‘ಭೂ ಸುರಕ್ಷಾ’ ಯೋಜನೆ ಪರಿಣಾಮಕಾರಿಯಾಗಿ ಜಾರಿಯಾಗಲಿ : ಸಿದ್ದರಾಮಯ್ಯ
ವಂಚಕರು ಭೂ ದಾಖಲೆ ತಿದ್ದಲು ಅವಕಾಶ ನೀಡದಂತೆ ಭದ್ರತೆ ಒದಗಿಸಲು ಸಿಎಂ ಸೂಚನೆ

ಬೆಂಗಳೂರು : ಭೂ ದಾಖಲೆಗಳ ರಕ್ಷಣೆಗೆ ಹಾಗೂ ವಂಚಕರಿಂದ ದುರುಪಯೋಗ ಆಗದಂತೆ, ದಾಖಲೆ ತಿದ್ದಲು ಅವಕಾಶ ಆಗದಂತೆ ‘ಭೂ ಸುರಕ್ಷಾ’ ಯೋಜನೆ ಪರಿಣಾಮಕಾರಿಯಾಗಿ ಜಾರಿಯಾಗಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬುಧವಾರ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಂದಾಯ ಸಚಿವರು ಹಾಗೂ ಇಲಾಖಾಧಿಕಾರಿಗಳಿಗೆ ಸಿಎಂ ಈ ಸೂಚನೆ ನೀಡಿದರು.
ಇದೇ ವೇಳೆ ಕಂದಾಯ ಸಚಿವ ಕೃಷ್ಣಬೈರೇಗೌಡ ಮಾತನಾಡಿ, ಭೂ ಸುರಕ್ಷಾ ಯೋಜನೆ ಮೂಲಕ ಈಗಾಗಲೇ 8 ಕೋಟಿ ಮೂಲ ದಾಖಲೆಗಳ ಕಂಪ್ಯೂಟರೀಕರಣವಾಗಿದ್ದು, ವಂಚಕರು ತಿದ್ದಲು ಅವಕಾಶ ಆಗದಂತೆ ದಾಖಲೆಗಳಿಗೆ ಡಿಜಿಟಲ್ ಭದ್ರತೆ ಒದಗಿಸಲಾಗಿದೆ. ಎಲ್ಲ 31 ಜಿಲ್ಲೆಗಳಲ್ಲಿ ದಾಖಲೆಗಳ ಕಂಪ್ಯೂಟರೀಕರಣ ಕಾರ್ಯ ನಡೆಯುತ್ತಿದೆ ಎಂದು ಮುಖ್ಯಮಂತ್ರಿಗಳಿಗೆ ವಿವರಿಸಿದರು.
ತಂತ್ರಾಂಶವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಕಂದಾಯ ವ್ಯವಸ್ಥೆಯಲ್ಲಿ ಸುಧಾರಣಾ ಕಾರ್ಯ ಕೈಗೊಳ್ಳಲಾಗಿದೆ. ನಕ್ಷಾ ಯೋಜನೆ ಮೂಲಕ ನಗರ ಪ್ರದೇಶದಲ್ಲಿ ಡ್ರೋನ್ ಸರ್ವೇ ಮೂಲಕ ಪ್ರಾಪರ್ಟಿ ಕಾರ್ಡು ನೀಡುತ್ತಿದ್ದೇವೆ. 21 ಜಿಲ್ಲೆಗಳಲ್ಲಿ ಡ್ರೋನ್ ಮೂಲಕ ಸರ್ವೇ ಕಾರ್ಯ ಕೈಗೊಳ್ಳಲಾಗಿದೆ ಎಂದು ಸಭೆಯಲ್ಲಿ ಸಚಿವ ಕೃಷ್ಣಬೈರೇಗೌಡ ಸಿಎಂಗೆ ತಿಳಿಸಿದರು.
ಹಲವು ವರ್ಷಗಳಿಂದ ಸರಕಾರಿ ಜಮೀನು ಸಾಗುವಳಿ ಮಾಡುತ್ತಿರುವ ರೈತರಿಂದ ಸದರಿ ಜಮೀನು ಸ್ವಾಧೀನಪಡಿಸುವ ಸಂದರ್ಭದಲ್ಲಿ ಎಕ್ಸ್ ಗ್ರೇಷಿಯಾ ನೀಡುವ ಬಗ್ಗೆ ಸೂಕ್ತ ಪ್ರಸ್ತಾವನೆ ಸಲ್ಲಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.







