ಸಂವಿಧಾನ ವಿರೋಧಿಗಳ ವಿರುದ್ಧ ಪ್ರತಿ ಸಮರ ಅಗತ್ಯ : ಶಿವಸುಂದರ್

ಬೆಂಗಳೂರು : ಮುಸ್ಲಿಮ್ ಸಂಘಟನೆಗಳು ಹಮ್ಮಿಕೊಂಡಿರುವ ರಾಜ್ಯ ಸಮಾವೇಶ ಸರಕಾರದ ಉತ್ತರದಾಯಿತ್ವವನ್ನು ಕೇಳುವ ಅತ್ಯಂತ ಪ್ರಜಾತಾಂತ್ರಿಕ ಸಮಾವೇಶವಾಗಿದೆ. ಇದು ಕೇವಲ ಮುಸ್ಲಿಮರ ಸಮಾವೇಶವಲ್ಲ. ಇದು ಕೇವಲ ಮುಸ್ಲಿಮರು ತಮಗಾಗಿರುವ ಅನ್ಯಾಯಗಳನ್ನು ಪ್ರತಿಭಟಿಸಿ ಮಾಡುತ್ತಿರುವ ಸಮಾವೇಶವೂ ಅಲ್ಲ. ಒಬ್ಬರಿಗೆ ಮಾಡುವ ಅನ್ಯಾಯ ಒಂದು ನಿರ್ದಿಷ್ಟ ರಾಜಕೀಯ ನೀತಿಯ ಭಾಗವಾಗಿ ಆಗುತ್ತಿದೆಯೆಂದರೆ ಅದು ಒಂದು ಸಮುದಾಯಕ್ಕೆ ಸೀಮಿತವಲ್ಲ, ಅದು ಇಡೀ ದೇಶಕ್ಕೆ ಮಾಡುತ್ತಿರುವ ಅನ್ಯಾಯ. ಆದುದರಿಂದ ಪ್ರಜಾತಂತ್ರದಲ್ಲಿ ನಂಬಿಕೆಯಿರುವ ಎಲ್ಲರೂ ಈ ಸಮಾವೇಶದಲ್ಲಿ ಕೈ ಜೋಡಿಸುವುದು ಅತ್ಯಗತ್ಯ ಎಂದು ಸಾಮಾಜಿಕ ಹೋರಾಟಗಾರ ಶಿವಸುಂದರ್ ಅಭಿಪ್ರಾಯ ಪಟ್ಟಿದ್ದಾರೆ.
ಶನಿವಾರ ನಗರದ ಟೌನ್‌ಹಾಲ್‌ನಲ್ಲಿ ಕರ್ನಾಟಕ ಮುಸ್ಲಿಮ್ ಸಂಘಟನೆಗಳ ಒಕ್ಕೂಟ ಆಯೋಜಿಸಿದ್ದ ಕರ್ನಾಟಕ ಮುಸ್ಲಿಮ್ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಈ ದೇಶದ ಸಂವಿಧಾನವನ್ನು ಸರ್ವನಾಶ ಮಾಡುವ ಯೋಜಿತ ಪ್ರಯತ್ನ ಮಾಡಲಾಗುತ್ತಿದೆ. ಇರಾನ್ ಮೇಲೆ ಅಮೆರಿಕ ಮಾಡುತ್ತಿರುವ ಯುದ್ಧಕ್ಕಾದರೂ ಕದನ ವಿರಾಮವಿದೆ. ಆದರೆ ಕಳೆದ 11 ವರ್ಷಗಳಿಂದ ಈ ದೇಶದ ಜನತೆಯ ಮೇಲೆ ಕೇಂದ್ರ ಸರಕಾರ ನಿರಂತರ ಮಾಡುತ್ತಿರುವ ದಾಳಿಗೆ ಕದನ ವಿರಾಮವೇ ಇಲ್ಲ. ಈ ದೇಶದ ಅಲ್ಪಸಂಖ್ಯಾತ ದಲಿತರ ಮೇಲೆ ನಿರಂತರ ದಾಳಿಗಳು ನಡೆಯುತ್ತಿವೆ. ಕಳೆದ 30 ವರ್ಷಗಳಿಂದ ಇಂಚಿಂಚಾಗಿ ಸಂವಿಧಾನವನ್ನು ಕೊಲ್ಲಲಾಗುತ್ತಿದೆ. ಇದರ ವಿರುದ್ಧ ಹೋರಾಡಬೇಕಾದರೆ, ನೈತಿಕತೆಯಿರುವ ರಾಜಕಾರಣ ಇಂದಿನ ಅಗತ್ಯ ಎಂದು ಹೇಳಿದರು.
