ಕುರುಡು ಏಕರೂಪತೆಯಿಂದ ಸಮಾನತೆ ಸಾಧ್ಯವಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ
ಹೊಸದಿಲ್ಲಿ : ಕುರುಡು ಏಕರೂಪತೆಯಿಂದ ಸಮಾನತೆಯನ್ನು ಖಾತರಿಪಡಿಸಲು ಸಾಧ್ಯವಿಲ್ಲ. ಆದರೆ, ನೂರಾರು ವರ್ಷಗಳಿಂದ ತುಳಿತಕ್ಕೊಳಗಾದ ಸಮುದಾಯಗಳಿಗೆ ನಿಜ ಅರ್ಥದಲ್ಲಿ ಸಮಾನತೆಯನ್ನು ಒದಗಿಸಲು ಸಕಾರಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಶನಿವಾರ ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ಎಐಸಿಸಿ ಕಾನೂನು, ಮಾನವ ಹಕ್ಕುಗಳು ಹಾಗೂ ಮಾಹಿತಿ ಹಕ್ಕು ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ‘ಸಾಮಾಜಿಕ ನ್ಯಾಯ ಮತ್ತು ಸಂವಿಧಾನ: ಸಮಾನತೆ ಮತ್ತು ಭ್ರಾತೃತ್ವದ ಕಲ್ಪನೆಗಳು’ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.
ಸಮಾನತೆ ಮತ್ತು ಭ್ರಾತೃತ್ವವು ಒಟ್ಟಾಗಿ ಸಾಗುತ್ತದೆ. ಅದನ್ನು ಭ್ರಾತೃತ್ವದಿಂದ ಬೇರ್ಪಡಿಸಲು ಸಾಧ್ಯವಿಲ್ಲ. ಭ್ರಾತೃತ್ವವಿಲ್ಲದೆ, ಸ್ವಾತಂತ್ರ್ಯ ಮತ್ತು ಸಮಾನತೆಯು ನೈಸರ್ಗಿಕ ಮಾರ್ಗವಾಗಲು ಸಾಧ್ಯವಿಲ್ಲ. ನಿಜವಾದ ಸಾಮಾಜಿಕ ನ್ಯಾಯವು ಸಹೋದರತ್ವದ ಭಾವನೆಯೊಂದಿಗೆ ಸಾಗುವ ಸಕಾರಾತ್ಮಕ ಕ್ರಿಯೆಯ ಮೂಲಕ ದೊರೆಯುವ ಸಮಾನತೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ನ್ಯಾಯದ ಕಲ್ಪನೆಯನ್ನು ಸಮಾನತೆಯ ತಳಹದಿಯ ಮೇಲೆ ನಿರ್ಮಿಸಲಾಗಿದೆ. ಭಾರತದ ಸಂವಿಧಾನವು ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಭ್ರಾತೃತ್ವದ ಸಾಕಾರ ರೂಪವಾಗಿದೆ. ನಮ್ಮ ಪೂರ್ವಜರ ಕನಸಾದ ಜಾತಿರಹಿತ, ವರ್ಗರಹಿತ, ಸಮಾಜವಾದಿ ಸಮಾಜವನ್ನು ಸಾಧಿಸುವ ಗುರಿಯನ್ನು ಇದು ಹೊಂದಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಸಂವಿಧಾನವು ಭಾರತೀಯ ಸಮಾಜದಲ್ಲಿ ಸಂಪನ್ಮೂಲಗಳ ವಿತರಣೆಯಲ್ಲಿನ ಐತಿಹಾಸಿಕ ಅಸಮಾನತೆಗಳು ಮತ್ತು ಸಮಾನ ಅವಕಾಶಗಳ ನಿರಾಕರಣೆಯನ್ನು ಗಮನದಲ್ಲಿಟ್ಟುಕೊಂಡು ಸಾಮಾಜಿಕ ನ್ಯಾಯದ ಅತ್ಯಂತ ವಿಶಿಷ್ಟ ಪರಿಕಲ್ಪನೆಯನ್ನು ಚಿತ್ರಿಸಿದೆ. ಗಣ್ಯರಿಗೆ ಮಾತ್ರ ಸೀಮಿತವಾಗಿದ್ದ ನ್ಯಾಯ ಹಾಗೂ ಬಡತನವೇ ಹೆಚ್ಚಿದ್ದ ಸಂದರ್ಭದಲ್ಲಿ ಸಂವಿಧಾನದ ಸ್ಥಾಪಕರು ಈ ಐತಿಹಾಸಿಕ ಅನ್ಯಾಯವನ್ನು ರದ್ದುಗೊಳಿಸುವ ಗುರಿಯನ್ನು ಹೊಂದಿದ್ದರು ಎಂದು ಅವರು ಹೇಳಿದರು.
ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿರುವವರು, ಅತ್ಯಂತ ಅಂಚಿನಲ್ಲಿರುವ ಜನರನ್ನು ಹಾಗೂ ಅಸ್ಪೃಶ್ಯತೆ ಮತ್ತು ಸಾಮಾಜಿಕ ಪ್ರತ್ಯೇಕತೆಯಿಂದ ಬಹಿಷ್ಕರಿಸಲ್ಪಟ್ಟವರನ್ನು ನಾವು ಗುರುತಿಸಬೇಕು. ಮತ್ತು ಸಂವಿಧಾನದಡಿಯಲ್ಲಿ ಲಭ್ಯವಿರುವ ಪ್ರತಿಯೊಂದು ಕಾರ್ಯವಿಧಾನದ ಮೂಲಕ ಅವರನ್ನು ಮುಖ್ಯವಾಹಿನಿಗೆ ತರಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದರು.
