ದೀರ್ಘಾವಧಿ ಮುಖ್ಯಮಂತ್ರಿಯಾಗಿ ಇತಿಹಾಸ ಸೃಷ್ಟಿಸಿದ ಸಿದ್ದರಾಮಯ್ಯ: ಕಾಂಗ್ರೆಸ್ ನಾಯಕರು ಹೇಳಿದ್ದೇನು?

ಸಿದ್ದರಾಮಯ್ಯ/ಡಿ.ದೇವರಾಜ ಅರಸು
ಬೆಂಗಳೂರು : ಸ್ವಾತಂತ್ರ್ಯಾ ನಂತರ ಚುನಾಯಿತ ಸರಕಾರಗಳು ಅಸ್ತಿತ್ವಕ್ಕೆ ಬಂದ ಬಳಿಕ ಅತೀ ಹೆಚ್ಚು ಅವಧಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಡಿ.ದೇವರಾಜ ಅರಸು ಅವರ ದಾಖಲೆಯನ್ನು ಜ.6ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸರಿಗಟ್ಟಿದ್ದಾರೆ. ದೇವರಾಜ ಅರಸು ಒಟ್ಟು 7 ವರ್ಷ 239 ದಿನಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿದ್ದರು.
ಸಿದ್ದರಾಮಯ್ಯ ಮಂಗಳವಾರ ಈ ದಾಖಲೆಯನ್ನು ಸರಿಗಟ್ಟುವ ಮೂಲಕ ಹೊಸ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಜ.7ರಂದು ಮುಖ್ಯಮಂತ್ರಿಯಾಗಿ 7 ವರ್ಷ 240ನೇ ದಿನಕ್ಕೆ ಸಿದ್ದರಾಮಯ್ಯ ಅವರು ಪಾದಾರ್ಪಣೆ ಮಾಡಲಿದ್ದಾರೆ. ಅವರ ನಂತರ ಎಸ್.ನಿಜಲಿಂಗಪ್ಪ(7 ವರ್ಷ 175 ದಿನ), ರಾಮಕೃಷ್ಣ ಹೆಗಡೆ(5 ವರ್ಷ 216 ದಿನ) ಮತ್ತು ಬಿ.ಎಸ್. ಯಡಿಯೂರಪ್ಪ(5 ವರ್ಷ 82 ದಿನ) ಅತೀ ಹೆಚ್ಚು ಅವಧಿಗೆ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜು ಅರಸು ಅವರ 2792 ದಿನಗಳ ದಾಖಲೆಯನ್ನು ಸರಿಗಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಅಭಿನಂದಿಸಿದ್ದಾರೆ.
ಸಿದ್ದರಾಮಯ್ಯನವರಿಗೆ ಒಳ್ಳೆಯದಾಗಲಿ:
‘ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಡಿ.ದೇವರಾಜ ಅರಸು ಅವರ ದಾಖಲೆಯನ್ನು ಸರಿಗಟ್ಟಿದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒಳ್ಳೆಯದಾಗಲಿ, ಐ ವಿಶ್ ಹಿಮ್ ಆಲ್ ದ ಬೆಸ್ಟ್. ಗುಡ್ ಲಕ್. ಸಿದ್ದರಾಮಯ್ಯನವರಿಗೆ ಯಶಸ್ಸಾಗಲಿ, ಒಳ್ಳೆಯದಾಗಲಿ. ಅವರಿಗೆ ಇನ್ನೂ ಹೆಚ್ಚಿನ ಆರೋಗ್ಯ ಸಿಗಲಿ, ಜನರ ಸೇವೆ ಮಾಡುವ ಅವಕಾಶವನ್ನು ಭಗವಂತ ಅವರಿಗೆ ನೀಡಲಿ’
-ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿ
ದೀರ್ಘಕಾಲದ ಸಿಎಂ ಅವರಿಗೆ ಶುಭವಾಗಲಿ:
