ವಿಧಾನಸೌಧ ಆವರಣದಲ್ಲಿ ಬೀದಿ ನಾಯಿಗಳ ಹಾವಳಿ: 15 ದಿನದೊಳಗೆ ಟೆಂಡರ್ ಕರೆಯುತ್ತೇವೆ ಎಂದ ಸ್ಪೀಕರ್ ಯು.ಟಿ. ಖಾದರ್
ವಿಧಾನಸೌಧದ ಆವರಣದಲ್ಲಿ ಬೀದಿ ನಾಯಿಗಳಿಗೆ ಶೆಲ್ಟರ್ ನಿರ್ಮಾಣ

ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್
ಬೆಂಗಳೂರು: ವಿಧಾನಸೌಧ ಆವರಣದಲ್ಲಿ ಬೀದಿ ನಾಯಿಗಳ ಹಾವಳಿ ತಪ್ಪಿಸಲು ಆವರಣದಲ್ಲೇ ಪ್ರತ್ಯೇಕ ಸ್ಥಳ ಗುರುತು ಮಾಡಿ, ವ್ಯವಸ್ಥೆ ಮಾಡಲು ಅಂದಾಜು ವೆಚ್ಚದ ವರದಿ ನೀಡಲು ಸೂಚಿಸಿದ್ದು, ಮುಂದಿನ 15 ದಿನಗಳೊಳಗೆ ಟೆಂಡರ್ ಕರೆಯುತ್ತೇವೆ ಎಂದು ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ತಿಳಿಸಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸೌಧ ಆವರಣದಲ್ಲಿ ಸುಮಾರು 54ಕ್ಕೂ ಹೆಚ್ಚು ಬೀದಿ ನಾಯಿಗಳಿವೆ. ಈ ಬೀದಿ ನಾಯಿಗಳ ಓಡಾಟದಿಂದ ಸಾರ್ವಜನಿಕರಿಗೆ, ಅಧಿಕಾರಿಗಳಿಗೆ, ವಾಹನ ಚಾಲಕರಿಗೆ ಸಮಸ್ಯೆ ಎದುರಾಗುತ್ತಿದೆ. ಹೀಗಾಗಿ, ಆವರಣದಲ್ಲಿ ಒಂದು ಶೆಲ್ಟರ್ ನಿರ್ಮಾಣ ಮಾಡುವ ಬಗ್ಗೆ ಚಿಂತನೆ ನಡೆದಿದೆ. ಅವುಗಳನ್ನು ನೋಡಲು ಸಿಬ್ಬಂದಿ ನಿಯೋಜಿಸಲಾಗುವುದು. ಎನ್ಜಿಒಗೆ ವಹಿಸಿದರೆ ಪ್ರಾಣಿಗಳ ಯೋಗಕ್ಷೇಮ ನೋಡಿಕೊಳ್ಳುತ್ತಾರೆ ಎಂದರು.
ಮಳೆಗಾಲ, ಬಿಸಿಲು ಬಂದಾಗ ಶೆಲ್ಟರ್ ಎಲ್ಲಿ ಇರುತ್ತದೆಯೋ, ಅಲ್ಲಿಗೆ ನಾಯಿಗಳು ಹೋಗುತ್ತವೆ. ಅವುಗಳನ್ನು ಬೇರೆ ಕಡೆ ಶಿಫ್ಟ್ ಮಾಡಲು ಆಗುವುದಿಲ್ಲ. ಈ ಸಂಬಂಧ ವಿಧಾನಸೌಧದಲ್ಲಿ ಈಗಾಗಲೇ ಸಭೆ ನಡೆಸಲಾಗಿದೆ. ಸಭೆಯಲ್ಲಿ ವಿಧಾನಸೌಧ ಆವರಣದಲ್ಲಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ವಿವಿಧ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಯು.ಟಿ.ಖಾದರ್ ಹೇಳಿದರು.