ದೇಶದಲ್ಲೇ ಅತೀ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ; ಉದ್ಯಮದಿಂದ ರಾಜಕೀಯದವರೆಗೆ....

ದಾವಣಗೆರೆ : ದೇಶದ ಅತೀ ಹಿರಿಯ ಶಾಸಕ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ವಯೋಸಹಜ ಅನಾರೋಗ್ಯದಿಂದ ರವಿವಾರ ನಿಧನರಾಗಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು.
ಶಾಮನೂರು ಶಿವಶಂಕರಪ್ಪ ಅವರಿಗೆ ಗಣಿ ಮತ್ತು ಭೂವಿಜ್ಞಾನ ಸಚಿವರೂ ಆಗಿರುವ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ್, ಎಸ್.ಎಸ್.ಗಣೇಶ್, ಎಸ್.ಎಸ್.ಬಕ್ಕೇಶ್ ಸೇರಿದಂತೆ ಮೂವರು ಪುತ್ರರು. ನಾಲ್ವರು ಪುತ್ರಿಯರು ಹಾಗೂ ಸಂಸದೆ, ಸೊಸೆ ಡಾ.ಪ್ರಭಾ ಮಲ್ಲಿಕಾಜುನ್ ಇದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು.
ಶಾಮನೂರು ಕಲ್ಲಪ್ಪ–ಸಾವಿತ್ರಮ್ಮ ದಂಪತಿ ಪುತ್ರರಾಗಿ 1931ರ ಜೂನ್ 16ರಂದು ಜನಿಸಿದ ಶಾಮನೂರು ಶಿವಶಂಕರಪ್ಪ ಮೂಲತಃ ಉದ್ಯಮಿ. ರಾಜಕೀಯ ಕ್ಷೇತ್ರ ಪ್ರವೇಶಿಸಿದ ಅವರು 6 ಬಾರಿ ಶಾಸಕರಾಗಿ, ಸಚಿವರಾಗಿ ಹಾಗೂ ಒಂದು ಬಾರಿ ಸಂಸದರಾಗಿ ಸೇವೆ ಸಲ್ಲಿಸಿದ್ದಾರೆ. ಸುದೀರ್ಘ ಅವಧಿಗೆ ಕೆಪಿಸಿಸಿ ಖಜಾಂಚಿಯಾಗಿದ್ದರು.
1969ರಲ್ಲಿ ನಗರಸಭೆ ಮೂಲಕ ರಾಜಕೀಯ ಪ್ರವೇಶಿಸಿದ ಶಾಮನೂರು ಶಿವಶಂಕರಪ್ಪ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು. 1994ರಲ್ಲಿ ಮೊದಲ ಬಾರಿಗೆ ವಿಧಾನಸಭೆಗೆ ಸ್ಪರ್ಧಿಸಿ ಆಯ್ಕೆಯಾದರು. ಆಗ ಅವರಿಗೆ 63 ವರ್ಷ ವಯಸ್ಸಾಗಿತ್ತು. ಶಾಸಕರಾಗಿ, ಸಂಸದರಾಗಿ ನಿರಂತರವಾಗಿ ಆಯ್ಕೆಯಾದ ಅವರು ವಯಸ್ಸಾದಂತೆ ರಾಜಕಾರಣದಲ್ಲಿ ಮೇಲೇರಿದರು.
ಶಾಮನೂರು ಶಿವಶಂಕರಪ್ಪ 2012ರಿಂದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರಾಗಿದ್ದರು. ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು ಎದ್ದಾಗ ‘ವೀರಶೈವ–ಲಿಂಗಾಯತ’ ಎರಡೂ ಒಂದೇ ಎಂದು ಪ್ರಬಲವಾಗಿ ಪ್ರತಿಪಾದಿಸಿದರು. ಅವರ ಅವಧಿಯಲ್ಲಿ ವೀರಶೈವ ಮಹಾಸಭಾದ ಹೆಸರು ವೀರಶೈವ–ಲಿಂಗಾಯತ ಮಹಾಸಭಾ ಎಂಬುದಾಗಿ ಪರಿವರ್ತನೆಯಾಯಿತು. ವೀರಶೈವ ಲಿಂಗಾಯತ ಮಠಾಧೀಶರನ್ನು ಒಗ್ಗೂಡಿಸಲು ಮುಂದಾಗಿದ್ದ ಶಾಮನೂರು ಶಿವಶಂಕರಪ್ಪ ಈ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿದ್ದರು. ಮೊದಲ ಹೆಜ್ಜೆಯಾಗಿ ಪಂಚಪೀಠ ಮಠಾಧೀಶರ ಸಮ್ಮೇಳವನ್ನು ಆಯೋಜಿಸಿ ಯಶಸ್ಸು ಕಂಡಿದ್ದರು. ವಿರಕ್ತ ಮತ್ತು ಗುರುಪರಂಪರೆ ಒಗ್ಗೂಡಿದರೆ ಸಮಾಜ ಇನ್ನಷ್ಟು ಸಬಲವಾಗುತ್ತದೆ ಎಂಬ ಬಲವಾದ ನಂಬಿಕೆ ಅವರದ್ದಾಗಿತ್ತು.
