ಬಿಜೆಪಿಯಲ್ಲಿದ್ದೇನೆ ಎಂಬುದಕ್ಕೆ ಎದೆಬಗೆದು ತೋರಿಸಬೇಕಾ?: ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಪ್ರಶ್ನೆ

ಎಂ. ಪಿ. ರೇಣುಕಾಚಾರ್ಯ
ದಾವಣಗೆರೆ: ಭಾರತೀಯ ಜನತಾ ಪಕ್ಷದ ಕಟ್ಟಾಳು ನಾನು. ಈಗಲೂ ಬಿಜೆಪಿಯಲ್ಲಿದ್ದೇನೆ ಎಂದು ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿದ್ದೇನೆ ಎಂಬುದಕ್ಕೆ ಎದೆಬಗೆದು ತೋರಿಸಬೇಕಾ?, ನನಗೆ ಬೆದರಿಕೆ ಕರೆ ಬಂದಾಗ ಯಾರೂ ಬೆಂಬಲ ನೀಡಲಿಲ್ಲ. ನನ್ನ ಸ್ವಂತ ಶಕ್ತಿ ಹಾಗೂ ಕ್ಷೇತ್ರದ ಜನರಿಂದ ಜಯಿಸಿದ್ದೇನೆ. ದೇಶಕ್ಕೆ ನರೇಂದ್ರ ಮೋದಿ ಅವರು ಪ್ರಧಾನಿಯಾಗಬೇಕು. ರಾಜ್ಯಕ್ಕೆ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪರು ಅಷ್ಟೇ ಮುಖ್ಯ. ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ. ನಾನು ಸಿದ್ದೇಶ್ವರ ವಿರುದ್ಧ ಮಾತನಾಡಿಲ್ಲ. ನಾನೂ ಆಕಾಂಕ್ಷಿಯಿದ್ದೇನೆ ಎಂದಷ್ಟೇ ಹೇಳುತ್ತಿದ್ದೇನೆ. ಹೊನ್ನಾಳಿ - ನ್ಯಾಮತಿ ಮಾತ್ರವಲ್ಲ, ಜಿಲ್ಲೆಯ ಜನರ ಬಯಕೆ ಇದೇ ಆಗಿದೆ. ಟಿಕೆಟ್ ಸಿಗದಿದ್ದರೆ ಮುಂದೆ ಯಾವ ನಿರ್ಣಯ ತೆಗೆದುಕೊಳ್ಳುತ್ತೇನೆ ಎಂಬುದನ್ನು ಈಗಲೇ ಹೇಳಲು ಆಗಲ್ಲ ಎಂದರು.
ಭದ್ರಾ ನಾಲೆ ನೀರು ಹರಿಸಬೇಕು. ಅಡಿಕೆಗೆ ಕೊಳೆ ರೋಗ ಬಂದಿದೆ. ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಸಿಎಂ ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್, ಶಾಸಕರಾದ ಶಾಮನೂರು ಶಿವಶಂಕರಪ್ಪ, ಸಚಿವರಾದ ಎಸ್. ಎಸ್. ಮಲ್ಲಿಕಾರ್ಜುನ್ ಅವರನ್ನು ಭೇಟಿ ಮಾಡಿದ್ದೇನೆ. ತಾಲೂಕಿನ ಹಾಗೂ ಜಿಲ್ಲೆಯ ಜನರ ಪರ ಆಡಳಿತದಲ್ಲಿರುವವರ ಭೇಟಿ ಮಾಡಿ ಮನವಿ ಮಾಡಬಾರದಾ ಎಂದು ಪ್ರಶ್ನಿಸಿದ ಅವರು, ನಾನು ಹೋದಾಗ ಪ್ರೀತಿಯಿಂದ ಮಾತನಾಡಿಸಿದ್ದಾರೆ ಅಷ್ಟೇ ಎಂದರು.
ಯಡಿಯೂರಪ್ಪ ನನ್ನನ್ನು ಬೆಳೆಸಿದವರು. ನನ್ನ ಗೌರವ, ಶ್ರದ್ಧೆ ಪಕ್ಷ ಮತ್ತು ಯಡಿಯೂರಪ್ಪ ಅವರಿಗೆ ಇರುತ್ತದೆ. ಬೇರೆ ವಿಚಾರಗಳ ಬಗ್ಗೆ ಏನೂ ಪ್ರತಿಕ್ರಿಯೆ ನೀಡಲ್ಲ ಎಂದು ಹೇಳಿದರು.
ಈ ವೇಳೆ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಲೋಕಿಕೆರೆ ನಾಗರಾಜ್ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.







