ಕಾವೇರಿ ನದಿ ನೀರು ಹಂಚಿಕೆ ವಿಚಾರ | ಶಾಶ್ವತ-ವೈಜ್ಞಾನಿಕವಾದ ಪರಿಹಾರ ಸೂತ್ರ ಬೇಕು : ಸಿದ್ದರಾಮಯ್ಯ

ಬೆಂಗಳೂರು : ಕಾವೇರಿ ನದಿ ನೀರಿನ ವಿಚಾರಕ್ಕೆ ಸಂಬಂಧಿಸಿದಂತೆ ಶಾಶ್ವತ ಹಾಗೂ ವೈಜ್ಞಾನಿಕವಾದ ಪರಿಹಾರ ಸೂತ್ರ ರಾಜ್ಯ ಸರಕಾರಕ್ಕೆ ಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.
ಕಾವೇರಿ ನದಿ ನೀರಿನ ವಿಷಯಕ್ಕೆ ಸಂಬಂಧಿಸಿದಂತೆ ರವಿವಾರ ಇಲ್ಲಿನ ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ನಡೆದ ಸರ್ವ ಪಕ್ಷಗಳ ಸಭೆಯಲ್ಲಿ ಪ್ರಸ್ತಾಪಿಸಿದ ಅವರು, ಕಾವೇರಿ ವಿವಾದ ಆಗಾಗ ಎದುರಾಗುವುದರಿಂದ ಸರಕಾರಕ್ಕೆ ತಲೆನೋವು ತಪ್ಪಿದ್ದಲ್ಲ. ಹೀಗಾಗಿ ಶಾಶ್ವತ ಹಾಗೂ ವೈಜ್ಞಾನಿಕವಾದ ಪರಿಹಾರ ಸೂತ್ರ ಬೇಕಿದೆ ಎಂದರು.
ಮಳೆ ಕೈ ಕೊಟ್ಟ ಸಂದರ್ಭದಲ್ಲಿ ಕಾವೇರಿ ನದಿ ನೀರಿನ ವಿಚಾರದಲ್ಲಿ ಸಭೆ ಕರೆಯುವ ವಾಡಿಕೆ ಇದೆ. 76 ವರ್ಷಗಳಲ್ಲಿ 25 ಬಾರಿ ಸಭೆ ಕರೆದು ಚರ್ಚೆ ಮಾಡಲಾಗಿದೆ. ನಾನು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಎರಡು ಬಾರಿ ಸಭೆ ನಡೆದಿದೆ. ಪ್ರಸ್ತುತ ಕೊಡಗು ಸೇರಿದಂತೆ ವಿವಿಧೆಡೆ ಮಳೆ ಆಗುತ್ತಿದ್ದು ಕಬಿನಿ, ಹಾರಂಗಿ ಜಲಾಶಯ ಭರ್ತಿ ಆಗಿದೆ. ಕೆಆರ್ ಎಸ್ ಅಣೆಕಟ್ಟೆಯಲ್ಲಿ 19 ಟಿಎಂಸಿ ನೀರಿದೆ. ಆದರೆ, ಕುಡಿಯುವ ನೀರಿಗಾಗಿ ನಾವು ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದು ಅವರು ಹೇಳಿದರು.
ನೀರಿನ ಸಂಗ್ರಹಣೆ ಬಗ್ಗೆ ಕೇಂದ್ರ ಸರಕಾರ, ನದಿ ನೀರು ಪ್ರಾಧಿಕಾರ ಹಾಗೂ ತಮಿಳುನಾಡಿಗೆ ಮಾಹಿತಿ ಇದೆ. ಆದರೂ ಕದ್ದುಮುಚ್ಚಿ ತಮಿಳುನಾಡಿಗೆ ನೀರು ಬಿಡಲಾಗುತ್ತಿದೆ ಎಂಬ ಆರೋಪ ಬಂದಿದೆ. ಇದು ಸುಳ್ಳು. ಇದ್ದಾಗ ಮಾತ್ರ ತಮಿಳುನಾಡಿಗೆ ಕೊಡಲು ಸಾಧ್ಯ. ಆದರೂ ಪ್ರಾಧಿಕಾರದ ಆದೇಶ ಪ್ರಕಾರ ನೀರು ಕೊಡಲೇಬೇಕಾಗುತ್ತದೆ. ಈ ವಿಚಾರದಲ್ಲಿ ಸುಪ್ರೀಂಕೋರ್ಟ್‍ಗೆ ಹೋಗುವುದರಿಂದ ಪ್ರಯೋಜನ ಆಗದು. ಈ ಹಿಂದೆಯೂ ಅರ್ಜಿ ವಜಾ ಆಗಿದೆ ಎಂದು ಅವರು ತಿಳಿಸಿದರು.
