ದುರುದ್ದೇಶದಿಂದ ರಾಹುಲ್ ಗಾಂಧಿ ಮೇಲೆ ಪ್ರಕರಣ ದಾಖಲು : ಸಿದ್ದರಾಮಯ್ಯ

ಬೆಂಗಳೂರು : ಯಾರು ಅಸ್ಪೃಶ್ಯತೆ ಆಚರಣೆ ಮಾಡಿದ್ದಾರೋ, ಅವರ ಮೇಲೆ ಪ್ರಕರಣ ದಾಖಲಿಸಬೇಕು. ಆದರೆ ಕೇಂದ್ರ ಸರಕಾರ ದುರುದ್ದೇಶಪೂರ್ವಕವಾಗಿ ರಾಹುಲ್ ಗಾಂಧಿಯವರ ವಿರುದ್ಧ ಕ್ರಮಕ್ಕೆ ಮುಂದಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ರಾಹುಲ್ ಗಾಂಧಿ ಅವರ ವಿರುದ್ಧ ಉತ್ತರಾಖಂಡದಲ್ಲಿ ಎಫ್‍ಐಆರ್ ದಾಖಲಿಸಿರುವುದನ್ನು ಖಂಡಿಸಿ, ಬುಧವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ಕೆಪಿಸಿಸಿ ವತಿಯಿಂದ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರು ಯಾವ ತಪ್ಪು ಮಾಡದಿದ್ದರೂ ಅವರ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ಇದು ಘನ ಘೋರ ಅನ್ಯಾಯ ಎಂದರು.
ಉತ್ತರಾಖಂಡದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಜಾಗವನ್ನು ಶುದ್ಧೀಕರಣ ಮಾಡಲಾಗಿದೆ. ಇದನ್ನು ಪ್ರಶ್ನೆ ಮಾಡಿದ್ದೇ ಅಪರಾಧ ಎಂಬಂತೆ ರಾಹುಲ್ ಗಾಂಧಿಯವರ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ಬಾಷಣ ಮಾಡಿದ ಜಾಗದ ಶುದ್ಧೀಕರಣ ಸಂವಿಧಾನ ವಿರೋಧಿ ಕೆಲಸ. ಅಸ್ಪೃಶ್ಯತೆಗೆ ಅವಕಾಶ ಇಲ್ಲ ಎಂದು ಸಂವಿಧಾನ ಹೇಳಿದೆ. ಹೀಗಾಗಿ ಇದು ಸಂವಿಧಾನಕ್ಕೆ ಮಾಡಿದ ಅಪಚಾರ ಎಂದರು.
ಭಾಷಣ ಮಾಡಿದ ಸ್ಥಳ ಶುದ್ಧೀಕರಣ ಮಾಡುವುದು ಖರ್ಗೆ ಅವರಿಗೆ ಮಾಡಿದ ಅಪಮಾನ ಮಾತ್ರವಲ್ಲ. ಎಫ್‍ಐಆರ್ ದಾಖಲಿಸುವ ಮೂಲಕ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿಯವರನ್ನೂ ಅವಮಾನಿಸುವ ಕೆಲಸವನ್ನು ಪೊಲೀಸರು ಮಾಡಿದ್ದಾರೆ. ರಾಹುಲ್ ಗಾಂಧಿ ಅವರೇನು ತಪ್ಪು ಮಾಡಿದ್ದಾರೆ. ಶುದ್ಧೀಕರಣವನ್ನು ಪ್ರಶ್ನಿಸಿದ್ದಾರೆ ಅಷ್ಟೇ. ಇಷ್ಟಕ್ಕೆ ದಲಿತರ ಮೇಲಿನ ದೌರ್ಜನ್ಯ ಪ್ರಕರಣ ದಾಖಲಿಸಲಾಗಿದೆ. ಇದು ಅತ್ಯಂತ ಖೇದಕರ ಎಂದರು.
ಏನಾದರೂ ಮಾಡಿ ರಾಹುಲ್ ಅವರ ಬಾಯಿ ಮುಚ್ಚಿಸಬೇಕು ಎಂದು ಬಿಜೆಪಿ ತೀರ್ಮಾನಿಸಿದಂತಿದೆ. ಈ ಹಿಂದೆ ಲೋಕಸಭೆಯಲ್ಲಿ ಕೇಂದ್ರ ಸರಕಾರವನ್ನು ಟೀಕೆ ಮಾಡಿದಾಗಲೂ ರಾಹುಲ್ ಗಾಂಧಿಯವರ ಮೇಲೆ ಪ್ರಕರಣ ದಾಖಲಾಗಿಸಲಾಗಿತ್ತು. ಅವರ ಸದಸ್ಯತ್ವವನ್ನೂ ರದ್ದು ಮಾಡಿದ್ದರು. ಕೊನೆಗೆ ಕಾನೂನಿನ ಮೊರೆ ಹೋದಾಗ ನ್ಯಾಯಾಲಯ ಪ್ರಕರಣ ರದ್ದು ಮಾಡಿತು ಎಂದು ಹೇಳಿದರು.
