿಂದ ಜು.25, 2025ರ ಅವಧಿಯಲ್ಲಿ ಒಟ್ಟು 5 ಬಿಲಿಯನ್, 49 ಮಿಲಿಯನ್, ನಾಲ್ಕು ನೂರ ಎಪ್ಪತ್ತಾರು ಸಾವಿರ, ನಾಲ್ಕು ನೂರ ಹದಿನಾರು ಮಹಿಳೆಯರು ಅಂದರೆ 500 ಕೋಟಿ ಮಹಿಳಾ ಪ್ರಯಾಣಿಕರ ಟಿಕೆಟ್ ಪ್ರಯಾಣವು ವಿಶ್ವ ದಾಖಲೆಯಲ್ಲಿ ಸ್ಥಾನ ಪಡೆದಿದೆ ಎಂದು ತಿಳಿಸಿದ್ದಾರೆ.
ಶಕ್ತಿ ಯೋಜನೆಯು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಔದ್ಯೋಗಿಕವಾಗಿ ಮಹಿಳೆಯರನ್ನು ಸಬಲರನ್ನಾಗಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಂಬಿದ್ದರು. ಈ ಚಾರಿತ್ರಿಕ ಸಾಧನೆಯು ಕೆಎಸ್ಸಾರ್ಟಿಸಿ ಹಾಗೂ ಬಿಎಂಟಿಸಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಆಡಳಿತ ಮಂಡಳಿ, ಸಾರಿಗೆ ಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸಾರಿಗೆ ಇಲಾಖೆಯ ಕಾರ್ಯದರ್ಶಿ, ವ್ಯವಸ್ಥಾಪಕ ನಿರ್ದೇಶಕರು ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸಮರ್ಪಿಸಲಾಗಿದೆ ಎಂದು ಹೇಳಿದ್ದಾರೆ.
ನಾನು ಸಾರಿಗೆ ಸಚಿವನಾಗಿ 2ನೇ ಬಾರಿಗೆ ಅಧಿಕಾರ ವಹಿಸಿಕೊಂಡ ಕೂಡಲೇ ದೇಶದಲ್ಲೇ ಪ್ರಪ್ರಥಮ ಬಾರಿಗೆ ಜಾರಿಗೆ ತಂದ ಗ್ಯಾರಂಟಿ ಯೋಜನೆಯಾದ ಶಕ್ತಿ ಯೋಜನೆಯು ಅತ್ಯಂತ ಸವಾಲಿನಿಂದ ಕೂಡಿದ್ದಾಗಿತ್ತು. ಕಳೆದ 5-6 ವರುಷಗಳಲ್ಲಿ ಸಾರಿಗೆ ಸಂಸ್ಥೆಗಳಲ್ಲಿ ಹೊಸ ಬಸ್‍ಗಳ ಸೇರ್ಪಡೆಯಾಗಿಲ್ಲ. ಹೊಸ ನೇಮಕಾತಿ ಆಗಿಲ್ಲ. ಸಾರಿಗೆ ಸಂಸ್ಥೆಗಳು ಸಾಲದ ಸುಳಿಯಲ್ಲಿದ್ದವು. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಒಂದು ತಂಡವಾಗಿ ಕರ್ತವ್ಯ ನಿರ್ವಹಿಸಿ ಶಕ್ತಿ ಯೋಜನೆಯನ್ನು ಯಶಸ್ವಿಯಾಗಿ ಮುನ್ನಡೆಸಿರುವುದು ನನಗೆ ವೈಯಕ್ತಿಕವಾಗಿ ಸಂತೃಪ್ತಿ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಎರಡು ವರುಷಗಳ ಶಕ್ತಿ ಯೋಜನೆಯ ಹಾದಿಯಲ್ಲಿ ಸಾರಿಗೆ ಸಂಸ್ಥೆಗಳಲ್ಲಿ 5,800 ಹೊಸ ಬಸ್‍ಗಳ ಸೇರ್ಪಡೆ, 10ಸಾವಿರ ಹೊಸ ನೇಮಕಾತಿ, ಸಾಲ ಪಾವತಿಸಲು ಸರಕಾರದಿಂದ 2ಸಾವಿರ ಕೋಟಿ ರೂ. ಸಹಾಯ, ಸಾರಿಗೆ ಸಂಸ್ಥೆಗಳ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ ಇತರೆ ಅಮೂಲಾಗ್ರ ಬದಲಾವಣೆಗೆ ಕಾರಣವಾಗಿದೆ. ಸಾರಿಗೆ ಸಂಸ್ಥೆಗಳಲ್ಲಿ ಅನೇಕ ಸವಾಲುಗಳಿದ್ದು, ಎಲ್ಲವನ್ನು ನಾನು ಇತ್ಯರ್ಥ ಪಡಿಸಲು ಸಾಧ್ಯವಿಲ್ಲ. ಆದರೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಮತ್ತು ಮಾಡುತ್ತಿದ್ದೇನೆ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಸಸ್ಟೈನೆಬಲ್ ಮೊಬಿಲಿಟಿ ನೆಟ್‍ವರ್ಕ್ ವತಿಯಿಂದ ದೇಶದ 10 ನಗರಗಳಲ್ಲಿ ಮಹಿಳೆಯರಿಗೆ ನೀಡಲಾಗುತ್ತಿರುವ ಉಚಿತ ಬಸ್ ಪ್ರಯಾಣದ ಬಗ್ಗೆ ನಡೆಸಿರುವ ಅಧ್ಯಯನದ ವರದಿಯು ಬೆಂಗಳೂರಿನಲ್ಲಿ ಶೇ23ರಷ್ಟು ಮತ್ತು ಹುಬ್ಬಳ್ಳಿ-ಧಾರವಾಡದಲ್ಲಿ ಶೇ.21ರಷ್ಟು ಮಹಿಳಾ ಉದ್ಯೋಗಿಗಳ ಸಂಖ್ಯೆಯು ಶಕ್ತಿ ಯೋಜನೆಯಿಂದ ಹೆಚ್ಚಳವಾಗಿದೆಯೆಂದು ತಿಳಿಸಿದೆ. ಇದರಿಂದ ರಾಜ್ಯದ ತಲಾ ಆದಾಯವು ಹೆಚ್ಚಳವಾಗಲು ಕಾರಣವಾಗಿದೆ ಎಂದು ತಿಳಿಸಿದ್ದಾರೆ.