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಸ್ಫರ್ಧಿಸಿದ 94ರ ಹರೆಯದ ಶಾಮನೂರು ಶಿವಶಂಕರಪ್ಪ ಗೆದ್ದು ಬೀಗಿದ್ದು, ಭಾರತದ ಅತೀ ಹಿರಿಯ ಶಾಸಕ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಶಾಮನೂರು ಶಿವಶಂಕರಪ್ಪ ಒಟ್ಟು 84,258 ಮತಗಳನ್ನು ಪಡೆದಿದ್ದರೆ, ಬಿಜೆಪಿಯ ಬಿಜಿ ಅಜಯಕುಮಾರ್ 56,410 ಮತಗಳನ್ನು ಗಳಿಸಿದ್ದರು. 27,888 ಮತಗಳ ಅಂತರದಲ್ಲಿ ಶಾಮನೂರು ಅವರು ಭರ್ಜರಿ ಜಯ ಸಾಧಿಸಿದ್ದರು.
ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪನವರ ಕುಟುಂಬ ಮೂಲತಃ ವ್ಯಾಪಾರಸ್ಥರಾಗಿದ್ದರು. ಅದೇ ವ್ಯಾಪಾರದಲ್ಲಿ ಗುಮಾಸ್ತರಾಗಿ ಲಾಭ-ನಷ್ಟದ ಲೆಕ್ಕ ಬರೆಯುತ್ತಿದ್ದ ಶಾಮನೂರು ನಂತರ ತಮ್ಮ ಜಾಣ್ಮೆಯಿಂದ ಸಕ್ಕರೆ ಕಾರ್ಖಾನೆ, ಅಕ್ಕಿ ಮಿಲ್‍ಗಳನ್ನು ತೆರೆದು ಸ್ವ-ಉದ್ಯಮ ಆರಂಭಿಸಿದರು. ಆ ಮೂಲಕ ನೂರಾರು ಜನರಿಗೆ ಉದ್ಯೋಗದಾತರಾದರು.
ಪಾರ್ವತಮ್ಮ ಎಂಬುವವರನ್ನು ಬಾಳಸಂಗಾತಿಯಾಗಿ ಪಡೆದಿದ್ದ ಶಾಮನೂರು ಶಿವಶಂಕರಪ್ಪ ಅವರಿಗೆ ಮೂವರು ಗಂಡು ಮತ್ತು ನಾಲ್ಕು ಹೆಣ್ಣುಮಕ್ಕಳಿದ್ದಾರೆ. ಹಿರಿಯ ಪುತ್ರ ಬಕ್ಕೇಶ್ ಮೊದಲಿಗೆ ರಾಜಕೀಯ ಪ್ರವೇಶಿಸಿದರಾದರೂ ಕಾರಣಾಂತರಿಂದ ಹಿಂದೆ ಸರಿದರು. ಇನ್ನೋರ್ವ ಪುತ್ರ ಎಸ್.ಎಸ್.ಗಣೇಶ್ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಮೂರನೇ ಪುತ್ರ ಶಾಸಕ ಎಸ್.ಎಸ್. ಮಲ್ಲಿಕಾರ್ಜುನ ತಂದೆಯಂತೆ ರಾಜಕೀಯದಲ್ಲಿದ್ದಾರೆ.