‘ರಾಜ್ಯದ ಎಲ್ಲ ವರ್ಗದ ಆಶಾಕಿರಣ, ಜನಪರ ಕಾಳಜಿ ಹಾಗೂ ಬದ್ಧತೆಯ ರಾಜಕಾರಣಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನರ ಆಶೀರ್ವಾದದಿಂದ ಸಿಎಂ ಆಗಿ ಸೇವೆ ಸಲ್ಲಿಸಿದ ಡಿ.ದೇವರಾಜ ಅರಸು ಅವರ ದಾಖಲೆ ಮುರಿದು, ದೀರ್ಘಕಾಲ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸುತ್ತಿರುವ ಈ ಸಂದರ್ಭದಲ್ಲಿ ಅವರಿಗೆ ಶುಭಾಶಯಗಳು. ರಾಜ್ಯದ ಜನತೆಯ ಆಶೀರ್ವಾದ ಅವರ ಮೇಲೆ ಸದಾ ಇರಲಿ. ಯಾವುದೇ ಕಪ್ಪು ಚುಕ್ಕೆ ಇಲ್ಲದಂತೆ ಶುದ್ದ ರಾಜಕಾರಣಿಯೂ ಆಗಿರುವ ಸಿದ್ದರಾಮಯ್ಯನವರು ನನ್ನಂತಹ ನೂರು ರಾಜಕಾರಣಿಗಳಿಗೆ ಅವರೇ ಮಾದರಿ’
-ಬಿ.ಝಡ್.ಝಮೀರ್ ಅಹ್ಮದ್ ಖಾನ್, ವಸತಿ ಸಚಿವ
‘ಭೂ ಸುಧಾರಣೆ ಮೂಲಕ ಶೋಷಿತರ ಸಬಲೀಕರಣದ ನಿಟ್ಟಿನಲ್ಲಿ ರಾಜಕೀಯ ಇತಿಹಾಸದಲ್ಲಿ ಅಮರ ಅಧ್ಯಾಯವೊಂದನ್ನು ರಚಿಸಿದ್ದ ದೇವರಾಜ ಅರಸು ಮಾದರಿಯಲ್ಲೇ ಆಡಳಿತದಲ್ಲಿ ಪಾರದರ್ಶಕತೆ, ಹಣಕಾಸು ಶಿಸ್ತು, ಸಂವಿಧಾನದ ಮೌಲ್ಯಗಳಿಗೆ ಅಚಲ ನಿಷ್ಠೆ ಹಾಗೂ ಜಾತಿ, ಧರ್ಮ, ಭಾಷೆಗಳ ಅತೀತವಾಗಿ ಎಲ್ಲರನ್ನು ಒಟ್ಟಿಗೆ ಕೊಂಡೊಯ್ಯುವ ಸಮನ್ವಯದ ರಾಜಕಾರಣವು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಾಯಕತ್ವದ ವಿಶಿಷ್ಟ ಗುರುತುಗಳು.ಅರಸು ದಾಖಲೆ ಸರಿಗಟ್ಟಿದ ಸಿದ್ದರಾಮಯ್ಯನವರ ಸಮಾಜಮುಖಿ ಮತ್ತು ಪ್ರಗತಿಪರ ದೃಷ್ಟಿಕೋನಕ್ಕೆ ಸಮಕಾಲೀನ ರಾಜಕೀಯ ರೂಪ ನೀಡಿದ್ದನ್ನು ಮುಂದಿನ ಇತಿಹಾಸ ಪುಟಗಳಲ್ಲಿ ಸ್ಮರಿಸುವುದು ನಿಶ್ಚಿತ. ಈ ಹಿನ್ನೆಲೆಯಲ್ಲಿ, ರಾಜ್ಯದ ಜನತೆಯ ಪರವಾಗಿ, ನಿಮ್ಮ ದೂರದೃಷ್ಟಿಯ ನಾಯಕತ್ವಕ್ಕೆ, ಜನಪರ ನೀತಿಗಳಿಗೆ ಹಾಗೂ ರಾಜ್ಯವನ್ನು ಸಮಾನತೆ, ಸೌಹಾರ್ದ ಮತ್ತು ಸಾಮಾಜಿಕ ನ್ಯಾಯದ ದಾರಿಯಲ್ಲಿ ದಿಟ್ಟವಾಗಿ ಮುನ್ನಡೆಸುತ್ತಿರುವ ನಿಮ್ಮ ಅವಿರತ ಸೇವೆಗೆ ಗೌರವಪೂರ್ವಕ ಹಾಗೂ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ಆಡಳಿತವು ಮುಂದಿನ ಪೀಳಿಗೆಗಳಿಗೆ ದಾರಿದೀಪವಾಗಲಿ’
-ಬಸವರಾಜ ರಾಯರೆಡ್ಡಿ, ಸಿಎಂ ಆರ್ಥಿಕ ಸಲಹೆಗಾರರು
ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಇಂತಹ ಅವಕಾಶಗಳು ಸಾಧ್ಯ :
ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜು ಅರಸು ಅವರ 2792 ದಿನಗಳನ್ನು ಸರಿಗಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಅಭಿನಂದನೆ ಸಲ್ಲಿಸಿದರು.
