ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದ ಪ್ರದೀಪ್ ಈಶ್ವರ್
ʼಒಂದಾನೊಂದು ಕಾಲದಲ್ಲಿ ರಾಜನ ಮಗ ರಾಜನಾದ ಕಥೆಯಲ್ಲ, ಸಿದ್ದರಾಮಯ್ಯನಾದ ಕಥೆʼ : ಶಾಸಕ ಹೇಳಿದ್ದೇನು?

ಬೆಂಗಳೂರು : ʼಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯʼ ಎಂದು ಶಾಸಕ ಪ್ರದೀಪ್ ಈಶ್ವರ್ ಘೋಷಣೆ ಕೂಗಿದ್ದಾರೆ.
ರವಿವಾರ ನಗರದ ಅರಮನೆ ಮೈದಾನದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಒಕ್ಕೂಟದ ರಜತ ಮಹೋತ್ಸವ, ಹಿಂದುಳಿದ ಜಾತಿಗಳ ಬೃಹತ್ ಜನ ಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.
ಅಧಿಕಾರ ಇದ್ದಾಗ ಒಂದು ರೀತಿ, ಅಧಿಕಾರ ಇಲ್ಲದಾಗ ಒಂದು ರೀತಿ ಅಲ್ಲ. ನನ್ನ ಎದೆಯಲ್ಲಿ ಅವತ್ತೂ, ಇವತ್ತೂ, ಸಿದ್ದರಾಮ ಹಾಗೂ ಶ್ರೀರಾಮ ಇದ್ದಾರೆ. ಇಡೀ ಭಾರತದಲ್ಲಿ ಪ್ರಶ್ನೆ ಮಾಡಲು ಆಗದಿರುವ ಹಿಂದುಳಿದ ನಾಯಕ ಇದ್ದರೆ, ಅದು ನಮ್ಮ ಸಿದ್ದರಾಮಯ್ಯ ಮಾತ್ರ ಎಂದು ಅಭಿಪ್ರಾಯಪಟ್ಟರು.
ಸಿದ್ದರಾಮಯ್ಯ ಅವರು ಕುರುಬರ ಆಸ್ತಿ ಮಾತ್ರ ಅಲ್ಲ. ಒಬಿಸಿ ಸಮುದಾಯಗಳ ಪ್ರತಿಯೊಬ್ಬ ವ್ಯಕ್ತಿಯ ಆಸ್ತಿ. 17 ಬಾರಿ ಬಜೆಟ್ ಮಂಡಿಸಿ, ರಾಜ್ಯವನ್ನು ನಡೆಸಿರುವುದು ನಮ್ಮ ಸಿದ್ದರಾಮಯ್ಯ. ಈ ರಾಜ್ಯವನ್ನು ಮುನ್ನಡೆಸಿದ್ದಾರೆ. ಮುಂದೆಯೂ ಮತ್ತೆ ನಡೆಸುತ್ತಾರೆ. ಒಂದಾನೊಂದು ಕಾಲದಲ್ಲಿ ರಾಜನ ಮಗ ರಾಜನಾದ ಕಥೆಯಲ್ಲ. ಸಿದ್ದರಾಮಯ್ಯನಾದ ಕಥೆ ಎಂದು ಹೇಳಿದರು.
ನಾನು ರಾಜಕಾರಣಕ್ಕೆ ಬಂದು ಮೂರು ವರ್ಷವಾಗಿದೆ. ನನಗೆ ಎಷ್ಟೊಂದು ಟಾರ್ಚರ್ ಆಗಿದೆ. ಆದರೆ ಸಿದ್ದರಾಮಯ್ಯ ಅವರು 45 ವರ್ಷ ಹೇಗೆ ಸಹಿಸಿಕೊಂಡಿದ್ದಾರೆ. ಒಂದೊಂದು ಬಾರಿ ಯಾಕಾದರೂ ರಾಜಕಾರಣಕ್ಕೆ ಬಂದಿದ್ದೇನೆ ಎನಿಸುತ್ತದೆ. ಆದರೆ ಸಿದ್ದರಾಮಯ್ಯ ಅವರು 45 ವರ್ಷ ಸಹಿಸಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.






