5 ವರ್ಷ ಸಿದ್ದರಾಮಯ್ಯನವರೇ ಸಿಎಂ : ಗೃಹ ಸಚಿವ ಜಿ.ಪರಮೇಶ್ವರ್

ಗೃಹ ಸಚಿವ ಡಾ.ಜಿ.ಪರಮೇಶ್ವರ್
ಮೈಸೂರು : ಉಪಚುನಾವಣೆ ಫಲಿತಾಂಶ ರಾಜ್ಯದ ಕಾಂಗ್ರೆಸ್ ನಾಯಕತ್ವದ ಮೇಲೆ ಯಾವುದೇ ಪರಿಣಾಮ ಬೀರಲ್ಲ. ಸಿಎಂ ಬದಲಾವಣೆಗೂ ಉಪಚುನಾವಣೆ ಫಲಿತಾಂಶಕ್ಕೂ ಸಂಬಂಧವಿಲ್ಲ, ಸದ್ಯದ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರುತ್ತಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾವಣೆಗೂ ಉಪಚುನಾವಣೆ ಫಲಿತಾಂಶಕ್ಕೂ ಸಂಬಂಧವಿಲ್ಲ, ಈ ಚುನಾವಣೆ ಯಾವುದಕ್ಕೂ ಮಾನದಂಡ ಅಲ್ಲ. ಮುಂದಿನ ಚುನಾವಣೆಯ ದಿಕ್ಸೂಚಿಯೂ ಅಲ್ಲ. ಬಿಜೆಪಿ ಅವರು ಏನು ಬೇಕಾದರೂ ಹೇಳಲಿ ಎಂದರು.
ಸಿದ್ದರಾಮಯ್ಯ ಅವರ ಬದಲಾವಣೆ ನಾನು ಮಾಡುವುದಕ್ಕೆ ಆಗತ್ತಾ? ಬದಲಾವಣೆ ಮಾಡುವುದು ಹೈಕಮಾಂಡ್, ಸದ್ಯಕ್ಕೆ ಬದಲಾವಣೆ ಪ್ರಶ್ನೆಯೇ ಇಲ್ಲ. ಕೆಲ ಶಾಸಕರು ಅವರ ಅಭಿಪ್ರಾಯ ಹೇಳುತ್ತಿದ್ದಾರೆ. ಹೈಕಮಾಂಡ್ ಎಲ್ಲವನ್ನೂ ನೋಡುತ್ತಿದೆ. ಸದನದಲ್ಲಿ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. ನಮ್ಮ ಪಕ್ಷದ ಎಲ್ಲಾ ಶಾಸಕರಿಗೂ ಸಿಎಂ ಆಗುವ ಅರ್ಹತೆ ಇದೇ ಅಂತ. ಆದರೆ ಈಗ ಸಿಎಂ ಕುರ್ಚಿ ಖಾಲಿ ಇಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ 5 ವರ್ಷ ಸಿಎಂ ಆದರೆ ಡಿ.ಕೆ.ಶಿವಕುಮಾರ್ ಕಥೆ ಏನು ಎಂಬ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಡಿ.ಕೆ.ಶಿವಕುಮಾರ್ ನಮ್ಮ ನಾಯಕರು, ಪಕ್ಷದ ಅಧ್ಯಕ್ಷರು, ಡಿಸಿಎಂ ಕೂಡ ಆಗಿದ್ದಾರೆ. ಸದ್ಯಕ್ಕೆ ಯಾವುದೇ ಗೊಂದಲ ಇಲ್ಲ. ಕೆಲ ಶಾಸಕರು, ಪರಮೇಶ್ವರ್ ಹೇಳಿದ ತಕ್ಷಣ ಏನು ಆಗಲ್ಲ. ಎಲ್ಲವೂ ಹೈಕಮಾಂಡ್ ಗೆ ಬಿಟ್ಟಿದ್ದು ಎಂದರು.
ನೀವು ಸಿಎಂ ಆಗುವುದು ಯಾವಾಗ ಎಂಬ ಮಾಧ್ಯಮದ ಪ್ರಶ್ನೆಗೆ ಉತ್ತರ ನೀಡಿದ ಪರಮೇಶ್ವರ್, ಈಗ ಯಾಕೆ ಆ ಪ್ರಶ್ನೆ?ಅಭಿಮಾನಿಗಳು ಸಮಾನ್ಯವಾಗಿ ಅವರ ನಾಯಕರಿಗೆ ಸಿಎಂ ಆಗಲಿ ಎಂದು ಹೇಳುತ್ತಾರೆ. ಆದರೆ ಸಿಎಂ ಗಾದಿ ಖಾಲಿ ಇಲ್ಲವಲ್ಲ. ಸದ್ಯಕ್ಕೆ ಆ ಪ್ರಶ್ನೆಯೇ ಉದ್ಭವಿಸಲ್ಲ. 5 ವರ್ಷ ಸಿದ್ದರಾಮಯ್ಯ ಸಿಎಂ ಆಗಿರುತ್ತಾರೆ ಎಂದು ಸ್ಪಷ್ಟಪಡಿಸಿದರು.
ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ನಾವು ಈಗಾಗಲೇ ಗೆದ್ದಿದ್ದೇವೆ:
ರಾಜ್ಯದಲ್ಲಿ ನಡೆಯುತ್ತಿರುವ 2 ಕ್ಷೇತ್ರಗಳ ಉಪಚುನಾವಣೆಯಲ್ಲಿ ಈಗಾಗಲೇ ನಾವು ಗೆದ್ದಿದ್ದೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಎರಡು ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದ್ದೇವೆ. ಹೋದ ಕಡೆಯೆಲ್ಲ ಜನ ಬೆಂಬಲ ಚೆನ್ನಾಗಿದೆ. ನಮ್ಮ ಗ್ಯಾರೆಂಟಿಗಳು ನಮ್ಮ ಕೈಹಿಡಿಯುತ್ತದೆ. ಈ ಹಿನ್ನಲೆ ನಾವು ಈಗಾಗಲೇ ಎರಡು ಕ್ಷೇತ್ರದಲ್ಲಿ ಗೆದ್ದಿದ್ದೇವೆ. ಜನರು ನಮ್ಮ ಸರಕಾರದ ಪರವಾಗಿದ್ದಾರೆ ಎಂದು ಹೇಳಿದರು.







