ಸಿದ್ದರಾಮಯ್ಯ ಸಂಪುಟದಲ್ಲಿದ್ದ 12 ಮಂದಿಗೆ ತಪ್ಪಿದ ಸ್ಥಾನ

ಸಿದ್ದರಾಮಯ್ಯ
ಬೆಂಗಳೂರು : ಗದ್ದಲ, ಗೊಂದಲದ ನಡುವೆಯೇ ಸಂಪುಟ ವಿಸ್ತರಣೆಯಾಗಿದ್ದು, ಒಟ್ಟು ಸಂಪುಟವನ್ನು ಗಮನಿಸಿದರೆ ಹಿಂದಿನ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದ ಒಟ್ಟು 12 ಮಂದಿ ಹಿರಿಯರಿಗೆ ಸಿಎಂ ಡಿ.ಕೆ.ಶಿವಕುಮಾರ್ ಸರಕಾರದಲ್ಲಿ ಸಚಿವ ಸ್ಥಾನ ಕೈ ತಪ್ಪಿದೆ. ಇದು ಕಾಂಗ್ರೆಸ್ ಪಾಳಯದಲ್ಲಿ ಹಿರಿಯ ಶಾಸಕರನ್ನು ಕಡೆಗಣಿಸಲಾಗುತ್ತಿದೆ ಎನ್ನುವ ಅಸಮಾಧಾನಕ್ಕೆ ಕಾರಣವಾಗಿದೆ.
ಸಿದ್ದರಾಮಯ್ಯ ಸಂಪುಟದಲ್ಲಿದ್ದ ಹಿರಿಯ ಶಾಸಕರಾದ ಎಚ್.ಕೆ.ಪಾಟೀಲ್, ದಿನೇಶ್ ಗುಂಡೂರಾವ್, ಡಾ.ಎಚ್.ಸಿ.ಮಹದೇವಪ್ಪ, ಶಿವಾನಂದ್ ಪಾಟೀಲ್, ಶರಣಬಸಪ್ಪ ದರ್ಶನಪುರ, ಮಂಕಾಳು ವೈದ್ಯ, ರಹೀಂ ಖಾನ್, ಆರ್.ಬಿ.ತಿಮ್ಮಾಪೂರ್, ಕೆ.ವೆಂಕಟೇಶ್, ಕೆ.ಎನ್.ರಾಜಣ್ಣ, ಲಕ್ಷ್ಮಿ ಹೆಬ್ಬಾಳ್ಕರ್, ಡಾ.ಎಂ.ಸಿ. ಸುಧಾಕರ್, ಎನ್.ಎಸ್.ಭೋಸರಾಜು ಸೇರಿ 12 ಮಂದಿಗೆ ಡಿಕೆಶಿ ಸಂಪುಟದಲ್ಲಿ ಸಚಿವ ಸ್ಥಾನದಿಂದ ವಂಚಿತರಾಗಿದ್ದಾರೆ.
ಇನ್ನು, ನೂತನ ಸಚಿವರ ಅಧಿಕೃತ ಪಟ್ಟಿಯಲ್ಲಿ ಶಾಸಕ ಮಂಕಾಳು ವೈದ್ಯ ಅವರ ಹೆಸರು ಪ್ರಕಟವಾಗಿದ್ದರೂ, ಕೊನೆಯ ಕ್ಷಣದಲ್ಲಿ ಅವರ ಬದಲಿಗೆ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಸಚಿವ ಸ್ಥಾನ ನೀಡಲಾಗಿದ್ದು, ಈ ಬೆಳವಣಿಗೆ ಕಾಂಗ್ರೆಸ್ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್ನಲ್ಲಿ ಮೂರ್ನಾಲ್ಕು ಬಾರಿ ಶಾಸಕರಾಗಿ, ಸಚಿವರಾಗಿದ್ದವವರನ್ನು ಕಡೆಗಣಿಸಿ ಹೊಸಬರಿಗೆ ಮಣೆ ಹಾಕಲಾಗುತ್ತಿದೆ. ಇಲ್ಲಿ ಮುತ್ಸದ್ಧಿತನ ಹಾಗೂ ಹಿರಿತನಕ್ಕೆ ಬೆಲೆ ಇಲ್ಲದಂತಾಗಿದೆ ಎಂದು ಮಾಜಿ ಸಚಿವರ ವಲಯದಲ್ಲಿ ಬೇಸರ ವ್ಯಕ್ತವಾಗುತ್ತಿದೆ.






