‘ಏಯ್..ಇರಪ್ಪ ನಾವು ಕುರಿಕಾಯುವವರೇ..!’: ಸದನದಲ್ಲಿ ಸ್ವಾರಸ್ಯಕರ ಪ್ರಸಂಗಕ್ಕೆ ಸಾಕ್ಷಿಯಾದ ಶಾಸಕ ಶಿವಲಿಂಗೇಗೌಡ ಹೇಳಿಕೆ

ಬೆಂಗಳೂರು: ‘ಏಯ್.. ಇರಪ್ಪ ನಾವು ಕುರಿಕಾಯುವವರೇ.. ನಾವು ಕುರಿ ಮೇಯಿಸಲು ವಲಸೆ ಹೋಗುತ್ತೇವೆ’ ಎಂದು ಆಡಳಿತ ಪಕ್ಷದ ಹಿರಿಯ ಸದಸ್ಯ ಕೆ.ಎಂ.ಶಿವಲಿಂಗೇಗೌಡ ಹೇಳಿಕೆ ಸ್ವಾರಸ್ಯಕರ ಪ್ರಸಂಗಕ್ಕೆ ಸಾಕ್ಷಿಯಾಯಿತು.
ಗುರುವಾರ ವಿಧಾನಸಭೆ ಶಾಸನ ರಚನಾ ಕಲಾಪದಲ್ಲಿ ಸಾಂಪ್ರದಾಯಿಕ ಅಲೆಮಾರಿ ಕುರಿಗಾಹಿಗಳ ದೌರ್ಜನ್ಯ ತಡೆ ವಿಧೇಯಕ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಇರಪ್ಪ ನಾವು ಕುರಿಕಾಯುವವರೇ..’ ಎಂದು ಹೇಳಿದ ಕೂಡಲೇ ಆಡಳಿತ ಪಕ್ಷದ ಸದಸ್ಯರು ಸೇರಿದಂತೆ ಎಲ್ಲರೂ ಓಹ್...ಎಂದು ಉದ್ಘಾರ ತೆಗೆದರು.
ಬಳಿಕ ಮಾತು ಮುಂದುವರೆಸಿದ ಶಿವಲಿಂಗೇಗೌಡ, ‘ನಾವು ಕುರಿಗಳನ್ನು ಸಾಕಾಣಿಕೆ ಮಾಡುತ್ತಿದ್ದೇವೆ. ಉತ್ತರದಿಂದ ಬರುವ ಕುರಿಗಾಹಿಗಳಿಗೆ ಸಿಗುತ್ತಿರುವ ಸೌಲಭ್ಯ ಸ್ಥಳೀಯರಿಗೆ ಸಿಗುತ್ತಿಲ್ಲ. ಅವರು ಬೇಸಿಗೆಯಲ್ಲಿ ಮಾತ್ರ ಹುಲ್ಲುಗಾವಲು ಪ್ರದೇಶಗಳನ್ನು ಹುಡುಕಿಕೊಂಡು ದಕ್ಷಿಣ ಕರ್ನಾಟಕದ ಕಡೆ ಬರುತ್ತಾರೆ. ಹೀಗಾಗಿ ಡೀಮ್ಡ್ ಅರಣ್ಯ ಪ್ರದೇಶದಲ್ಲಿ ಕುರಿ ಮೇಯಿಸಲು ನಿರ್ಬಂಧ ಸಡಿಲಿಸಬೇಕು’ ಎಂದು ಕೋರಿದರು.
ಬಳಿಕ ಪ್ರತಿಕ್ರಿಯಿಸಿದ ಸಚಿವ ಈಶ್ವರ್ ಖಂಡ್ರೆ, ‘ಇತ್ತೀಚೆಗೆ ಚಾಮರಾಜನಗರ ಜಿಲ್ಲೆಯಲ್ಲಿ ಹುಲಿಗಳ ಸಾವಿನ ಹಿನ್ನೆಲೆಯಲ್ಲಿ ಹೊರರಾಜ್ಯದ ಜಾನುವಾರುಗಳನ್ನು ಮೇಯಿಸಲು ಅರಣ್ಯದಲ್ಲಿ ನಿರ್ಬಂಧ ಹೇರಲಾಗಿದೆ. ಆದರೆ, ಕುರಿಗಾಹಿಗಳಿಗೆ ಯಾವುದೇ ನಿರ್ಬಂಧವಿಲ್ಲ. ಕುರಿಗಾಹಿಗಳಿಗೆ ತೊಂದರೆ ನೀಡದಂತೆ ಇಲಾಖೆ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ’ ಎಂದರು.