ಸದಾಶಿವನಗರದ ಗೃಹಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ದಾಖಲೆ ಮುರಿಯಲು ಸಿದ್ದರಾಮಯ್ಯನವರಿಗೆ ಅವಕಾಶ ಮಾಡಿಕೊಟ್ಟ ಕಾಂಗ್ರೆಸ್ ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ, ಕೆ.ಸಿ.ವೇಣುಗೋಪಾಲ್, ಸುರ್ಜೇವಾಲಾ ಅವರಿಗೂ ಅಭಿನಂದನೆ ತಿಳಿಸಿದರು
ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಇಂತಹ ಅವಕಾಶಗಳು ಸಾಧ್ಯ. ದೇವರಾಜ ಅರಸು ಅವರಿಗೂ ಅವಕಾಶ ನೀಡಲಾಗಿತ್ತು. ಈಗ ಸಿದ್ದರಾಮಯ್ಯ ಅವರಿಗೂ ಅವಕಾಶ ಕೊಟ್ಟಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಇಂತಹ ಬೆಳವಣಿಗೆಗಳನ್ನು ನೋಡಬಹುದು. ಬಡವರು ಮತ್ತು ಅಭಿವೃದ್ಧಿಯ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೆ ಇರುವ ದೂರದೃಷ್ಟಿಯ ಬದ್ಧತೆ ಮತ್ತು ಸಿದ್ಧಾಂತದಿಂದ ಇದೆಲ್ಲ ಸಾಧ್ಯವಾಗಿದೆ ಎಂದು ಹೇಳಿದರು.
"ರಾಜ್ಯ ರಾಜಕಾರಣದ ಚರಿತ್ರೆಯಲ್ಲೇ ಅತಿ ಹೆಚ್ಚು ಅವಧಿಯ ಮುಖ್ಯಮಂತ್ರಿಯಾಗಿ ಇತಿಹಾಸ ಸೃಷ್ಟಿಸುತ್ತಿರುವ ನಾಡಿನ ಮುಖ್ಯಮಂತ್ರಿಗಳು, ಸಾಮಾಜಿಕ ನ್ಯಾಯದ ಪ್ರತಿಪಾದಕರಾಗಿರುವ ಸಿದ್ದರಾಮಯ್ಯಅವರಿಗೆ ಶುಭಾಶಯಗಳು. ಈ ನಾಡು ಕಂಡ ದಮನಿತ ವರ್ಗಗಳ, ಶೋಷಿತ ಸಮುದಾಯಗಳ ಆಶಾಕಿರಣವಾಗಿದ್ದ "ಅರಸು"ಅವರ ದಾಖಲೆಯನ್ನು ಸರಿಗಟ್ಟಿದ ಸಿದ್ದರಾಮಯ್ಯನವರು ಸಂವಿಧಾನ, ಪ್ರಜಾಪ್ರಭುತ್ವ, ಸಮಾಜವಾದಿ ಮೌಲ್ಯಗಳ ರಕ್ಷಣೆಗೆ ಕಟ್ಟಿಬದ್ದರಾಗಿ, ಬಡ ಜನರ, ಹಿಂದುಳಿದ, ದೀನ-ದಲಿತರ ಆಶೋತ್ತರಗಳಿಗುಣವಾಗಿ ಮತ್ತಷ್ಟು ಈ ನಾಡಿಗೆ ತಮ್ಮ ಸೇವೆ ಸಲ್ಲಿಸಲಿ ಎಂದು ಹಾರೈಸುತ್ತೇನೆ"
ಬಿ.ಕೆ.ಹರಿಪ್ರಸಾದ್, ವಿಧಾನ ಪರಿಷತ್ ಸದಸ್ಯ
