ದೇಶದ ಪ್ರತಿ ನಾಗರಿಕನ ಆರ್ಥಿಕ, ಸಾಮಾಜಿಕ ಸ್ಥಿತಿಗತಿಯ ಮಾಹಿತಿ ಅತ್ಯಗತ್ಯ: ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ
ಹೊಸದಿಲ್ಲಿ : ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸಮೀಕ್ಷೆ ಅನಿವಾರ್ಯವಾಗಿದ್ದು, ಈ ದಿಸೆಯಲ್ಲಿ ದೇಶದ ಪ್ರತಿ ನಾಗರಿಕನ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಸ್ಥಿತಿಗತಿಯ ಮಾಹಿತಿ ಅತ್ಯಗತ್ಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಶುಕ್ರವಾರ ಹೊಸದಿಲ್ಲಿಯ ಕರ್ನಾಟಕ ಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ಪ್ರಜೆಯ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಹಾಗೂ ಔದ್ಯೋಗಿಕ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆಯುವುದು ಅತ್ಯಗತ್ಯ. ನಮ್ಮ ಸಂವಿಧಾನ ಸಾಮಾಜಿಕ ನ್ಯಾಯವನ್ನು ಬೆಂಬಲಿಸುತ್ತದೆ. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಸಮಾನತೆಯೆಂಬುದು ದೇಶದಲ್ಲಿ ಸ್ಥಾಪಿತವಾಗಿದೆಯೇ ಎಂಬ ಬಗ್ಗೆ ತಿಳಿದುಕೊಳ್ಳಲು ಇಂತಹ ಸಮೀಕ್ಷೆ ನಡೆಸಲೇಬೇಕಾಗುತ್ತದೆ ಎಂದು ಹೇಳಿದರು.
ಸಾಮಾಜಿಕ ಆರ್ಥಿಕ ಸಮೀಕ್ಷೆ ನಡೆಸಬೇಕೆಂದು ರಾಹುಲ್ ಗಾಂಧಿ ಬದ್ಧರಾಗಿದ್ದಾರೆ. ಜಾತಿಗಣತಿ ಜೊತೆಗೆ ಆರ್ಥಿಕ, ಸಾಮಾಜಿಕ ಸಮೀಕ್ಷೆ ನಡೆಸಿದಾಗ ಮಾತ್ರ, ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸಾಧ್ಯವಾಗುತ್ತದೆ. ಇದು ಭಾಗೀಧಾರಿ ನ್ಯಾಯ ಸಮ್ಮೇಳನದ ಮೂಲ ಉದ್ದೇಶ. ಮುಂದಿನ ದಿನಗಳಲ್ಲಿ ದೇಶದೆಲ್ಲೆಡೆ ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಸಮೀಕ್ಷೆ ಕೇವಲ ಒಬಿಸಿ ವರ್ಗಕ್ಕೆ ಸಂಬಂಧಿಸಿದ್ದಲ್ಲ: ಎಐಸಿಸಿಯ ಒಬಿಸಿ ಸಲಹಾ ಮಂಡಳಿಯಲ್ಲಿ ನಾನು ಓರ್ವ ಸದಸ್ಯನಾಗಿದ್ದು, ಜು.15 ಹಾಗೂ 16 ರಂದು ಬೆಂಗಳೂರಿನಲ್ಲಿ ಮಂಡಳಿಯ ಪ್ರಥಮ ಸಭೆ ನಡೆದಿತ್ತು. ಎಐಸಿಸಿಯ ಹಿಂದುಳಿದ ವರ್ಗಗಳ ವಿಭಾಗಕ್ಕೆ ಡಾ.ಅನಿಲ್ ಜೈಹಿಂದ್ ಮುಖ್ಯಸ್ಥರಾಗಿದ್ದಾರೆ. ಆ ಸಭೆಯಲ್ಲಿ ಬೆಂಗಳೂರು ಘೋಷಣೆ ಸೇರಿದಂತೆ ಮೂರು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು ಎಂದು ಅವರು ಹೇಳಿದರು.