ನ್ಯಾಯ, ಸಮಾನತೆ, ಬಂಧುತ್ವ ಈ ಮೂರರ ಆಧಾರದ ಮೇಲೆ ಈ ದೇಶವನ್ನು ಕಟ್ಟಲಾಗಿದೆ. ಸಹಬಾಳ್ವೆ ಮತ್ತು ಬಂಧುತ್ವ ಇವೆರಡು ಇಲ್ಲ ಎಂದರೆ ಈ ದೇಶಕ್ಕೆ ಉಳಿವಿಲ್ಲ. ಸಂವಿಧಾನ ವಿರೋಧಿಗಳ ವಿರುದ್ಧ ಪ್ರತಿ ಸಮರ ಸಾರಬೇಕಾಗಿದೆ. ಅವರು ಜಾರಿಗೆ ತರುತ್ತಿರುವ ನೀತಿಗಳಲ್ಲಿರುವ ಅನ್ಯಾಯವನ್ನು ಗ್ರಹಿಸಿ ಅದರ ವಿರುದ್ಧ ಹೋರಾಟ ಮಾಡಬೇಕು. ಈ ಸಮಾವೇಶ ಅದಕ್ಕೆ ನೆರವಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು. ಕರ್ನಾಟಕದಲ್ಲಿ ಮುಸ್ಲಿಮ್ ಸಮುದಾಯ ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದಿರುವ ಬಗ್ಗೆ ಹಲವು ಸಮಿತಿಗಳು ವರದಿ ನೀಡಿವೆ. ಮುಸ್ಲಿಮ್ ಸಾಮಾಜಿಕ ಶೈಕ್ಷಣಿಕ ಮೀಸಲಾತಿಗೆ ಎಲ್ಲ ರೀತಿಯಲ್ಲಿ ಅರ್ಹರಾಗಿದ್ದಾರೆ ಎಂದು ಅಭಿಪ್ರಾಯ ಪಟ್ಟಿವೆ. ಹಿಂದಿನ ಬಿಜೆಪಿ ಸರಕಾರ ಧರ್ಮಾಧಾರಿತ ವಿಭಜನೆ ಮಾಡಿ ಈ ಮೀಸಲಾತಿಯ ವಿರುದ್ಧ ಸಂಚು ಮಾಡಿತು. ಆದರೆ ಬಿಜೆಪಿ ಹೋಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ಇದರ ವಿರುದ್ಧ ಕ್ರಮ ತೆಗೆದುಕೊಳ್ಳಲಿಲ್ಲ. ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಬಿಜೆಪಿ ಸರಕಾರ ತೆಗೆದುಕೊಂಡ ಕ್ರಮವನ್ನು ಪ್ರಶ್ನಿಸುವ ಧೈರ್ಯವನ್ನೂ ಕಾಂಗ್ರೆಸ್ ಸರಕಾರ ತೋರಿಸುತ್ತಿಲ್ಲ ಎಂದು ಅವರು ಕಿಡಿಕಾರಿದರು.