ಇಡೀ ನಾಡು ಹೆಮ್ಮೆ ಪಡುವ ಕ್ಷಣವಿದು: ಸಿದ್ದರಾಮಯ್ಯ
‘ಶಕ್ತಿ ಯೋಜನೆ’ಯು ಪ್ರತಿಷ್ಠಿತ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‍ನಲ್ಲಿ ದಾಖಲಾಗಿರುವುದರ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ಇಡೀ ನಾಡು ಹೆಮ್ಮೆ ಪಡುವ ಕ್ಷಣವಿದು. ನಮ್ಮ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಯು ಪ್ರತಿಷ್ಠಿತ "Golden Book of World Records" ನಲ್ಲಿ ದಾಖಲಾಗಿ ಇತಿಹಾಸ ನಿರ್ಮಿಸಿದೆ.ಮಹಿಳಾ ಸಬಲೀಕರಣದೆಡೆಗಿನ ದಿಟ್ಟ ಹೆಜ್ಜೆಯಾದ ಶಕ್ತಿ ಯೋಜನೆಯು ಚಾಲನೆಗೊಂಡ ದಿನದಿಂದ ಅಂದರೆ ಜೂನ್ 11, 2023 ರಿಂದ ಜುಲೈ 25, 2025 ರ ಅವಧಿಯಲ್ಲಿ 504 ಕೋಟಿ 90 ಲಕ್ಷಕ್ಕೂ ಹೆಚ್ಚು ಬಾರಿ ಮಹಿಳಾ ಪ್ರಯಾಣಿಕರು ಉಚಿತವಾಗಿ ಸ್ವಾವಲಂಬಿ ಬದುಕಿನೆಡೆಗೆ ಪ್ರಯಾಣಿಸುವ ಮೂಲಕ ಈ ಇತಿಹಾಸ ಸೃಷ್ಟಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ಸಾಧನೆಯ ಶ್ರೇಯ ಉದ್ಯೋಗ, ಶಿಕ್ಷಣ, ವೈದ್ಯಕೀಯ ಚಿಕಿತ್ಸೆ ಮುಂತಾದ ಉದ್ದೇಶಗಳಿಗಾಗಿ ನಿತ್ಯ ಸಂಚರಿಸುವ ನಾಡಿನ ನನ್ನ ತಾಯಂದಿರಿಗೆ, ಅಕ್ಕ - ತಂಗಿಯರಿಗೆ ಸಲ್ಲಬೇಕು. ಔದ್ಯೋಗಿಕ ವಲಯದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ, ಜೊತೆಗೆ ರಾಜ್ಯದ ತಲಾದಾಯವು ದೇಶದಲ್ಲೇ ನಂಬರ್ 01 ಸ್ಥಾನಕ್ಕೆ ತಲುಪಿದೆ. ಶಕ್ತಿ ಯೋಜನೆಯು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ಔದ್ಯೋಗಿಕವಾಗಿ ಮಹಿಳೆಯರನ್ನು ಸಬಲರನ್ನಾಗಿಸುತ್ತದೆ ಎಂಬ ನನ್ನ ನಂಬಿಕೆ ಈ ಮೂಲಕ ಹುಸಿಯಾಗಲಿಲ್ಲ. ಯೋಜನೆಯನ್ನು ಜಾರಿಗೆ ಕೊಟ್ಟ ನನಗಿದು ಅತ್ಯಂತ ಸಂತಸದ ಕ್ಷಣ. ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿಯವರಿಗೂ, ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗಕ್ಕೂ ಅಭಿನಂದನೆಗಳು ಎಂದು ಸಿದ್ದರಾಮಯ್ಯ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇಡೀ ನಾಡು ಹೆಮ್ಮೆ ಪಡುವ ಕ್ಷಣವಿದು. ನಮ್ಮ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಯು ಪ್ರತಿಷ್ಠಿತ "Golden Book of World Records" ನಲ್ಲಿ ದಾಖಲಾಗಿ ಇತಿಹಾಸ ನಿರ್ಮಿಸಿದೆ.
— Siddaramaiah (@siddaramaiah) August 18, 2025
ಮಹಿಳಾ ಸಬಲೀಕರಣದೆಡೆಗಿನ ದಿಟ್ಟ ಹೆಜ್ಜೆಯಾದ ಶಕ್ತಿ ಯೋಜನೆಯು ಚಾಲನೆಗೊಂಡ ದಿನದಿಂದ ಅಂದರೆ ಜೂನ್ 11, 2023 ರಿಂದ ಜುಲೈ 25, 2025 ರ ಅವಧಿಯಲ್ಲಿ 504 ಕೋಟಿ… pic.twitter.com/Zb3a0kQGMy







