ಅ.28ರಿಂದ ಸೋಯಾ, ಸೂರ್ಯಕಾಂತಿ, ಹೆಸರುಕಾಳು ಖರೀದಿ ಆರಂಭ : ಶಿವಾನಂದ ಪಾಟೀಲ್

ಬೆಂಗಳೂರು : ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ನಾಳೆ(ಅ.28)ಯಿಂದ ಸೋಯಾಬಿನ್, ಸೂರ್ಯಕಾಂತಿ ಮತ್ತು ಹೆಸರುಕಾಳು ಖರೀದಿ ಆರಂಭವಾಗಲಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ತಿಳಿಸಿದ್ದಾರೆ.
ಸೋಮವಾರ ಈ ಸಂಬಂಧ ಪ್ರಕಟನೆ ನೀಡಿರುವ ಅವರು, ಎಲ್ಲೆಡೆ ಈಗಾಗಲೇ ಖರೀದಿ ಕೇಂದ್ರಗಳನ್ನು ತೆರದು ನೋಂದಣಿ ಪ್ರಕ್ರಿಯೆ ಆರಂಭಿಸಲಾಗಿದೆ. ಸೋಯಾಬಿನ್ ಖರೀದಿಗೆ ಒಟ್ಟು 206 ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, 19,325 ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಬೀದರ್ ಜಿಲ್ಲೆಯಲ್ಲಿ 116 ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದ್ದು, 13,033 ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ 3,047, ಧಾರವಾಡ ಜಿಲ್ಲೆಯಲ್ಲಿ 2,164 ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಹೆಸರುಕಾಳು ಖರೀದಿಗೆ ಒಟ್ಟು 211 ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದ್ದು, 16,578 ರೈತರು ನೋಂದಣಿ ಮಾಡಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಅತಿಹೆಚ್ಚು (6362) ರೈತರು ನೋಂದಣಿ ಮಾಡಿಸಿದ್ದಾರೆ. ಸೂರ್ಯಕಾಂತಿ ಖರೀದಿಗೆ 120 ಖರೀದಿ ಕೇಂದ್ರಗಳನ್ನು ಆರಂಭಿಸಿದ್ದು, 5,341 ರೈತರು ನೋಂದಣಿ ಮಾಡಿಸಿದ್ದಾರೆ. ಉದ್ದಿನಕಾಳು ಖರೀದಿಗೆ 134 ಖರೀದಿ ಕೇಂದ್ರಗಳನ್ನು ಆರಂಭಿಸಿದ್ದು, 5,274 ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.