ರಾಹುಲ್ ಗಾಂಧಿಯವರು ಸಂವಿಧಾನದ ಪರ, ಅಸ್ಪೃಶ್ಯತೆ ವಿರುದ್ಧ ಇದ್ದಾರೆ. ಆದರೆ ಮನುವಾದಿಗಳಾದ ಬಿಜೆಪಿಯವರು ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಬಿಜೆಪಿಯವರಿಗೆ ಸಂವಿಧಾನದಲ್ಲಿ ನಂಬಿಕೆ ಇಲ್ಲ. ಅಧಿಕಾರದಲ್ಲಿರಲು ಬಿಜೆಪಿಯವರು ನಾಲಾಯಕ್. ನಾವೆಲ್ಲ ರಾಹುಲ್ ಗಾಂಧಿಯವರ ಜೊತೆಗೆ ಇರುತ್ತೇವೆ. ಅವರ ಹೋರಾಡುವ ಕೈಗಳನ್ನು ಬಲಪಡಿಸುತ್ತೇವೆ ಎಂದರು.
ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಯುವ ಕಾಂಗ್ರೆಸ್ ಹಾಗೂ ಎನ್‍ಎಸ್‍ಯುಐ ಕಾರ್ಯಕರ್ತರು ಬಿಜೆಪಿ ನಾಯಕರಿಗೆ ಕಪ್ಪು ಬಾವುಟ ಪ್ರದರ್ಶಿಸಬೇಕು. ಆಗ ನೀವು ನಿಜವಾದ ಕಾರ್ಯಕರ್ತರು ಎನಿಸಿಕೊಳ್ಳುತ್ತೀರಿ. ಸಂವಿಧಾನ ಉಳಿಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು. ಈ ವಿಚಾರದಲ್ಲಿ ನಾವು ಎಡವಿದ್ದಾಗ ಝೆನ್‍ಜಿ ತಲೆಮಾರಿನ ಯುವಕರು ಪ್ರಧಾನಿ ನರೇಂದ್ರ ಮೋದಿ ಅಮಿತ್ ಶಾ ಅವರನ್ನು ತಡೆದರು. ಆ ಕೆಲಸವನ್ನು ನೀವು ಮಾಡದಿದ್ದರೆ ದೇಶದ ಭವಿಷ್ಯ ಕರಾಳವಾಗುತ್ತದೆ ಎಂದರು.
ನಾವು ಸಂವಿಧಾನವನ್ನು ಅಂಗೀಕರಿಸಿದಾಗ ಬಿಜೆಪಿಯವರು ರಾಮಲೀಲಾ ಮೈದಾನದಲ್ಲಿ ಸಂವಿಧಾನ, ರಾಷ್ಟ್ರಧ್ವಜ ಹಾಗೂ ರಾಷ್ಟ್ರಗೀತೆ ವಿರುದ್ಧ ಪ್ರತಿಭಟಿಸಿದ್ದರು. ಜಾತಿ ಶ್ರೇಣಿಕರಣದಲ್ಲಿ ನಂಬಿಕೆ ಇಟ್ಟಿರುವ ಬಿಜೆಪಿ ಹಾಗೂ ಆರೆಸ್ಸೆಸ್‍ನವರು ಎಂದಿಗೂ ದಲಿತರು ಹಾಗೂ ಶೂದ್ರರನ್ನು ಒಪ್ಪಿಕೊಳ್ಳುವುದಿಲ್ಲ. ಸಂವಿಧಾನದಿಂದ ಬಂದಿರುವ ಹಕ್ಕುಗಳನ್ನು ಕಾಪಾಡಿ ಸ್ವಾಭಿಮಾನದಿಂದ ಬದುಕಬೇಕು ಎಂದು ಕರೆ ನೀಡಿದರು.
ಪ್ರತಿಭಟನೆಯಲ್ಲಿ ಎಐಸಿಸಿ ಕಾರ್ಯದರ್ಶಿ ಗೋಪಿನಾಥ್ ಪಳನಿಯಪ್ಪನ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ, ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ, ಮತ್ತಿತರರು ಹಾಜರಿದ್ದರು.






