ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ; ಕೇಂದ್ರ ಅರಣ್ಯ ಸಲಹಾ ಸಮಿತಿ ಆಕ್ಷೇಪ

ಶಿವಮೊಗ್ಗ : ರಾಜ್ಯ ಸರಕಾರದ ಉದ್ದೇಶಿತ ಶರಾವತಿ ಪಂಪ್ಡ್ ಸ್ಟೋರೇಜ್‌ಗೆ ಸಂಬಂಧಿಸಿದಂತೆ ಕೇಂದ್ರ ಸರಕಾರದ ಪರಿಸರ ಸಚಿವಾಲಯದ ಅರಣ್ಯ ಸಲಹಾ ಸಮಿತಿಯು ಈ ಯೋಜನೆಯು ‘ಪಶ್ಚಿಮ ಘಟ್ಟಗಳಲ್ಲಿನ ಜೀವವೈವಿಧ್ಯಕ್ಕೆ ಅಗಾಧ ಹಾನಿ’ ಉಂಟು ಮಾಡಬಹುದು ಎಂದು ಕಳವಳ ವ್ಯಕ್ತಪಡಿಸಿದೆ. ಜೊತೆಗೆ ರಾಜ್ಯ ಸರಕಾರದಿಂದ ಹೆಚ್ಚಿನ ವಿವರ ಬಯಸಿದೆ.
ಕೇಂದ್ರದ ಅರಣ್ಯ ಸಲಹಾ ಸಮಿತಿಯ ಅ.27ರ 11ನೇ ಸಭೆಯ ನಡವಳಿಯಲ್ಲಿ ಪ್ರಸ್ತಾವಿತ ಯೋಜನಾ ಪ್ರದೇಶವು ಪಶ್ಚಿಮ ಘಟ್ಟದ ಕೇಂದ್ರ ಭಾಗದಲ್ಲಿರುವ ಶರಾವತಿ ಕಣಿವೆ ಸಿಂಗಳೀಕ ಅಭಯಾರಣ್ಯದ ವ್ಯಾಪ್ತಿಯಲ್ಲಿದೆ ಎಂದು ಉಲ್ಲೇಖಿಸಲಾಗಿದೆ.
ಯೋಜನಾ ಸ್ಥಳವು ಸಿಂಗಳೀಕ, ಹುಲಿ, ಚಿರತೆ, ಕರಡಿ, ಕಾಡು ನಾಯಿಗಳು, ಕಾಳಿಂಗ ಸರ್ಪ, ಮಲಬಾರ್ ದೊಡ್ಡ ಅಳಿಲು ಮತ್ತು ಇತರ ಅಪರೂಪದ ಹಾಗೂ ಸ್ಥಳೀಯ ಪ್ರಭೇದಗಳಿಗೆ ನೆಲೆಯಾಗಿದೆ. ಶರಾವತಿ ಕಣಿವೆ ಅಭಯಾರಣ್ಯದಲ್ಲಿ 730 ಸಿಂಗಳೀಕ ದಾಖಲಾಗಿವೆ. ಆವಾಸ ಸ್ಥಾನದ ನಷ್ಟವು ಸಿಂಗಳೀಕಗಳ ಉಳಿವಿಗೆ ಗಂಭೀರ ಅಪಾಯವನ್ನುಂಟು ಮಾಡುತ್ತದೆ ಎಂದು ಸಮಿತಿ ಎಚ್ಚರಿಸಿದೆ.
ಯೋಜನೆಯ ಪ್ರಸ್ತಾಪಕರು (ರಾಜ್ಯ ಸರಕಾರ) ನೀಡಿದ ಪರಿಹಾರ ಅರಣ್ಯೀಕರಣ ಸ್ಥಳವು ಸಿಂಹ ಬಾಲದ ಸಿಂಗಳೀಕಗಳ ಆವಾಸಸ್ಥಾನದ ನಷ್ಟವನ್ನು ಸರಿದೂಗಿಸಲು ಸಾಧ್ಯವಿಲ್ಲ. ಶಾಶ್ವತ ಮಳೆಕಾಡುಗಳು ಸಂಕೀರ್ಣ ಪರಿಸರ ವ್ಯವಸ್ಥೆಗಳಾಗಿದ್ದು, ಅವುಗಳನ್ನು ಪುನರಾವರ್ತಿಸುವುದು ತುಂಬಾ ಕಷ್ಟ ಎಂದು ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ.
