ಸಿದ್ದರಾಮಯ್ಯ ಎಂದಿಗೂ ಒಂಟಿಯಲ್ಲ: ಡಾ.ಜಿ.ಪರಮೇಶ್ವರ್

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಕೀಯವಾಗಿ ಒಂಟಿಯಾಗಿದ್ದಾರೆ ಎನ್ನುವ ಮಾತು ಸುಳ್ಳು. ಅವರು ಎಂದಿಗೂ ಒಂಟಿಯಲ್ಲ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಎಲ್ಲರೂ ಅವರೊಂದಿಗೆ ಇದ್ದಾರೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕ ಬದುಕಿನಲ್ಲಿ ನಡೆಯಬಾರದಂತಹ ಘಟನೆಗಳನ್ನು ಎಲ್ಲರೂ ಖಂಡಿಸಬೇಕು. ಈ ವಿಚಾರದಲ್ಲಿ ನಾವೆಲ್ಲರೂ ಖಂಡಿಸಿದ್ದೇವೆ. ಸಿದ್ದರಾಮಯ್ಯ ಅವರು ಒಂಟಿಯಾಗಲು ಸಾಧ್ಯವಿಲ್ಲ ಎಂದರು.
ತನಿಖೆ ನಡೆಯುತ್ತಿರುವ ವಿಚಾರದಲ್ಲಿ ಈಗಲೇ ಪ್ರತಿಕ್ರಿಯಿಸುವುದು ಸೂಕ್ತವಲ್ಲ. ತನಿಖೆ ಪೂರ್ಣಗೊಂಡು ಅದರ ವರದಿ ಹೊರಬಂದ ಬಳಿಕ ಸತ್ಯಾಂಶ ತಿಳಿಯಲಿದೆ ಎಂದ ಅವರು, ರಾಜಕೀಯವಾಗಿ ಗುರಿಯಾಗಿಸಿಕೊಂಡು ಒಬ್ಬರ ಹೆಸರಿಗೆ ಮಸಿ ಬಳಿಯುವ ಕೆಲಸವನ್ನು ಯಾರು ಸಹ ಮಾಡಬಾರದು.ಇದು ಖಂಡನೀಯ ನಡೆ ಎಂದು ತಿಳಿಸಿದರು.
ರಾಜ್ಯದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವ ಉದ್ಯಮಿಗಳು ಅರ್ಹ ಸ್ಥಳೀಯ ಕನ್ನಡಿಗರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಬೇಕು. ಕೈಗಾರಿಕೆಗಳಿಗೆ ಭೂಮಿ, ವಿದ್ಯುತ್, ನೀರು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಸರಕಾರ ಒದಗಿಸುತ್ತಿದ್ದು, ಅದಕ್ಕೆ ಅನುಗುಣವಾಗಿ ಅರ್ಹ ಕನ್ನಡಿಗರಿಗೆ ಉದ್ಯೋಗ ನೀಡುವ ಬದ್ಧತೆಯನ್ನು ಕೈಗಾರಿಕೆಗಳು ಪಾಲಿಸಬೇಕು ಎಂದು ಅವರು ಹೇಳಿದರು.
ಮೊದಲಿನಿಂದಲೂ ಈ ನೀತಿ ಜಾರಿಯಲ್ಲಿದ್ದು, ಅದನ್ನು ಎಲ್ಲ ಕೈಗಾರಿಕೆಗಳು ಪಾಲಿಸಬೇಕು.ಹೀಗಿರುವಾಗ ಸ್ಥಳೀಯರಿಗೆ ಉದ್ಯೋಗ ನೀಡುವುದು ಕೈಗಾರಿಕೆಗಳ ಜವಾಬ್ದಾರಿಯಾಗಿದೆ. ಅರ್ಹತೆ ಇಲ್ಲದವರಿಗೆ ಉದ್ಯೋಗ ನೀಡಬೇಕೆಂದು ಸರಕಾರ ಹೇಳುತ್ತಿಲ್ಲ. ಅಗತ್ಯ ವಿದ್ಯಾರ್ಹತೆ ಮತ್ತು ಕೌಶಲ ಹೊಂದಿರುವ ಕನ್ನಡಿಗರಿಗೆ ಅವರ ಅರ್ಹತೆಗೆ ತಕ್ಕಂತೆ ಉದ್ಯೋಗಾವಕಾಶಗಳನ್ನು ನೀಡಬೇಕು ಎಂಬುದು ಸರಕಾರದ ನಿಲುವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಕೆಲವು ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಅಟೆಂಡರ್ ಹಾಗೂ ಕೆಳಹಂತದ ಹುದ್ದೆಗಳನ್ನು ಮಾತ್ರ ನೀಡಲಾಗುತ್ತಿದೆ. ಈ ಪ್ರವೃತ್ತಿ ಸರಿಯಲ್ಲ. ಅರ್ಹತೆ ಹೊಂದಿರುವ ಕನ್ನಡಿಗರಿಗೆ ಅವರ ವಿದ್ಯಾರ್ಹತೆ ಮತ್ತು ಕೌಶಲಕ್ಕೆ ಅನುಗುಣವಾಗಿ ಸೂಕ್ತ ಹುದ್ದೆಗಳನ್ನು ನೀಡಬೇಕು. ಈ ವಿಚಾರದಲ್ಲಿ ಮುಖ್ಯಮಂತ್ರಿಯವರು ಸರಕಾರದ ಹಿಂದಿನ ಬದ್ಧತೆಯನ್ನೇ ಪುನರುಚ್ಚರಿಸಿದ್ದಾರೆ ಎಂದು ಅವರು ಹೇಳಿದರು.






