ಕಾರು ತೆಗೆಸಿದ್ದಕ್ಕೆ ಡಿಸಿಪಿ ವಿರುದ್ಧ ಸಿದ್ದರಾಮಯ್ಯ ಆಕ್ರೋಶ

ಬೆಂಗಳೂರು : ವಿಧಾನಸಭೆ ಕಲಾಪ ಮುಗಿಸಿ ತೆರಳುತ್ತಿದ್ದ ವೇಳೆ ತಮ್ಮ ಕಾರನ್ನು ತೆಗೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನಸೌಧದ ಭದ್ರತಾ ಉಸ್ತುವಾರಿ ಉಪಪೊಲೀಸ್ ಆಯುಕ್ತ (ಡಿಸಿಪಿ) ಯೋಗೇಶ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಸೋಮವಾರ ಸದನದಿಂದ ಹೊರ ಬಂದ ಸಿದ್ದರಾಮಯ್ಯ ಪಶ್ಚಿಮ ದ್ವಾರದ(ಕೆಂಗಲ್ ಹನುಮಂತಯ್ಯ ಗೇಟ್) ಮೆಟ್ಟಿಲುಗಳನ್ನು ಇಳಿದು ಬಂದಾಗ, ಅವರ ಕಾರು ಅಲ್ಲಿ ಇರಲಿಲ್ಲ. ವಿಚಾರಿಸಿದಾಗ ಡಿಸಿಪಿ ಯೋಗೇಶ್ ಸೂಚನೆಯಂತೆ ಕಾರನ್ನು ಪಾರ್ಕಿಂಗ್ ಸ್ಥಳಕ್ಕೆ ಕಳುಹಿಸಿರುವುದು ಗೊತ್ತಾಗಿದೆ. ಈ ವೇಳೆ ಗೇಟ್ ಬಳಿ ಕಾರಿಗಾಗಿ ಕೆಲಕಾಲ ಕಾಯಬೇಕಾಗಿ ಬಂದಿದ್ದರಿಂದ ಸಿದ್ದರಾಮಯ್ಯ, ಅಸಮಾಧಾನ ವ್ಯಕ್ತಪಡಿಸಿದರು.
ತಮ್ಮ ಕಾರಿನ ಚಾಲಕನಿಗೆ ‘ಏಕೆ ವಿಳಂಬವಾಯಿತಲ್ಲ’ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಕಾರನ್ನು ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಲು ಡಿಸಿಪಿ ಸೂಚಿಸಿದ ವಿಚಾರ ತಿಳಿಸಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಡಿಸಿಪಿ ಯೋಗೇಶ್‍ರನ್ನು ಹತ್ತಿರ ಕರೆದ ಸಿದ್ದರಾಮಯ್ಯ, ಸಿಬ್ಬಂದಿಯ ಸಮ್ಮುಖದಲ್ಲೇ ತರಾಟೆಗೆ ತೆಗೆದುಕೊಂಡರು. ‘ನನ್ನ ಕಾರನ್ನು ಇಲ್ಲಿಂದ ಯಾಕೆ ತೆಗೆಸಿದೆ?’ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಅಧಿಕಾರಿಗಳ ನಡವಳಿಕೆಯ ಬಗ್ಗೆ ಎಚ್ಚರಿಕೆ ನೀಡಿದರು.
‘ನಿನ್ನ ಮೇಲೆ ಆರೋಪಗಳಿವೆ. ವಿಧಾನಸೌಧಕ್ಕೆ ಬರುವ ಜನಪ್ರತಿನಿಧಿಗಳು ಹಾಗೂ ಶಾಸಕರನ್ನು ನೀನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂಬ ದೂರುಗಳು ಬಂದಿವೆ’ ಎಂದು ಸಿದ್ದರಾಮಯ್ಯ ದೂರಿದರು. ‘ಜನಪ್ರತಿನಿಧಿಗಳ ಜೊತೆ ನಡೆದುಕೊಳ್ಳುವ ರೀತಿ ಇದಲ್ಲ. ಇನ್ನು ಮುಂದೆ ಎಚ್ಚರಿಕೆಯಿಂದ ಕೆಲಸ ಮಾಡಬೇಕು’ ಎಂದು ಡಿಸಿಪಿಗೆ ಎಚ್ಚರಿಕೆ ನೀಡಿದರು.
ಈ ಘಟನೆಯಿಂದ ಕೆಲಕಾಲ ವಿಧಾನಸೌಧದ ಪಶ್ಚಿಮ ದ್ವಾರದ ಬಳಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಅನಂತರ ಕಾರು ಸ್ಥಳಕ್ಕೆ ಆಗಮಿಸಿದ ಬಳಿಕ ಸಿದ್ದರಾಮಯ್ಯ ತಮ್ಮ ಕಾವೇರಿ ನಿವಾಸದತ್ತ ಪ್ರಯಾಣ ಬೆಳೆಸಿದರು.