ಶರಾವತಿ ಕಣಿವೆಯ ಸಿಂಗಳೀಕ ಅಭಯಾರಣ್ಯದೊಳಗೆ ನೆಲೆಗೊಂಡಿರುವ ಈ ಯೋಜನೆಯು ಸುಮಾರು 54 ಹೆಕ್ಟೇರ್ ದಟ್ಟ ಅರಣ್ಯ ಭೂಮಿಯನ್ನು ಬೇರೆಡೆಗೆ ತಿರುಗಿಸುವ ಅಗತ್ಯವನ್ನು ವ್ಯಕ್ತಪಡಿಸಿದೆ. ಇದು ಜಾಗತಿಕವಾಗಿ ಗುರುತಿಸಲ್ಪಟ್ಟ ಜೀವವೈವಿಧ್ಯ ತಾಣದಲ್ಲಿ 15,000ಕ್ಕೂ ಹೆಚ್ಚು ಮರಗಳಿಗೆ ಅಪಾಯವನ್ನುಂಟು ಮಾಡಿದೆ. ಹೀಗಾಗಿ ಕೆಲ ಮಾಹಿತಿಗಳನ್ನು ಒದಗಿಸುವಂತೆ ಅರಣ್ಯ ಸಲಹಾ ಸಮಿತಿ ರಾಜ್ಯ ಸರಕಾರಕ್ಕೆ ಸೂಚಿಸಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಏನಿದು ಯೋಜನೆ?:
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯು ವಿಶ್ವದ ಅತಿದೊಡ್ಡ ಬ್ಯಾಟರಿ ತಂತ್ರಜ್ಞಾನ ಎಂದೇ ಪರಿಗಣಿಸಲಾಗಿದ್ದು, ಎರಡು ಜಲಾಶಯಗಳ ನಡುವೆ ಇದನ್ನು ಕಾರ್ಯಗತಗೊಳಿಸಲಾಗುತ್ತದೆ.ಹೆಚ್ಚುವರಿ ವಿದ್ಯುತ್ ಲಭ್ಯವಿದ್ದಾಗ, ಕೆಳಗಿನ ಜಲಾಶಯದ ನೀರನ್ನು ಮೇಲಿನ ಜಲಾಶಯಕ್ಕೆ ಪಂಪ್ ಮಾಡಿ ಸಂಗ್ರಹಿಸಲಾಗುತ್ತದೆ ಮತ್ತು ವಿದ್ಯುತ್ ಬೇಡಿಕೆ ಹೆಚ್ಚಾದಾಗ ಆ ಸಂಗ್ರಹಿಸಿದ ನೀರನ್ನು ಬಳಸಿ ವಿದ್ಯುತ್ ಉತ್ಪಾದಿಸಿ ಗ್ರಿಡ್‌ಗೆ ಪೂರೈಸಲಾಗುತ್ತದೆ.
ಕರ್ನಾಟಕ ವಿದ್ಯುತ್ ನಿಗಮ ನಿಯಮಿತವು ಈ ತಂತ್ರಜ್ಞಾನವನ್ನು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಲ್ಲಿ ಅಳವಡಿಸಲು ಹೊರಟಿದ್ದು, ಇದರ ಮೂಲಕ 2,000 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಿದೆ. ಅಂದಾಜು 10,000 ಕೋಟಿ ರೂ. ಅಧಿಕ ವೆಚ್ಚದ ಈ ಯೋಜನೆಗೆ ಹೈದರಾಬಾದ್ ಮೂಲದ ಮೆಗಾ ಇಂಜಿನಿಯರಿಂಗ್ ಮತ್ತು ಇನ್‌ಫ್ರಾಸ್ಟ್ರಕ್ಚರ್ಸ್ ಸಂಸ್ಥೆಗೆ 2024ರ ಫೆಬ್ರವರಿಯಲ್ಲಿ 8,005 ಕೋಟಿ ರೂ.ಗಳ ಟೆಂಡರ್ ನೀಡಲಾಗಿದೆ.