ಪ್ರಜೆಗಳು ಸರಕಾರವನ್ನು ಆಯ್ಕೆ ಮಾಡುವ ಬದಲಿಗೆ ಇಂದು ಸರಕಾರವೇ ಪ್ರಜೆಗಳನ್ನು ಆಯ್ಕೆ ಮಾಡಿಕೊಳ್ಳುವ ಸ್ಥಿತಿ ಬಂದಿದೆ. ಪ್ರಜಾತಂತ್ರ ರಕ್ಷಿಸುವುದೇ ಕಾಂಗ್ರೆಸ್ ಸರಕಾರದ ಗುರಿಯಾಗಿದ್ದರೆ ಎಸ್‌ಐಆರ್‌ನ್ನು ಜಾರಿಗೊಳಿಸಲು ಬಿಡುವುದಿಲ್ಲ ಎಂದು ಕಾಂಗ್ರೆಸ್ ಸ್ಪಷ್ಟ ನಿರ್ಧಾರ ಮಾಡಬೇಕಾಗಿತ್ತು. ಆದರೆ ಎಸ್‌ಐಆರ್‌ನ್ನು ಜಾರಿಗೊಳಿಸಲು ರಾಜ್ಯ ಸರಕಾರ ಪರೋಕ್ಷವಾಗಿ ಕೈಜೋಡಿಸಿದೆ ಎಂದು ಶಿವಸುಂದರ್ ಆರೋಪಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಮುಸ್ಲಿಮ್ ಸಂಘಟನೆಗಳ ಒಕ್ಕೂಟದ ಹಾರಿಸ್ ಸಿದ್ದೀಖಿ ಸ್ವಾಗತಿಸಿದರು. ಜಮೀಯತ್ ಉಲ್ ಖುರೇಷ್ ಸಂಘಟನೆಯ ರಾಜ್ಯಾಧ್ಯಕ್ಷ ಖಾಸಿಮ್ ರಹ್ಮಾನ್ ಖುರೇಷಿ, ಅಡ್ವೊಕೇಟ್ ಮುಝಫ್ಫರ್ ಅಹ್ಮದ್, ಕೋಲಾರ ಜಿಲ್ಲೆಯ ಮುಸ್ಲಿಮ್ ಮುತ್ತಹಿದ ಮಹಝ್ ಪ್ರತಿನಿಧಿ ಮೌಲಾನಾ ಅತೀಖುರ‌್ರಹ್ಮಾನ್, ಮುಸ್ಲಿಮ್ ಸೆಂಟ್ರಲ್ ಕಮಿಟಿಯ ಕೆ.ಅಶ್ರಫ್, ಸಾಮಾಜಿಕ ಕಾರ್ಯಕರ್ತೆ ನಸ್ರೀನ್ ಸೈಯದ್, ರಾಜ್ಯ ನದಾಫ್ ಪಿಂಜಾರ ಸಂಘದ ಅಧ್ಯಕ್ಷ ಜಲೀಲ್ ಸಾಬ್, ಯುನಿವೆಫ್ ಸಂಘಟನೆಯ ರಾಜ್ಯಾಧ್ಯಕ್ಷ ರಫಿವುದ್ದೀನ್ ಕುದ್ರೋಳಿ, ಕಲಬುರಗಿಯ ಕರ್ನಾಟಕ ಮುಸ್ಲಿಮ್ ಪೊಲಿಟಿಕಲ್ ಫೋರಂನ ಅಫ್ಝಲ್ ಮಹ್ಮೂದ್, ಭಟ್ಕಳದ ಮಜ್ಲಿಸೆ ಇಸ್ಲಾಹ್ ವ ತನ್ಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಬೀದರ್ ಜಿಲ್ಲೆಯ ಕರ್ನಾಟಕ ಮುಸ್ಲಿಮ್ ಡೆವಲ್ಪೆಂಟ್ ಸೈಯದ್ ತನ್ವೀರ್ ಖಾನ್, ಕರ್ನಾಟಕ ಮುಸ್ಲಿಮ್ ಅಸೋಸಿಯೇಷನ್ ಅಧ್ಯಕ್ಷ ಬಶೀರ್ ಅಹ್ಮದ್, ಕರ್ನಾಟಕ ರಾಜ್ಯ ಪಟೇಳ್ ಮಂಚ್ ಕಲಬುರಗಿ ಮೆಹರಾಜ್ ಪಟೇಲ್, ಅಲ್ಪಸಂಖ್ಯಾತರ ಜಾಗೃತ ವೇದಿಕೆಯ ಅಬ್ದುಲ್ ಘನಿ ತಾಹೀರ್ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಮೌಲಾನಾ ಝಮೀರ್ ರಶಾದಿ ಕಾರ್ಯಕ್ರಮ ನಿರೂಪಿಸಿದರು. ಸಮಾವೇಶದ ಸಂಚಾಲಕ ತನ್ವಿರ್ ಅಹ್ಮದ್ ಖಾನ್ ವಂದನಾರ್ಪಣೆ ಮಾಡಿದರು.