ಸಂಕಷ್ಟ ಪರಿಹಾರ ಸೂತ್ರ ಆಗಲೇಬೇಕು. ಇಲ್ಲದಿದ್ದರೆ ರಾಜ್ಯ ಮತ್ತು ರಾಜ್ಯದ ರೈತರ ಹಿತ ಕಾಯುವುದು ಕಷ್ಟ. ಆಗ ಸರಕಾರ ಸಂಕಷ್ಟಕ್ಕೆ ಗುರಿ ಆಗಬೇಕಾಗುತ್ತದೆ. ಇದು ಭಾವಾವೇಶದ ವಿಚಾರವೂ ಹೌದು. ಹೀಗಾಗಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ರೈತರ ನೆರವಿಗೆ ಧಾವಿಸುವುದು ಸರಕಾರದ ಕರ್ತವ್ಯ. ಕೇಂದ್ರ ಸರಕಾರ ಅಥವಾ ಸುಪ್ರೀಂ ಕೋರ್ಟ್ ಸಂಕಷ್ಟ ಪರಿಹಾರ ಸೂತ್ರ ರಚನೆ ಮಾಡುವುದು ಅಗತ್ಯ ಎಂದು ಅವರು ಹೇಳಿದರು.
ನಮ್ಮ ಕುಡಿಯುವ ನೀರು ಹಾಗೂ ಬೆಳೆಗಳಿಗೆ ಅಗತ್ಯವಿರುವ ನೀರಿನ ಹಿತಾಸಕ್ತಿಯನ್ನು ಕಾಯ್ದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಬೇಕು. ಅದಕ್ಕೆ ಮೊದಲ ಆದ್ಯತೆ ನೀಡಬೇಕು. ಹೆಚ್ಚುವರಿ ನೀರು ಹೋಗುವುದು ಹೋಗಲಿ. ಕೆಆರ್‌ಎಸ್‍ಗೆ ಈಗ ಒಳಹರಿವು ಹೆಚ್ಚಾಗಿದೆ. ಅದು ಎಲ್ಲಿಯವರೆಗೆ ತುಂಬುವುದಿಲ್ಲವೋ ಅಲ್ಲಿಯವರೆಗೂ ಅಲ್ಲಿಂದ ನೀರು ಬಿಡಬೇಡಿ. ನಮ್ಮ ರೈತರಿಗೆ, ಕೆನಾಲ್‍ಗೆ, ಕೆರೆಗಳಿಗೆ ನೀರು ಬಿಡಿ, ಕುಡಿಯುವ ನೀರಿಗೆ ನೀರು ಬಿಡಿ.
-ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ
ಕಾವೇರಿ ಜಲಾನಯನದಲ್ಲಿ ದೊಡ್ಡ ಕೊರತೆ ಇದೆ. ಮಳೆಗಾಲದ ಕೊನೆಯ ಘಟ್ಟಕ್ಕೆ ಬರುತ್ತಿರುವುದರಿಂದ ಅದನ್ನು ಮುಂದೆ ಹೇಗೆ ಹೊಂದಾಣಿಕೆ ಮಾಡಬೇಕು ಎಂಬುದು ಸವಾಲಾಗಿದೆ. ಕಾನೂನು ದೃಷ್ಟಿಯಿಂದ ಚರ್ಚೆ ಆಗಿದೆ. ಕಾನೂನು ನಡೆ ಬಗ್ಗೆ ಗಂಭೀರ ಚರ್ಚೆ ನಡೆಯಬೇಕಾಗಿದೆ. ಶಾಶ್ವತ ಪರಿಹಾರದ ಅಗತ್ಯ ಇದೆ. ಮಳೆ ಬರದಿದ್ದಾಗಲೆಲ್ಲಾ ಈ ಸಮಸ್ಯೆ ಉಲ್ಬಣಿಸುತ್ತಿರುತ್ತದೆ. ಇದಕ್ಕೆ ಶಾಶ್ವತ ಪರಿಹಾರ ಬೇಕಾಗಿದೆ.
-ಡಿ.ವಿ.ಸದಾನಂದಗೌಡ, ಮಾಜಿ ಮುಖ್ಯಮಂತ್ರಿ






