ಬಂಟ್ವಾಳದಲ್ಲಿ ಯುವಕನ ಹತ್ಯೆ ಪ್ರಕರಣ : ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದೇನು?

ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು : ಬಂಟ್ವಾಳದ ಕೊಳತ್ತಮಜಲು ಬಳಿ ನಡೆದ ಅಬ್ದುಲ್ ರಹಿಮಾನ್ ಎಂಬ ಯುವಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಪೊಲೀಸರಿಗೆ ಹೇಳಿದ್ದೇನೆ ಎಂದು ತಿಳಿಸಿದರು.
ಈ ಸಂಬಂಧ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,"ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ ಯುವಕನೊಬ್ಬನ ಹತ್ಯೆ ಆಗಿದ್ದು, ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಪೊಲೀಸರಿಗೆ ಹೇಳಿದ್ದೇನೆ" ಎಂದರು.
ಏನಿದು ಘಟನೆ : ದುಷ್ಕರ್ಮಿಗಳ ತಂಡವೊಂದು ಇಬ್ಬರ ಮೇಲೆ ತಲವಾರು ದಾಳಿ ಮಾಡಿದ ಪರಿಣಾಮ ಓರ್ವ ಮೃತಪಟ್ಟು ಇನ್ನೋರ್ವ ಗಾಯಗೊಂಡಿರುವ ಘಟನೆ ಅಡ್ಡೂರು ಕೊಲ್ತಮಜಲು ಎಂಬಲ್ಲಿ ಮಂಗಳವಾರ ನಡೆದಿತ್ತು.
ಘಟನೆಯಲ್ಲಿ ಕೊಲ್ತಮಜಲು ಬೆಲ್ಲೂರು ನಿವಾಸಿ ಅಬ್ದುಲ್ ಖಾದರ್ ಎಂಬವರ ಮಗ ಅಬ್ದುಲ್ ರಹಿಮಾನ್ ಮೃತಪಟ್ಟಿದ್ದರು. ಅಲ್ಲದೆ, ಮತ್ತೋರ್ವ ಯುವಕ ಕಲಂದರ್ ಶಾಫಿ ಗಾಯಗೊಂಡಿದ್ದರು.
ಇಬ್ಬರೂ ಕೊಲ್ತಮಜಲು ಎಂಬಲ್ಲಿ ಪಿಕ್ ಅಪ್ ವಾಹನದಲ್ಲಿ ಮರಳು ಅನ್ ಲೋಡ್ ಮಾಡುತ್ತಿದ್ದ ವೇಳೆ ದುಷ್ಕರ್ಮಿಗಳು ತಲವಾರು ದಾಳಿ ಮಾಡಿದ್ದರು.