"ಸ್ವಾಭಾವಿಕವಾಗಿ ನಮಗೆ ಕೇಳುವ ಗುಣ ಬೆಳೆದುಕೊಂಡು ಬರಬೇಕು, ಆದರೆ ರಾಜಕೀಯವಾಗಿ 70 ವರ್ಷಗಳಿಂದ ನಾವು ಅದನ್ನು ಮಾಡಲಿಲ್ಲ. ಆದರೆ ಈಗ ಕರ್ನಾಟಕದಲ್ಲಿ ಪ್ರಪ್ರಥಮವಾಗಿ ನಾವು ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ. ನಾವು ಯಾರನ್ನೂ ದೂಷಣೆ ಮಾಡುತ್ತಿಲ್ಲ. ಮುಸ್ಲಿಂ ಜನಪ್ರತಿನಿಧಿಗಳು ಸಮಾಜದ ಪರವಾಗಿಯಾದರೂ ಒಂದಾಗಬೇಕು. ನೀವು ಒಂದಾಗಿ ಒಂದೇ ವೇದಿಕೆಗೆ ಬರದಿದ್ದರೆ, ನೀವು ನಿಮ್ಮ ಪ್ರಣಾಳಿಕೆಯನ್ನು ಅನುಷ್ಠಾಗೊಳಿಸಲು ಒಂದಾಗಿ ನಿಮ್ಮ ನಾಯಕರ ಹತ್ತಿರ ಹೋಗದಿದ್ದರೆ ಈ ಸಮಾಜ ನಿಮ್ಮ ಬದಲಿಗೆ ನಿನ್ನಬ್ಬರನ್ನೂ ತರಬಹುದು. ನಾವು ಯಾರ ಗುಲಾಮರೂ ಕೂಡ ಅಲ್ಲ. ಮುಸ್ಲಿಂ ಸಮಾಜ ಈಗ ಕೇಳಲು ಆರಂಭಿಸಿದೆ. ನೀವು ನಿಮ್ಮ ಜವಾಬ್ದಾರಿಯನ್ನು ನಿರ್ವಹಿಸಿ. ನಮಗೆ ಈಗಲೂ ರಾಜ್ಯ ಸರಕಾರ ಮೇಲೆ ನಂಬಿಕೆ ಇದೆ. ಅದನ್ನು ಉಳಿಸಿಕೊಂಡು ಬೇಡಿಕೆ ಈಡೇರಿಸಿ. ಇದು ಆಗದಿದ್ದರೆ ಮುಸ್ಲಿಂ ಸಮಾಜ ಸರಿಯಾದ ತೀರ್ಮಾನ ತೆಗೆದುಕೊಳ್ಳುತ್ತದೆ. ಮುಸ್ಲಿಂ ಸಮಾವೇಶದ ಆರಂಭವು ಉತ್ತಮವಾಗಿ ಇರುವುದರಿಂದ ಇದರ ಅರ್ಧ ಉದ್ದೇಶ ಈಡೇರಿದೆ. ನಮ್ಮ ಕೆಲವು ಸಂಘಟಕರಿಗೆ ಅಧಿಕಾರಿಗಳಿಂದ ಹಾಗೂ ಜನಪ್ರತಿನಿಧಿಗಳಿಂದ ನಿರಂತರ ಒತ್ತಡದ ನಡುವೆಯೂ ಕಾರ್ಯಕ್ರಮ ಯಶಸ್ವಿ ಆಗಿದೆ"
ಮುಝಫ್ಫರ್ ಅಹ್ಮದ್, ಅಡ್ವೊಕೇಟ್