2015ರಲ್ಲಿ ಸಾಮಾಜಿಕ ಆರ್ಥಿಕ ಸಮೀಕ್ಷೆಯನ್ನು ಪ್ರಾರಂಭಿಸಿದ ರಾಜ್ಯ ಕರ್ನಾಟಕ. 2018ರಲ್ಲಿ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಈ ಜಾತಿಗಣತಿ ವರದಿಯನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ಹತ್ತು ವರ್ಷಗಳ ಹಳೆಯ ಅಂಕಿಅಂಶಗಳಾದ್ದರಿಂದ ಕಾನೂನಿನನ್ವಯ ಮರುಗಣತಿ ಮಾಡುವ ಅಗತ್ಯವಿದೆ. ಆದುದರಿಂದ, ನಮ್ಮ ಸರಕಾರ ರಾಜ್ಯದಲ್ಲಿ ಮರುಗಣತಿ ಮಾಡಲು ಕ್ರಮ ಕೈಗೊಳ್ಳುತ್ತಿದೆ. ಇದೇ ರೀತಿ ಎಲ್ಲ ರಾಜ್ಯಗಳಲ್ಲಿಯೂ ತೆಲಂಗಾಣ ಮಾದರಿಯಲ್ಲಿ ಜಾತಿಗಣತಿಯನ್ನು ಮಾಡಬೇಕೆಂದು ನಿರ್ಣಯಿಸಲಾಯಿತು ಎಂದು ಅವರು ವಿವರಿಸಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಿಂದುಳಿದ ವರ್ಗದ ಏಳಿಗೆಯ ವಿಷಯವನ್ನು ಮುಂಚೂಣಿಗೆ ತಂದ ನಂತರವಷ್ಟೇ, ಕೇಂದ್ರ ಸರಕಾರ ಜಾತಿಗಣತಿಯನ್ನು ಮಾಡುವುದಾಗಿ ಹೇಳಿದೆ. 1931ನೆ ಇಸವಿಯ ನಂತರ ದೇಶದಲ್ಲಿ ಜಾತಿಗಣತಿ ನಡೆದಿಲ್ಲ. ಈ ಸಮೀಕ್ಷೆ ಕೇವಲ ಒಬಿಸಿ ವರ್ಗಕ್ಕೆ ಸಂಬಂಧಿಸಿದ್ದಲ್ಲ. ರಾಜ್ಯದಲ್ಲಿ ಎಲ್ಲ ಏಳು ಕೋಟಿ ಜನರ ಸಮೀಕ್ಷೆ ನಡೆಯುತ್ತದೆ ಎಂದು ಮುಖ್ಯಮಂತ್ರಿ ಹೇಳಿದರು.
ಬಿಜೆಪಿಯವರು ಸಂವಿಧಾನವನ್ನು ಯಾವಾಗ ಗೌರವಿಸಿದ್ದಾರೆ?: ಎಐಸಿಸಿ ಒಬಿಸಿ ಸಭೆ ಬಗ್ಗೆ ಬಿಜೆಪಿ ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ, ಬಿಜೆಪಿಯವರು ಸಾಮಾಜಿಕ ನ್ಯಾಯದ ಪರವಾಗಿ ಎಂದೂ ಇರಲಿಲ್ಲ. ಮಂಡಲ್ ಆಯೋಗದ ವರದಿಯನ್ನು ಬಿಜೆಪಿ ವಿರೋಧಿಸಿತ್ತು. ಮಂಡಲ್ ಗೆ ಪ್ರತಿಯಾಗಿ ಕಮಂಡಲ ಯಾತ್ರೆ ಶುರು ಮಾಡಿದ್ದು ಯಾರು? ಎಂದು ಪ್ರಶ್ನಿಸಿದರು.
ಆ ಸಂದರ್ಭದಲ್ಲಿ 200 ಆತ್ಮಹತ್ಯೆಗಳಿಗೆ ಪ್ರಚೋದನೆ ಕೊಟ್ಟವರು ಯಾರು? 1993 ನಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿಯನ್ನು ಜಾರಿಗೆ ತಂದಾಗ ಅದನ್ನು ವಿರೋಧಿಸಿದ್ದು ಯಾರು? 74ನೆ ತಿದ್ದುಪಡಿಯನ್ನು ವಿರೋಧಿಸಿದವರು ಯಾರು? ಬಿಜೆಪಿಯವರು ಸಂವಿಧಾನವನ್ನು ಯಾವಾಗ ಗೌರವಿಸಿದ್ದಾರೆ? ಎಂದು ಮುಖ್ಯಮಂತ್ರಿ ಕೇಳಿದರು.
ಸಂವಿಧಾನ ಜಾರಿಗೆ ಬಂದಾಗ ಆರೆಸ್ಸೆಸ್ ಮುಖವಾಣಿ ಆರ್ಗನೈಸರ್ ಪತ್ರಿಕೆಯಲ್ಲಿ ಸಾವರ್ಕರ್, ಗೋಳ್ವಾಲ್ಕರ್ ಅವರ ಹೇಳಿಕೆಗಳನ್ನು ಗಮನಿಸಬೇಕು. ಅಂಬೇಡ್ಕರ್ ಅವರನ್ನು ಕಾಂಗ್ರೆಸ್ನವರು ಸೋಲಿಸಿದರು ಎಂದು ಬಿಜೆಪಿಯವರು ಕೇವಲ ಸುಳ್ಳನ್ನೇ ಹೇಳುವುದು. ಅಂಬೇಡ್ಕರ್ ತಮ್ಮ ಸ್ನೇಹಿತರಿಗೆ ಬರೆದ ಪತ್ರದಲ್ಲಿ ನನ್ನನ್ನು ಸೋಲಿಸಿದವರು ಹಿಂದೂ ಮಹಾಸಭಾದ ಅಧ್ಯಕ್ಷ ಸಾವರ್ಕರ್ ಹಾಗೂ ಕಮ್ಯುನಿಸ್ಟ್ ಪಕ್ಷದ ರಂಗ ಎಂದು ಬರೆದಿದ್ದಾರೆ ಎಂದು ಹೇಳಿದರು.







