ರವಿಕುಮಾರ್ ಅವಹೇಳನಕಾರಿ ಹೇಳಿಕೆ | ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚನೆ : ಸಿದ್ದರಾಮಯ್ಯ

ಬೆಂಗಳೂರು : ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ವಿಧಾನ ಪರಿಷತ್ ಪ್ರತಿಪಕ್ಷದ ಮುಖ್ಯ ಸಚೇತಕ ಹಾಗೂ ಬಿಜೆಪಿ ನಾಯಕ ರವಿಕುಮಾರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಮಾತನಾಡಿದ ಅವರು, ರವಿಕುಮಾರ್ ಅವರಿಗೆ ನಾಲಿಗೆ ಉದ್ದ ಆಗಿದೆ. ಈಗಾಗಲೇ ಪ್ರಕರಣ ದಾಖಲಾಗಿದ್ದು, ಸೂಕ್ತ ಪೊಲೀಸ್ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇನ್ನೂ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ಈಗಾಗಲೇ ಎಫ್‍ಐಆರ್ ಆಗಿದ್ದು, ಪರಿಶೀಲನೆ ನಡೆಸಿದ ಬಳಿಕ ಕ್ರಮ ಕೈಗೊಳ್ಳುತ್ತೇವೆ. ರವಿಕುಮಾರ್ ವಿದ್ಯಾರ್ಥಿಯಾದ್ದಾಗಿನಿಂದಲೂ ಗೊತ್ತು. ಎಬಿವಿಪಿಯಲ್ಲಿ ಪ್ರಧಾನ ಕಾರ್ಯದರ್ಶಿ ಆಗಿದ್ದಾಗ ನಾನು ಉನ್ನತ ಶಿಕ್ಷಣ ಸಚಿವನಾಗಿದ್ದೆ. ಆಗಿನಿಂದಲೂ ನನಗೆ ಗೊತ್ತಿದೆ. ಅವರು ಯಾಕೆ ಈ ರೀತಿ ಮಾತನಾಡಿದರು ಎಂಬುದೇ ಆಶ್ಚರ್ಯ ಎಂದರು.
ಸದಾನಂದಗೌಡ ಆಕ್ಷೇಪ: ರವಿಕುಮಾರ್ ವಿವಾದಿತ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ, ಬಿಜೆಪಿ ಹಿರಿಯ ನಾಯಕ ಡಿ.ವಿ.ಸದಾನಂದಗೌಡ, ಜವಾಬ್ದಾರಿಯುತ ಸ್ಥಾನದಲ್ಲಿರುವ ಜನ ಆಡುವ ಮಾತಿನಲ್ಲಿ ತೂಕವಿರಬೇಕು ಎಂದು ಹೇಳಿದ್ದಾರೆ.





