ಅಧಿಕಾರಕ್ಕಿಂತ ಪಕ್ಷದ ಶಿಸ್ತು ದೊಡ್ಡದು ಎಂಬುದನ್ನು ಸಿದ್ದರಾಮಯ್ಯ ತೋರಿಸಿದ್ದಾರೆ : ಸಚಿವ ದಿನೇಶ್ ಗುಂಡೂರಾವ್

Photo credit : X@dineshgrao
ಬೆಂಗಳೂರು : ರಾಜಕೀಯ ಸಿದ್ಧಾಂತಗಳನ್ನು ಮೀರಿದ ಧೀಮಂತ ನಾಯಕ, ಶೋಷಿತರ ಮತ್ತು ಬಡವರ ಧ್ವನಿಯಾಗಿ ಸದಾ ಮಿಡಿಯುವ ಸಿದ್ದರಾಮಯ್ಯ ಅವರಿಗೆ ಅಧಿಕಾರವಾಗಲಿ, ಕುರ್ಚಿಯಾಗಲಿ ಎಂದಿಗೂ ದೊಡ್ಡದಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಸಮಾಜಿಕ ಜಾಲತಾಣ ʼಎಕ್ಸ್ʼನಲ್ಲಿ ಪೋಸ್ಟ್ ಮಾಡಿರುವ ಅವರು, ಹೈಕಮಾಂಡ್ ಹಾಗೂ ಪಕ್ಷದ ತೀರ್ಮಾನಕ್ಕೆ ಸಂಪೂರ್ಣ ಬದ್ಧರಾಗಿ ಅವರು ಮುಖ್ಯಮಂತ್ರಿ ಸ್ಥಾನ ತ್ಯಜಿಸಿರುವುದು, ಅವರು ಅಧಿಕಾರಕ್ಕೆ ಅಂಟಿಕೊಂಡ ನಾಯಕನಲ್ಲ, ಬದಲಿಗೆ ಪಕ್ಷದ ಶಿಸ್ತು ಮತ್ತು ಸಿದ್ಧಾಂತಕ್ಕೆ ತಲೆಬಾಗುವ ಧೀಮಂತ ವ್ಯಕ್ತಿತ್ವದವರು ಎಂಬುದನ್ನು ಸಾಬೀತುಪಡಿಸಿದೆ ಎಂದು ತಿಳಿಸಿದ್ದಾರೆ.
ಬಡತನ ಮತ್ತು ಹಸಿವಿನ ನೋವನ್ನು ಹತ್ತಿರದಿಂದ ಅರಿತ ನಾಯಕನಾಗಿ ಸಿದ್ದರಾಮಯ್ಯ ಅವರು ‘ಹಸಿವು ಮುಕ್ತ ಕರ್ನಾಟಕ’ ಧ್ಯೇಯದೊಂದಿಗೆ ಜಾರಿಗೆ ತಂದ ‘ಅನ್ನಭಾಗ್ಯ’ ಯೋಜನೆ ರಾಷ್ಟ್ರ ಮಟ್ಟದಲ್ಲೇ ಮಾದರಿಯಾಗಿದೆ ಎಂದು ಹೇಳಿದರು. “ರಾಜ್ಯದ ಜನರ ಹೊಟ್ಟೆ ತಣಿಸಿ ‘ಅನ್ನರಾಮಯ್ಯ’ ಎಂಬ ಹೆಸರಿನಲ್ಲಿ ಜನರ ಹೃದಯದಲ್ಲಿ ಅವರು ನೆಲೆಸಿದ್ದಾರೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಾನು ಆಹಾರ ಮತ್ತು ನಾಗರಿಕ ಸರಬರಾಜು ಸಚಿವನಾಗಿದ್ದಾಗ, ಈ ಐತಿಹಾಸಿಕ ಯೋಜನೆಯನ್ನು ಜಾರಿಗೊಳಿಸುವ ಜವಾಬ್ದಾರಿಯನ್ನು ನನ್ನ ಮೇಲೆ ಇಟ್ಟು ಅವರು ವಿಶ್ವಾಸ ತೋರಿದ್ದರು ಎಂದು ನೆನಪಿಸಿಕೊಂಡರು.
ರಾಜ್ಯದ ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯ ಸೇವೆ ತಲುಪಬೇಕೆಂಬ ಉದ್ದೇಶದಿಂದ ಆರಂಭಿಸಲಾದ ‘108 ಕೇಂದ್ರೀಕೃತ ಕಮಾಂಡ್ ಆಂಡ್ ಕಂಟ್ರೋಲ್ ಸೆಂಟರ್’ ಉದ್ಘಾಟನೆಯೇ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಭಾಗವಹಿಸಿದ ಕೊನೆಯ ಸಾರ್ವಜನಿಕ ಕಾರ್ಯಕ್ರಮವಾಗಿತ್ತು ಎಂದು ಭಾವುಕರಾಗಿ ಹೇಳಿದ್ದಾರೆ.
ಕೊನೆಯ ಕ್ಷಣದವರೆಗೂ ಜನಸಾಮಾನ್ಯರ ಆರೋಗ್ಯ ಮತ್ತು ಕಲ್ಯಾಣಕ್ಕಾಗಿ ಮಿಡಿದ ಅವರ ಆಡಳಿತ ಸದಾ ಸ್ಮರಣೀಯ. ಕೋಮುವಾದಿಗಳ ವಿರುದ್ಧ ಎಂದೂ ರಾಜಿ ಮಾಡಿಕೊಳ್ಳದ ಗಟ್ಟಿ ನಿಲುವು ಹಾಗೂ ‘ಪಂಚ ಗ್ಯಾರಂಟಿ’ ಯೋಜನೆಗಳ ಯಶಸ್ವಿ ಅನುಷ್ಠಾನ, ಅವರ ‘ನುಡಿದಂತೆ ನಡೆಯುವ’ ಗುಣಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.
ವಿರೋಧ ಪಕ್ಷಗಳು ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸಲಾಗಿದೆ ಎಂಬ ಆರೋಪ ಮಾಡುತ್ತಿರುವುದು ಕೇವಲ ರಾಜಕೀಯ ಗಿಮಿಕ್ ಮಾತ್ರ ಎಂದು ತಿರುಗೇಟು ನೀಡಿದ ಅವರು, “ಸುದೀರ್ಘ ರಾಜಕೀಯ ಜೀವನದಲ್ಲಿ ನೈಜ ಸಮಾಜವಾದಿಯಾಗಿ ಬದುಕಿದ ಅವರ ನಡೆ ನಮಗೆಲ್ಲರಿಗೂ ಮಾದರಿ” ಎಂದರು.
ಕರ್ನಾಟಕದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಾಮಾಜಿಕ ನ್ಯಾಯದ ಆಡಳಿತ ಮುಂದುವರಿಯಬೇಕಾದರೆ ಸಿದ್ದರಾಮಯ್ಯ ಅವರು ರಾಜೀನಾಮೆಯ ಬಳಿಕವೂ ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯಬೇಕು. ಇಂತಹ ಶ್ರೇಷ್ಠ ಜನನಾಯಕರೊಂದಿಗೆ ಕೆಲಸ ಮಾಡಲು ಸಿಕ್ಕ ಅವಕಾಶ ನನ್ನ ಸೌಭಾಗ್ಯ ಎಂದು ಹೇಳಿದರು.






