‘ಜಾತಿ ಸಮೀಕ್ಷೆ’ಯಲ್ಲಿ ಎಲ್ಲರೂ ಪಾಲ್ಗೊಳ್ಳಲು ಕ್ರಮ ವಹಿಸಲಾಗಿದೆ : ಸಚಿವ ಶಿವರಾಜ್ ತಂಗಡಗಿ

ಬೆಂಗಳೂರು, ಸೆ. 13: ‘ಪ್ರತಿಪಕ್ಷ ಬಿಜೆಪಿಯವರ ರೀತಿಯಲ್ಲಿ ಯಾವುದೇ ವರ್ಗದ ಜನರ ಮೇಲೆ ನಾವು ಯಾವುದೇ ಧರ್ಮ ಹಾಗೂ ಆಚರಣಾ ಪದ್ಧತಿಗಳನ್ನು ಬಲವಂತವಾಗಿ ಹೇರುವುದಿಲ್ಲ. ಇಲ್ಲಿ ಎಲ್ಲರೂ ಸ್ವತಂತ್ರವಾಗಿರಲು ಅವಕಾಶ ಕಲ್ಪಿಸಲಾಗಿದೆ’ ಎಂದು ಕನ್ನಡ ಮತ್ತು ಸಂಸ್ಕೃತಿ, ಹಿಂದುಳಿದ ವರ್ಗಗಳ ಅಭಿವೃದ್ಧಿ ಸಚಿವ ಶಿವರಾಜ್ ಎಸ್.ತಂಗಡಗಿ ತಿಳಿಸಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ 60 ಪ್ರಶ್ನೆಗಳ ಪೈಕಿ ನಾಸ್ತಿಕ ಹಾಗೂ ಆಸ್ತಿಕ ಎಂಬ ಕಾಲಂ ಇದ್ದರೆ ತಪ್ಪೇನು. ರಾಜ್ಯದಲ್ಲಿ ಆಡಳಿತದಲ್ಲಿರುವುದು ಬಿಜೆಪಿ ಸರಕಾರವಲ್ಲ, ಕಾಂಗ್ರೆಸ್ ನೇತೃತ್ವದ ಸರಕಾರ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಆಡಳಿತದಲ್ಲಿ ಎಲ್ಲರೂ ಸರ್ವರೂ ಸ್ವತಂತ್ರರು ಎಂದು ಹೇಳಿದರು.
ಈ ಹಿಂದೆ ಸಮೀಕ್ಷೆ ನಡೆದ ವೇಳೆ ಬಹಳಷ್ಟು ಮಂದಿ ತಮ್ಮ ಜಾತಿಯ ಹೆಸರನ್ನು ಬರೆಸಲು ನಿರಾಕರಿಸಿದರು. ಸಾಕಷ್ಟು ಮಂದಿ ದೇವರನ್ನು ನಂಬದ ನಾಸ್ತಿಕರಿದ್ದಾರೆ. ದೇವರನ್ನು ನಂಬುವ ಅಸ್ತಿಕರೂ ಇದ್ದಾರೆ. ನಾವೆಲ್ಲಾ ದೇವರನ್ನು ನಂಬುತ್ತೇವೆ. ನಂಬದೇ ಇದ್ದವರ ಮೇಲೆ ನಾವು ಪ್ರಹಾರ ಮಾಡುವುದು ಸರಿಯಲ್ಲ ಎಂದು ಅವರು ಆಕ್ಷೇಪಿಸಿದರು.
ಈ ಹಿಂದೆ ಬಿಜೆಪಿ ಸರಕಾರದಲ್ಲಿ ಯಾವ ಆಹಾರ ತಿನ್ನಬೇಕೆಂಬುದನ್ನು ಅವರೇ ನಿರ್ಧರಿಸುವ ಸ್ಥಿತಿ ಇತ್ತು. ಧರ್ಮದ ಕಾಲಂನಲ್ಲಿ ನಾಸ್ತಿಕ ಅಥವಾ ಅಸ್ತಿಕ ಎಂದು ಬರೆಸುವುದು ಜನರ ಆಯ್ಕೆ. ದೇವರನ್ನು ನಂಬದೇ ಇದ್ದವರು ತಮ್ಮ ಅಭಿಪ್ರಾಯವನ್ನು ದಾಖಲಿಸಲು ಅವಕಾಶ ಕಲ್ಪಿಸಬೇಕೆಂದು ಕೇಳುತ್ತಿದ್ದಾರೆ. ಅದಕ್ಕಾಗಿ ಸರಕಾರ ಎಲ್ಲ ರೀತಿಯ ಅವಕಾಶಗಳನ್ನು ನೀಡಿದೆ ಎಂದು ಅವರು ಸಮರ್ಥಿಸಿದರು.
ಧರ್ಮ, ಜಾತಿ ವಿಚಾರದಲ್ಲಿ ಇದೇ ರೀತಿ ಬದುಕಬೇಕೆಂದು ಒತ್ತಡ ಹಾಕುವುದಿಲ್ಲ. ಜನ ತಮಗೆ ಸರಿ ಅನಿಸಿದ್ದನ್ನು ಬರೆಸಬಹುದು. ಈ ಹಿಂದೆ ಸಮೀಕ್ಷೆ ನಡೆದಾಗ ಮತಾಂತರವಾಗಿರುವವರು ತಮ್ಮ ಹೊಸ ಧರ್ಮದ ಜೊತೆಗೆ ಜಾತಿಯ ಹೆಸರನ್ನು ಬರೆಸಿದ್ದರು. ಮೊದಲಿನ ಸಮೀಕ್ಷೆಯ ಲೋಪಗಳನ್ನು ಗುರುತಿಸಿ, ಈಗ ಸರಿಪಡಿಸಲಾಗಿದೆ ಎಂದರು.
ಸಮೀಕ್ಷೆಯನ್ನು ವೈಜ್ಞಾನಿಕ ರೀತಿಯಲ್ಲಿ ನಡೆಸಲಾಗುವುದು. ಶಿಕ್ಷಕರು ಈ ಬಾರಿ ಯಾವುದೇ ಲೋಪ ಮಾಡದೆ ಸಮೀಕ್ಷೆ ನಡೆಸಲಿದ್ದಾರೆ. ಸಮೀಕ್ಷೆ ಮಾಡದೇ ಲೋಪವೆಸಗಿದರೆ ಅಂತಹವರ ವಿರುದ್ದ ಕ್ರಮ ಜರುಗಿಸಲಾಗುತ್ತದೆ. ಸಾರ್ವಜನಿಕರು ಸಮೀಕ್ಷೆಯನ್ನು ಯಶಸ್ವಿಗೊಳಿಸಬೇಕು. ತುಳಿತಕ್ಕೊಳಗಾದ ಜನರಿಗೆ ವಿಶೇಷ ಸೌಲಭ್ಯ ಕಲ್ಪಿಸಲು ಈ ಸಮೀಕ್ಷೆ ಅನುಕೂಲವಾಗಲಿದೆ ಎಂದರು.