ದೇಶದ ಸಂಪನ್ಮೂಲಗಳು ಮತ್ತು ಲಭ್ಯವಿರುವ ವೈವಿಧ್ಯಮಯ ಅವಕಾಶಗಳನ್ನು ನಾವು ನಿಜವಾದ ಸಮಾನತೆಯನ್ನು ಸಾಧಿಸಲು ಸಾಧ್ಯವಾಗುವಂತೆ ವಿತರಿಸಬೇಕು. ಕರ್ನಾಟಕ ಸರಕಾರವು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ವಿವಿಧ ಸಮುದಾಯಗಳನ್ನು ಗುರುತಿಸಿ ಅವರಿಗೆ ಮೀಸಲಾತಿ ಒದಗಿಸಲು ಸಮೀಕ್ಷೆ ಕೈಗೊಳ್ಳಲು ಆದೇಶ ಹೊರಡಿಸಿದೆ ಎಂದು ಅವರು ಹೇಳಿದರು.
ಪರಿಶಿಷ್ಟ ಜಾತಿಗೆ ಅವರ ಜನಸಂಖ್ಯೆಯ ಆಧಾರದ ಮೇಲೆ ಆಂತರಿಕ ಮೀಸಲಾತಿಯನ್ನು ಒದಗಿಸಲು ನಾವು ರಾಜ್ಯದ ವಿವಿಧ ಪರಿಶಿಷ್ಟ ಜಾತಿಗಳ ಸಮೀಕ್ಷೆಯನ್ನು ಪ್ರಾರಂಭಿಸಿದ್ದೇವೆ. ನಮ್ಮ ಸಂವಿಧಾನದಲ್ಲಿ ಹೇಳಲಾಗಿರುವ ಈ ಸಕಾರಾತ್ಮಕ ಕ್ರಮಗಳ ಮೂಲಕ, ಸಾಮಾಜಿಕ ನ್ಯಾಯ, ನಿಜವಾದ ಸಮಾನತೆ ಮತ್ತು ಭ್ರಾತೃತ್ವವನ್ನು ಸಾಧಿಸಲು ನಾವು ಸರಿಯಾದ ಹಾದಿಯಲ್ಲಿದ್ದೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಕರ್ನಾಟಕವು ಎಸ್ಸಿಪಿ/ಟಿಎಸ್ಪಿ ಕಾಯ್ದೆಯ ಮೂಲಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಅವರ ಜನಸಂಖ್ಯೆಗೆ ಅನುಗುಣವಾಗಿ ಪ್ರತ್ಯೇಕ ಅನುದಾನವನ್ನು ಮೀಸಲಿಟ್ಟ ಮುಂಚೂಣಿ ರಾಜ್ಯವಾಗಿದೆ. ಹಿಂದುಳಿದ ವರ್ಗಗಳಿಗೆ ಶೇ.32ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿ, ಮಂಡಲ್ ಆಯೋಗದ ವರದಿಯನ್ನು ಯಶಸ್ವಿಯಾಗಿ ಜಾರಿ ಮಾಡಿದ್ದಲ್ಲದೇ, ಅದರಾಚೆಗೂ ಕಾರ್ಯಸಾಧಿಸಿದ್ದೇವೆ ಎಂದು ಮುಖ್ಯಮಂತ್ರಿ ಹೇಳಿದರು.
ದೇಶದಲ್ಲಿ ಈಗ ಅಸ್ತಿತ್ವದಲ್ಲಿರುವ ವ್ಯವಸ್ಥೆಯ ನೀತಿಗಳು ಮತ್ತು ರಾಜಕೀಯಕ್ಕೆ ನಾವು ಕುರುಡರಾಗಲು ಸಾಧ್ಯವಿಲ್ಲ. ಹಿಂದುಳಿದ ಮತ್ತು ಅಂಚಿನಲ್ಲಿರುವ ವರ್ಗಗಳನ್ನು ದುರ್ಬಲಗೊಳಿಸುವುದು ಮತ್ತು ಈಗಾಗಲೇ ಪ್ರಬಲವಾಗಿರುವ ಪ್ರಭುತ್ವ ರಾಜ್ಯವನ್ನು ರಚಿಸುವುದು ಅದರ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.
ಆದುದರಿಂದ, ರಾಜ್ಯದ ಸಂಪನ್ಮೂಲಗಳು ಮತ್ತು ಅವಕಾಶಗಳನ್ನು ಸಮಾನವಾಗಿ ವಿತರಿಸುವ ಮತ್ತು ಅತ್ಯಂತ ಹಿಂದುಳಿದವರನ್ನು ತಲುಪುವ ಸಮಗ್ರ ಮತ್ತು ಬಹುತ್ವ ಸಮಾಜವನ್ನು ಮರುಸ್ಥಾಪಿಸುವ ಅವಶ್ಯಕತೆಯಿದೆ ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದರು.