ಶಾಮನೂರು ಶಿವಶಂಕರಪ್ಪ ಮೊದಲು ರಾಜಕೀಯ ಪ್ರವೇಶಿಸಿದ್ದೇ 1969ರಲ್ಲಿ. ಅವಿಭಜಿತ ಚಿತ್ರದುರ್ಗ ಜಿಲ್ಲೆಯ ದಾವಣಗೆರೆ ನಗರಸಭಾ ಸದಸ್ಯರಾಗುವ ಮೂಲಕ ರಾಜಕೀಯಕ್ಕೆ ಕಾಲಿಟ್ಟ ಅವರು 1972ರಲ್ಲಿ ನಗರಸಭೆ ಅಧ್ಯಕ್ಷರಾದ ನಂತರ ಸುಮಾರು ಎಂಟು ವರ್ಷಗಳ ಕಾಲ ರಾಜಕೀಯದಿಂದ ದೂರ ಉಳಿದಿದ್ದರು. 1980 ರಲ್ಲಿ ದೇವರಾಜ್ ಅರಸು ಕಾಂಗ್ರೆಸ್ ಮತ್ತು ಇಂದಿರಾ ಕಾಂಗ್ರೆಸ್ ಎಂದು ಇಬ್ಭಾಗವಾದ ಕಾಲದಲ್ಲಿ ಅರಸು ಅವರಿಗೆ ಪ್ರೇರಿತರಾಗಿದ್ದ ಶಿವಶಂಕರಪ್ಪ ಅರಸು ಕಾಂಗ್ರೆಸ್‍ಗೆ ಸೇರ್ಪಡೆಯಾಗಿ ಚಿತ್ರದುರ್ಗದ ಲೋಕಸಭಾ ಕ್ಷೇತ್ರ ಚುನಾವಣೆಗೆ ನಿಂತು ಸೋಲು ಅನುಭವಿಸಿದ್ದರು.
ಅದಾದ ಬಳಿಕ ಮತ್ತೆ ರಾಜಕೀಯದಿಂದ ವಿಶ್ರಾಂತಿ ಪಡೆದ ಶಾಮನೂರು 1994 ರಲ್ಲಿದಾವಣಗೆರೆ ಶಾಸಕರಾಗಿ ಗೆಲುವು ಕಂಡು ಅಲ್ಲಿಂದ ಮತ್ತೆ ಹಿಂತಿರುಗಿ ನೋಡದೆ ತಮ್ಮ ರಾಜಕೀಯದ ಯುಗ ಆರಂಭಿಸಿದರು. 1997 ರಲ್ಲಿ ಚಿತ್ರದುರ್ಗದಿಂದ ವಿಭಜಿತಗೊಂಡು ದಾವಣಗೆರೆ ಸ್ವತಂತ್ರ ಜಿಲ್ಲೆಯಾಗಿ ಘೋಷಿಸಲ್ಪಟ್ಟಾಗ ಮತ್ತೆ ದಾವಣಗೆರೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು.
1999ರಲ್ಲಿನಡೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲುಂಡ ಶಾಮನೂರು 2004ರಲ್ಲಿ ನಡೆದ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ದಾವಣಗೆರೆಯಿಂದ ಗೆದ್ದು ಗೆಲುವನ್ನು ಅಪ್ಪಿಕೊಂಡ ನಂತರ ಅಲ್ಲಿಂದ ಇಲ್ಲಿಯವರೆಗೆ ಸೋಲಿನ ಕಡೆ ತಿರುಗಿ ನೋಡಿದ್ದೇ ಇಲ್ಲ. 2008ರಲ್ಲಿ ಪ್ರಾದೇಶಿಕವಾರು ದಾವಣಗೆರೆ ದಕ್ಷಿಣ ಮತ್ತುಉತ್ತರ ಎಂದು ಕ್ಷೇತ್ರ ವಿಂಗಡಣೆಯಾದಾಗ ದಾವಣಗೆರೆ ದಕ್ಷಿಣದಿಂದ ಸತತವಾಗಿ 2023ರ ಇಲ್ಲಿಯವರೆಗೆ 4ನೇ ಬಾರಿ ಶಾಮನೂರು ಶಿವಶಂಕರಪ್ಪ ಗೆಲ್ಲುತ್ತಲೇ ಬಂದಿದ್ದಾರೆ.