ಅಪಾಯದ ಎಚ್ಚರಿಕೆ
ಸಮಿತಿಯು ಯೋಜನೆಯ ಇಂಜಿನಿಯರಿಂಗ್ ವಿನ್ಯಾಸವನ್ನು ಪರಿಶೀಲಿಸಿದೆ. ಈ ಯೋಜನೆಯು ಎರಡು ಜಲಾಶಯಗಳು, 3.2 ಕಿ.ಮೀ. ಉದ್ದದ ಸುರಂಗಗಳು, 500 ಮೀಟರ್ ಆಳದವರೆಗೆ ಉತ್ಖನನ ಮತ್ತು ಭೂಗತ ಕಾಮಗಾರಿಗಳಿಗಾಗಿ ಡ್ರಿಲ್ಲಿಂಗ್ ಮತ್ತು ಸ್ಫೋಟ ಕಾರ್ಯಗಳನ್ನು ಒಳಗೊಂಡಿದೆ. ಈ ಪ್ರದೇಶವು ಭೂಕಂಪನ ವಲಯ 3 ರ ವ್ಯಾಪ್ತಿಗೆ ಬರುತ್ತದೆ. ಇಳಿಜಾರು ಕತ್ತರಿಸುವಿಕೆ, ಸ್ಫೋಟ ಮತ್ತು ಭಾರೀ ಮಳೆ ವೇಳೆ ಭೂ ಕುಸಿತ ಮತ್ತು ಸವೆತದ ಅಪಾಯಗಳನ್ನು ಹೆಚ್ಚಿಸಬಹುದು. ಇಂತಹ ಕೆಲಸಗಳು ಪ್ರದೇಶದ ಪರಿಸರಕ್ಕೆ ಮಾತ್ರವಲ್ಲದೆ ಮಾನವ ವಾಸಸ್ಥಳಗಳಿಗೂ ವಿನಾಶಕಾರಿಯಾಗಬಹುದು ಎಂದು ಸಮಿತಿ ಎಚ್ಚರಿಸಿದೆ.
ಯೋಜನೆಗೆ ತಡೆ ನೀಡಿಲ್ಲ: ಅಖಿಲೇಶ್ ಚಿಪ್ಪಳ್ಳಿ
ಅಕ್ಟೋಬರ್ 27ರಂದು ದಿಲ್ಲಿಯಲ್ಲಿ ನಡೆದ ಅರಣ್ಯ ಸಲಹಾ ಸಮಿತಿ (ಎಫ್‌ಎಸಿ)ಸಭೆಯಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ತಡೆ ನೀಡಿಲ್ಲ. ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಮತ್ತು ವಿವರಗಳನ್ನು ಹಾಗೂ ಸಮಜಾಯಿಷಿಗಳನ್ನು ಕೇಳಿದ್ದಾರೆ ಅಷ್ಟೇ ಎಂದು ಪರಿಸರ ಹೋರಾಟಗಾರ ಅಖಿಲೇಶ್ ಚಿಪ್ಪಳ್ಳಿ ಮಾಧ್ಯಮಗಳಿಗೆ ಸ್ಪಷ್ಟೀಕರಣ ನೀಡಿದ್ದಾರೆ.
ಕೆಪಿಸಿಎಲ್ ಮತ್ತು ಕರ್ನಾಟಕ ಸರಕಾರ ಸುಳ್ಳುಗಳ ಪ್ರಮಾಣ ಕಡಿಮೆ ಮಾಡಿ, ಮತ್ತೊಂದು ವರದಿ ಸಲ್ಲಿಸಲಿದೆ. ಬಹುಶ ಮುಂದಿನ ಸಭೆಯಲ್ಲಿ ಎಫ್‌ಎಸಿ ಇದನ್ನು ಒಪ್ಪಿಕೊಂಡು ಅನುಮತಿ ನೀಡಬಹುದು. ಇದು ಪೂರ್ವ ನಿಯೋಜಿತ ತಂತ್ರ. ‘ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಕೇಂದ್ರ ಸರಕಾರದ ತಡೆ’ ಎಂದು ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗುತ್ತಿದೆ. ಇದು ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ.