ಪೂರ್ಣಾವಧಿ ಮುಗಿಸುವ ವಿಶ್ವಾಸವಿದೆ: ‘ಸಿದ್ದರಾಮಯ್ಯ ಅವರು ಐದು ವರ್ಷ ಮುಖ್ಯಮಂತ್ರಿಯಾಗಿ ಇರುತ್ತಾರೆ ಎಂದು ಭಾವಿಸಿದ್ದೇವೆ. ಈಗಾಗಲೇ ಎರಡೂವರೆ ವರ್ಷ ಮುಗಿಸಿದ್ದಾರೆ. ಸಿಎಂ ಆಗಿ ಪೂರ್ಣಾವಧಿ ಮುಗಿಸುವ ವಿಶ್ವಾಸವಿದೆ ಎಂದು ಸ್ವತಃ ಅವರೇ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ, ನಮಗೆ ಇದೊಂದು ಹೆಮ್ಮೆಯ ವಿಷಯವಾಗಿದೆ. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಸಿದ್ದರಾಮಯ್ಯ ಸಾಕಷ್ಟು ಶ್ರಮಪಟ್ಟಿದ್ದಾರೆ, ಹೋರಾಟ ಮಾಡಿದ್ದಾರೆ. ಸಿದ್ದರಾಮಯ್ಯನವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ’
-ಸತೀಶ್ ಜಾರಕಿಹೊಳಿ, ಲೋಕೋಪಯೋಗಿ ಸಚಿವ
ಸಿದ್ದರಾಮಯ್ಯ ಆಡಳಿತಕ್ಕೆ 10ಕ್ಕೆ 10 ಅಂಕ ನೀಡುತ್ತೇನೆ: ‘ದೇವರಾಜ ಅರಸು ಆಗಲಿ ಸಿದ್ದರಾಮಯ್ಯ ಅವರಾಗಲಿ ಬಡವರು, ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಶ್ರಮಿಸಿದವರು. ಸಮಾಜವಾದಿ ಹಿನ್ನೆಲೆಯಿಂದ ಬಂದ ಸಿದ್ದರಾಮಯ್ಯ ಅವರಿಂದ ಪಕ್ಷಕ್ಕೆ ಹಾಗೂ ರಾಜ್ಯಕ್ಕೆ ಸಾಕಷ್ಟು ಅನುಕೂಲವಾಗಿದೆ. ಹೀಗಾಗಿ ಸಿದ್ದರಾಮಯ್ಯ ಆಡಳಿತಕ್ಕೆ 10ರ ಪೈಕಿ ಅಂಕ ನೀಡುವುದಾದರೆ 10ಕ್ಕೆ 10 ನೀಡುತ್ತೇನೆ. ಡಿ.ದೇವರಾಜ ಅರಸು ಹಿಂದುಳಿದವರ ನಾಯಕ ಎಂದೇ ಖ್ಯಾತಿ ಪಡೆದವರು. ಅದೇ ರೀತಿ ಸಿದ್ದರಾಮಯ್ಯ ಕೂಡ ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರು ಹಾಗೂ ಬಡವರ ಪರವಾದ ನಾಯಕರಾಗಿದ್ದು, ಇಬ್ಬರ ಕೊಡುಗೆಯೂ ಅಪಾರ.
-ಎಂ.ಬಿ.ಪಾಟೀಲ್, ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ







